ಕುಂದಾಪ್ರ ಡಾಟ್ ಕಾಂ ಸುದ್ದಿ
ಕುಂದಾಪುರ: ಕಾಂಗ್ರೆಸ್ ಪಕ್ಷಕ್ಕೆ ಒಬ್ಬರೇ ನಾಯಕರಲ್ಲ. ಒಬ್ಬರು ಹೋದರೆ ಮತ್ತೊಬ್ಬರು ಬರುತ್ತಾರೆ. ಪಕ್ಷ ಸೋಲಿಗೆ ಒಂದೊಂದು ಘಟನೆಗಳು ಕಾರಣವಾಗುತ್ತವೇ ಹೊರತೂ ವ್ಯಕ್ತಿಯಲ್ಲ ನಡೆಯಲ್ಲ. ಜೆಪಿ ಹೆಗ್ಡೆಯವರನ್ನು ಮತ್ತೆ ಪಕ್ಷಕ್ಕೆ ಕರೆರದ್ದು ನಿಜ. ಆದರೆ ಅವರಿಂದಲೇ ಕಾಂಗ್ರೆಸ್ ಅಲ್ಲ ಎಂದು ಬೈಂದೂರು ಕ್ಷೇತ್ರದ ಶಾಸಕ ಕೆ. ಗೋಪಾಲ ಪೂಜಾರಿ ತಿರುಗೇಟು ನೀಡಿದ್ದಾರೆ.
ಉಡುಪಿ ಜಿಲ್ಲೆಯಲ್ಲಿ ಜೆಪಿ ಇಲ್ಲದಿದ್ದರೆ ಕಾಂಗ್ರೆಸ್ ಮುಳುಗುತ್ತದೆ ಎಂದು ಅಂದಿನ ಜಿಲ್ಲಾಧ್ಯಕ್ಷ ಗೋಪಾಲ ಪೂಜಾರಿ ಅವರೇ ಪಕ್ಷಕ್ಕೆ ಮರಳುವಂತೆ ವಿನಂತಿಸಿಕೊಂಡಿದ್ದರು ಎಂಬ ಜಯಪ್ರಕಾಶ್ ಹೆಗ್ಡೆ ಅವರ ಹೇಳಿಕೆಯ ಬಗ್ಗೆ ಕುಂದಾಪ್ರ ಡಾಟ್ ಕಾಂ ಪ್ರಶ್ನಿಸಿದಾಗ ಶಾಸಕ ಪೂಜಾರಿ ಅವರು ಹೀಗೆ ಉತ್ತರಿಸಿದ್ದಾರೆ.
ಜಯಪ್ರಕಾಶ್ ಹೆಗ್ಡೆಯವರು ಒಬ್ಬ ಉತ್ತಮ ನಾಯಕರು, ಎಂಪಿ ಆಗಿದ್ದವರು. ಭಿನ್ನಾಭಿಪ್ರಾಯದಿಂದ ಕಾಂಗ್ರೆಸ್‌ನಿಂದ ಹೊರನಡೆದಿದ್ದಾರೆ. ಹಾಗಾಗಿ ಕಾಂಗ್ರೆಸ್‌ನಲ್ಲಿ ಉತ್ತಮ ಸ್ಥಾನಮಾನ ಸಿಗಲಿದೆ. ಮರಳಿ ಬನ್ನಿ ಎಂದಷ್ಟೇ ವಿಧಾನ ಪರಿಷತ್ ಚುನಾವಣೆಯ ಬಳಿಕ ಹೇಳಿದ್ದೆ. ಆದರೆ ಅವರಿಲ್ಲದಿದ್ದರೂ, ತಾನಿಲ್ಲದಿದ್ದರೂ ಪಕ್ಷವನ್ನು ಮುನ್ನಡೆಸಲು ಮತ್ಯಾರೋ ಬರುತ್ತಾರೆ. ವ್ಯಕ್ತಿಯಿಂದಲೇ ಪಕ್ಷವಲ್ಲ ಎಂದು ಖಾರವಾಗಿ ಪ್ರತಿಕ್ರಿಯಿಸಿದ್ದಾರೆ. ಕುಂದಾಪ್ರ ಡಾಟ್ ಕಾಂ ಸುದ್ದಿ
ಒಂದೊಂದು ಚುನಾವಣೆಯ ಮೇಲೂ ಒಂದೊಂದು ಘಟನೆಗಳೂ ಪ್ರಭಾವ ಬೀರುತ್ತವೆ. ಒಬ್ಬರು ಪಕ್ಷದಿಂದ ಹೊರನಡೆಯುವುದರಿಂದ ಸೋಲು-ಗೆಲುವುನ ಮೇಲೆ ಅಷ್ಟೇನು ಪರಿಣಾಮ ಬೀರದು. ಅಷ್ಟಾಗ್ಯೂ ಸೋಲು-ಗೆಲುವು ಇದ್ದದ್ದೇ. ಈ ಭಾರಿ ಸೋತರೂ ಭಾರಿ ಮತದ ಅಂತರ ಕಂಡಿಲ್ಲ. ಮುಂದಿನ ದಿನಗಳಲ್ಲಿ ಪಕ್ಷದ ಸಂಘಟನೆಯತ್ತ ಗಮನ ಹರಿಸಿ ಕಾಂಗ್ರೆಸ್ ಪಕ್ಷವನ್ನು ಗಟ್ಟಿಗೊಳಿಸುವುದಾಗಿ ಅವರು ತಿಳಿಸಿದರು.