ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು: ಕಳೆದ ಐವತ್ತು ವರ್ಷಗಳಿಂದ ರಂಗಭೂಮಿ ಚಟುವಟಿಕೆಗಳಲ್ಲಿ ಕೆಲವಾರು ಏಳು-ಬೀಳುಗಳನ್ನು ಕಂಡು ಈಗ ಫಿನಿಕ್ಸ್‌ನಂತೆ ಮತ್ತೆ ಗರಿಗೆದರಿ ತನ್ನ ನೈಜತೆಯ ಮೂಲದಲ್ಲಿ ನಿಂತಿದೆ. ಮನುಷ್ಯರ ನಡೆವೆ ಸಂಬಂಧಗಳನ್ನು ಬೆಸೆಯುವ ಏಕೈಕ ಮಾಧ್ಯಮ ರಂಗಭೂಮಿ ಮಾತ್ರ ಎಂದು ಚಿಂತಕ, ವಿಮರ್ಶಕ, ರಂಗನಿರ್ದೇಶಕ ನಾ. ಶ್ರೀನಿವಾಸ್ ಮೈಸೂರು ಹೇಳಿದರು.
ಸುರಭಿ ಬೈಂದೂರು, ರಂಗಸ್ಥಳ ಉಪ್ಪುಂದ ಜಂಟಿ ಆಶ್ರಯದಲ್ಲಿ ಬೈಂದೂರು ಶಾರದಾ ವೇದಿಕೆಯಲ್ಲಿ ನಡೆದ ವಿಶ್ವರಂಗಭೂಮಿ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ರಂಗಭೂಮಿ ಮನುಷ್ಯನಿಗೆ ಸಾಮಾನ್ಯ ತಿಳುವಳಿಕೆ, ತತ್ವ ಹಾಗೂ ಆಡಂಬರವಿಲ್ಲದ ಆತ್ಮವಿಶ್ವಾಸದ ಬದುಕಿನಲ್ಲಿ ಅಳವಡಿಸಿಕೊಳ್ಳಬೇಕಾದ ವರ್ತನೆಗಳನ್ನು ಕಲಿಸುತ್ತದೆ. ಹಾಂಗಂತ ಇದು ಸೆಲೆಬ್ರಿಟಿಗಳನ್ನು ತಯಾರು ಮಾಡುವ ಕಾರ್ಖಾನೆಯಲ್ಲ. ಮನುಷ್ಯರನ್ನು ತಯಾರು ಮಾಡುವಂತ ಒಂದು ಶೈಕ್ಷಣಿಕ ಕ್ಷೇತ್ರ. ಜನಸಮುದಾಯದ ಮನಸಿನ ಆಳಕ್ಕೆ ಮುಟ್ಟುವಂತೆ ಸೂಕ್ತವಾದ ಸೌಂದರ್ಯ ಪ್ರಜ್ಞೆಯ ಅಭಿರುಚಿಯನ್ನು ಬೆಳೆಸುವ ಹಾಗೂ ಸಮಾಜಕ್ಕೆ ಧನಾತ್ಮಕ ಸಂದೇಶ ನೀಡುವ ಕೇಂದ್ರವಾಗಿದೆ. ಜಗತ್ತಿನಲ್ಲಿ ಎಲ್ಲೆಡೆಯೂ ರಂಗಭೂಮಿ ಇದೆ. ಅದರೆ ಕ್ರೌರ್ಯದ ರಂಗಭೂಮಿಕ್ಕಿಂತ ಆದರ್ಶಗಳನ್ನು ಪ್ರೇರಿಪಿಸುವಂತಹ ರಂಗಭೂಮಿ ನಮಗೆ ಬೇಕಾಗಿದೆ. ಪ್ರೇಕ್ಷಕನ ಒಳಿಗಿರುವ ಅದ್ಭುತ ಹಾಗೂ ಅಸಾಧ್ಯವಾದ ಕಲ್ಪನೆಗಳನ್ನು ಮತ್ತು ನಂಬಿಕೆಗಳನ್ನು ಉಳಿಸುವ ಹಾಗೂ ಸಾಮಾಜಿಕ ಬದಲಾವಣೆ ಮಾಡುವ ಕೆಲಸ ರಂಗಭೂಮಿ ಮಾಡುತ್ತಿದೆ ಎಂದರು.
ಈ ಸಂದರ್ಭ ಹಿರಿಯ ರಂಗನಟ ಸುರೇಶ್ ಆಚಾರ್ಯ ಇವರನ್ನು ಸನ್ಮಾನಿಸಲಾಯಿತು. ರಂಗನಟಿ ರಾಧಾ ಕೊಡಗು, ರಂಗನಿರ್ದೇಶಕ ಗಣೇಶ್ ಉಡುಪಿ ಉಪಸ್ಥಿತರಿದ್ದರು. ಹಂಬಲ ಥಿಯೇಟರ್‌ನ ಯೋಗೀಶ್ ಬೈಂದೂರು ರಂಗಸಂದೇಶ ವಾಚಿಸಿದರು. ಸುರಭಿ ನಿರ್ದೇಶಕ ಸುಧಾಕರ್ ಪಿ. ಪ್ರಾಸ್ತಾವಿಸಿ, ಗಣಪತಿ ಹೋಬಳಿದಾರ ನಿರೂಪಿಸಿದರು. ಅಧ್ಯಕ್ಷ ಶಿವರಾಮ ಕೊಠಾರಿ ಸ್ವಾಗತಿಸಿ, ಕಾರ್ಯದರ್ಶೀ ಲಕ್ಷಣ ಕೊರಗ ವಂದಿಸಿದರು. ಈ ಕಾರ್ಯಕ್ರಮಕ್ಕೆ ಸಂಚಲನ ಹೊಸೂರು, ಸೌಜನ್ಯ ಬೈಂದೂರು, ಹಂಬಲ ಥಿಯೇಟರ್, ಸಮ್ಮಿಲನ ಯಳಜಿತ್ ಸಾಂಸ್ಕೃತಿಕ ಸಂಘಗಳ ಸಹಕಾರವಿತ್ತು.