ಕುಂದಾಪ್ರ ಡಾಟ್ ಕಾಂ ಸುದ್ದಿ.
ಗಂಗೊಳ್ಳಿ: ಗಂಗೊಳ್ಳಿ ಮೀನುಗಾರಿಕಾ ಬಂದರಿನಲ್ಲಿ 102.11 ಕೋಟಿ ವೆಚ್ಚದಲ್ಲಿ ನಡೆಯಲಿರುವ ಬ್ರೇಕ್ ವಾಟರ್ ವಿಸ್ತರಣಾ ಕಾಮಗಾರಿಯ ಶಂಕುಸ್ಥಾಪನೆ ಹಾಗೂ ಮೀನುಗಾರರ ಸಮಾವೇಶಕ್ಕೆ ಗಂಗೊಳ್ಳಿ ಹಾಗೂ ಸುತ್ತಮುತ್ತಲಿನ ಮೀನುಗಾರರು ಹಾಗೂ ನಾಗರಿಕರು ಸಹಕಾರ ನೀಡುವುದರ ಜೊತೆಗೆ ಕಾರ್ಯಕ್ರಮವನ್ನು ಯಶಸ್ವಿಗೊಳಿಸಲು ಇಲಾಖೆ ಹಾಗೂ ಸರಕಾರದೊಂದಿಗೆ ಕೈಜೋಡಿಸಬೇಕು ಎಂದು ಬೈಂದೂರು ಶಾಸಕ ಕೆ.ಗೋಪಾಲ ಪೂಜಾರಿ ಹೇಳಿದರು.
ಅವರು ಗಂಗೊಳ್ಳಿ ಮೀನುಗಾರಿಕಾ ಬಂದರಿನಲ್ಲಿ ಬ್ರೇಕ್ ವಾಟರ್ ವಿಸ್ತರಣಾ ಕಾಮಗಾರಿ ಹಾಗೂ ಮೀನುಗಾರರ ಸಮಾವೇಶದ ಪೂರ್ವಭಾವಿಯಾಗಿ ಚಪ್ಪರ ಮುಹೂರ್ತ ನೆರವೇರಿಸಿ ಮಾತನಾಡಿದರು.
ರಾಜ್ಯದ ಮುಖ್ಯಮಂತ್ರಿಗಳು ಗಂಗೊಳ್ಳಿಗೆ ಭೇಟಿ ನೀಡುತ್ತಿರುವ ಹಿನ್ನಲೆಯಲ್ಲಿ ಎಲ್ಲಾ ಮೀನುಗಾರ ಸಂಘಟನೆಗಳು, ಮೀನುಗಾರರು ಒಗ್ಗಟ್ಟಿನಿಂದ ದುಡಿದು ಗಂಗೊಳ್ಳಿ ಮೀನುಗಾರಿಕಾ ಬಂದರಿನ ಅಭಿವೃದ್ಧಿಗೆ ಶ್ರಮಿಸಬೇಕಿದೆ ಎಂದು ಹೇಳಿದರು.
ತಾಪಂ ಸದಸ್ಯ ರಾಜು ದೇವಾಡಿಗ, ಗಂಗೊಳ್ಳಿ ವಲಯ ನಾಡದೋಣಿ ಮೀನುಗಾರರ ಸಂಘದ ಅಧ್ಯಕ್ಷ ಮಂಜು ಬಿಲ್ಲವ, ಕಾರ್ಯದರ್ಶಿ ಚೌಕಿ ವಿಠೋಬ ಖಾರ್ವಿ, ಮಾಜಿ ಅಧ್ಯಕ್ಷ ಡಿ.ಚಂದ್ರ ಖಾರ್ವಿ, ನಾಗರಾಜ ಖಾರ್ವಿ, ನಾಗಪ್ಪಯ್ಯ ಪಟೇಲ್, ಗಂಗೊಳ್ಳಿ ಹಸಿಮೀನು ವ್ಯಾಪಾರಸ್ಥರ ಸಂಘದ ಅಧ್ಯಕ್ಷ ಮಂಜುನಾಥ ಜಿ.ಟಿ., ಉಪ್ಪುಂದ ವಲಯ ನಾಡದೋಣಿ ಮೀನುಗಾರರ ಸಂಘದ ಅಧ್ಯಕ್ಷ ಕುಮಾರ ಬಿ.ಎಚ್., ಗಂಗೊಳ್ಳಿ ಆಳ ಸಮುದ್ರ ಮೀನುಗಾರರ ಸಂಘದ ಅಧ್ಯಕ್ಷ ಲೋಕೇಶ ಖಾರ್ವಿ, ಗಂಗೊಳ್ಳಿ ಗ್ರಾಮೀಣ ಕಾಂಗ್ರೆಸ್ ಅಧ್ಯಕ್ಷ ದುರ್ಗರಾಜ್ ಪೂಜಾರಿ, ಗ್ರಾಪಂ ಸದಸ್ಯರಾದ ಕೆ.ಯೂನಿಸ್ ಸಾಹೇಬ್, ಮುಜಾಹೀದ್ ನಾಕುದಾ, ಮೀನುಗಾರಿಕಾ ಇಲಾಖೆಯ ಗೋಪಾಲಕೃಷ್ಣ ಮೊದಲಾದವರು ಉಪಸ್ಥಿತರಿದ್ದರು.