ಕುಂದಾಪ್ರ ಡಾಟ್ ಕಾಂ ಸುದ್ದಿ
ಗಂಗೊಳ್ಳಿ : ಮೀನುಗಾರಿಕಾ ಬಂದರು ಪ್ರದೇಶವಾಗಿರುವ ಗಂಗೊಳ್ಳಿಯ ನಾಗರಿಕರ ಬೇಡಿಕೆಗೆ ಸ್ಪಂದಿಸಿರುವ ಸರಕಾರ ಗಂಗೊಳ್ಳಿ ಹಾಗೂ ಸುತ್ತಮುತ್ತಲಿನ ಜನರ ಅನುಕೂಲಕ್ಕಾಗಿ ೧೦೮ ಅಂಬುಲೆನ್ಸ್ ಮಂಜೂರು ಮಾಡಿದೆ. ಗಂಗೊಳ್ಳಿಗೆ ೧೦೮ ಅಂಬುಲೆನ್ಸ್ ಸೇವೆ ಒದಗಿಸುವಂತೆ ಸ್ಥಳೀಯ ಗಂಗೊಳ್ಳಿ ಸಮುದಾಯ ಹಿತರಕ್ಷಣಾ ಸಮಿತಿ ಹಾಗೂ ಶ್ರೀ ಬಬ್ಬುಸ್ವಾಮಿ ಸ್ವಯಂಸೇವಾ ಸಂಘ ಬಾವಿಕಟ್ಟೆ ಇವರ ನಿರಂತರ ಒತ್ತಡ ಹಾಗೂ ಪ್ರಯತ್ನದ ಫಲವಾಗಿ ಸರಕಾರ ಈ ಕೊಡುಗೆಯನ್ನು ನಾಗರಿಕರಿಗೆ ನೀಡಿದೆ ಎಂದು ಬೈಂದೂರು ಶಾಸಕ ಕೆ.ಗೋಪಾಲ ಪೂಜಾರಿ ಹೇಳಿದರು.
ಅವರು ಗಂಗೊಳ್ಳಿಯ ಪ್ರಾಥಮಿಕ ಆರೋಗ್ಯ ಕೇಂದ್ರದ ವಠಾರದಲ್ಲಿ ಗಂಗೊಳ್ಳಿಗೆ ಮಂಜೂರಾದ ೧೦೮ ಅಂಬುಲೆನ್ಸ್ ಸೇವೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು. ಗಂಗೊಳ್ಳಿ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ. ಶ್ವೇತಾ ಮಾತನಾಡಿ, ನಾಗರಿಕರು ಅಪಘಾತ ಮೊದಲಾದ ತುರ್ತು ಸಂದರ್ಭದಲ್ಲಿ ಈ ಉಚಿತ ಅಂಬುಲೆನ್ಸ್ ಸೇವೆಯನ್ನು ಬಳಸಿಕೊಳ್ಳಬಹುದು. ವಿಶೇಷವಾಗಿ ಗರ್ಭಿಣಿಯರು ಹೆರಿಗೆ ಸಂದರ್ಭ ಆಸ್ಪತ್ರೆಗೆ ದಾಖಲಾಗಲು ೧೦೮ ವಾಹನದ ಪ್ರಯೋಜನ ಪಡೆದುಕೊಳ್ಳಬೇಕು.
ಗಂಗೊಳ್ಳಿ ಗ್ರಾಮ ಪಂಚಾಯತ್ ಸದಸ್ಯರು, ಗಂಗೊಳ್ಳಿ ಸಮುದಾಯ ಹಿತರಕ್ಷಣಾ ಸಮಿತಿ ಹಾಗೂ ಶ್ರೀ ಬಬ್ಬುಸ್ವಾಮಿ ಸ್ವಯಂಸೇವಾ ಸಂಘದ ಸದಸ್ಯರು, ಆರೋಗ್ಯ ಕೇಂದ್ರದ ಸಿಬ್ಬಂದಿಗಳು ಮೊದಲಾದವರು ಉಪಸ್ಥಿತರಿದ್ದರು. ಗಂಗೊಳ್ಳಿ ಗ್ರಾಮೀಣ ಕಾಂಗ್ರೆಸ್ ಅಧ್ಯಕ್ಷ ದುರ್ಗರಾಜ್ ಪೂಜಾರಿ ಸ್ವಾಗತಿಸಿದರು.