ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಮರವಂತೆಯಲ್ಲಿ ನಿರ್ಮಾಣವಾಗುತ್ತಿರುವ ಚತುಷ್ಪಥ ಹೆದ್ದಾರಿಗೆ ಸೇರುವ ಎಲ್ಲ ಗ್ರಾಮ ರಸ್ತೆಗಳಿಗೆ ಮುಕ್ತ ಪ್ರವೇಶಕ್ಕೆ ಅವಕಾಶ ಕಲ್ಪಿಸುವುದು, ಬೀದಿದೀಪ ಇಲ್ಲದ ರಸ್ತೆಗಳಿಗೆ ಅದನ್ನು ಅಳವಡಿಸುವುದರೊಂದಿಗೆ ಹಿಂದೆ ಅಳವಡಿಸಿರುವ ದೀಪಗಳು ಬೆಳಗುವಂತೆ ಮಾಡವುದು, ಚರಂಡಿಗಳ ಮಳೆಗಾಲ ಪೂರ್ವ ಹೂಳೆತ್ತುವುದು, ಹರಿಶ್ಚಂದ್ರ ಮಾರ್ಗದ ಕೇಂದ್ರೀಕೃತ ಸೋಲಾರ್ ದೀಪ ಲೋಪ ಸರಿಪಡಿಸುವುದು, ಸ್ಮಶಾನ ಅಭಿವೃದ್ಧಿಗೆ ಕ್ರಮ, ವಾರ್ಡ್‌ಸಭೆಗಳನ್ನು ಮತದಾನ ಕೇಂದ್ರದಲ್ಲೇ ನಡೆಸುವುದು, ರಸ್ತೆಗಳಿಲ್ಲದ ಜನವಸತಿ ಪ್ರದೇಶಗಳಿಗೆ ರಸ್ತೆ ನಿರ್ಮಿಸುವುದಕ್ಕೆ ನೀಡಿದ ಆದ್ಯತೆಯನ್ನು ಇದ್ದವುಗಳನ್ನು ಸುಸ್ಥಿತಿಯಲ್ಲಿಡುವುದಕ್ಕೂ ಆದ್ಯತೆ ನೀಡುವುದು.
ಇದು ಮರವಂತೆ ಗ್ರಾಮ ಪಂಚಾಯಿತಿಯ ಸುವರ್ಣ ಸಭಾಭವನದ ಅಟಲ್ ಬಿಹಾರಿ ವಾಜಪೇಯಿ ವೇದಿಕೆಯಲ್ಲಿ ಎರಡನೆ ಸುತ್ತಿನ ಗ್ರಾಮಸಭೆಯಲ್ಲಿ ಗ್ರಾಮ ಪಂಚಾಯಿತಿಯ ಲೋಪ ಮತ್ತು ಮಾಡಬೇಕಾದ ಕೆಲಸಗಳ ಕುರಿತು ಗ್ರಾಮಸ್ಥರು ಅಹವಾಲುಗಳನ್ನಿಟ್ಟು ಎಚ್ಚರಿಸಿದ ಪರಿ.
ಗ್ರಾಮಸ್ಥರಾದ ಎಸ್. ಜನಾರ್ದನ ಮಂಡಿಸಿ, ಎಂ. ವಿನಾಯಕ ರಾವ್ ಅನುಮೋದಿಸಿದ ಹತ್ತು ನಿರ್ಣಯಗಳನ್ನು ಸಭೆ ಸರ್ವಾನುಮತದಿಂದ ಸ್ವೀಕರಿಸಿತು. ಅಧ್ಯಕ್ಷತೆ ವಹಿಸಿದ್ದ ಅಧ್ಯಕ್ಷೆ ಅನಿತಾ ಆರ್. ಕೆ ಈ ನಿರ್ಣಯಗಳನ್ನು ಅನುಷ್ಠಾನಿಸುವ ಭರವಸೆ ನೀಡಿದರಲ್ಲದೆ, ಗ್ರಾಮಸ್ಥರ ಅನ್ಯ ಅಹವಾಲುಗಳಿಗೆ ಸ್ಪಂದಿಸುವುದಾಗಿ ತಿಳಿಸಿದರು.
ತಾಲೂಕು ಕೈಗಾರಿಕಾ ವಿಸ್ತರಣಾಧಿಕಾರಿ ಸೀತಾರಾಮ ಶೆಟ್ಟಿ ಮಾರ್ಗದರ್ಶಿ ಅಧಿಕಾರಿಗಳಾಗಿದ್ದರು. ಮೆಸ್ಕಾಂ ಬೈಂದೂರು ಶಾಖಾಧಿಕಾರಿ ರಾಘವೇಂದ್ರ, ವೈದ್ಯಾಧಿಕಾರಿ ಡಾ. ಸನ್ಮಾನ್ ಶೆಟ್ಟಿ, ಕೃಷಿ ಸಹಾಯಕ ಪರಶುರಾಮ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಮೇಲ್ವಿಚಾರಕಿ ಸವಿತಾ ಶೆಟ್ಟಿ, ಗ್ರಾಮ ಕರಣಿಕ ಮಹಾಂತೇಶ್ ಕೋಣಿನವರ್, ನಮ್ಮಭೂಮಿಯ ಶಾಂತಿ ಮಾಹಿತಿ ನೀಡಿದರು. ನಾರಾಯಣ ದೇವಾಡಿಗ, ಆನಂದ ಪೂಜಾರಿ, ಸಂತೋಷ್ ಪೂಜಾರಿ, ಸರೋಜಾ ಶ್ಯಾನುಭಾಗ್, ವಿನಯ ಡಿ’ಆಲ್ಮೇಡ, ಪದ್ಮನಾಭ ಜವುಳಿ, ಲೂಯಿಸ್ ಕ್ರಾಸ್ತಾ ಸಮಸ್ಯೆಗಳಿಗೆ ಪರಿಹಾರ ಕೋರಿದರು.
ಅಭಿವೃದ್ಧಿ ಅಧಿಕಾರಿ ಪೂರ್ಣಿಮಾ ಸ್ವಾಗತಿಸಿ, ಕರಸಂಗ್ರಾಹಕ ಶೇಖರ್ ಮರವಂತೆ ವಾರ್ಡ್‌ಸಭೆಗಳ ನಡವಳಿ ಮಂಡಿಸಿದರು. ಕಾರ್ಯದರ್ಶಿ ಹರಿಶ್ಚಂದ್ರ ಆಚಾರ್ಯ ವಂದಿಸಿದರು. ಉಪಾಧ್ಯಕ್ಷ ಗಣೇಶ ಪೂಜಾರಿ, ತಾಲೂಕು ಪಂಚಾಯತ್ ಸದಸ್ಯ ಜಗದೀಶ ಪೂಜಾರಿ, ಪಂಚಾಯತ್ ಸರ್ವಸದಸ್ಯರು, ಮಾಜಿ ಅಧ್ಯಕ್ಷ ನರಸಿಂಹ ಶೆಟ್ಟಿ, ಇತರರು ಇದ್ದರು