ಕುಂದಾಪ್ರ ಡಾಟ್ ಕಾಂ ಸುದ್ದಿ
ಗಂಗೊಳ್ಳಿ: ಮಾರ್ಚ್ 31 ರಂದು ನಡೆಯಬೇಕಿದ್ದ ದ್ವಿತೀಯ ಪಿಯುಸಿಯ ರಸಾಯನ ಶಾಸ್ತ್ರ ಮರುಪರೀಕ್ಷೆಯ ಪ್ರಶ್ನೆ ಪತ್ರಿಕೆಗಳು ಕೂಡ ಸೋರಿಕೆಯಾಗಿ ಪರೀಕ್ಷೆ ರದ್ದು ಗೊಳಿಸಿದ್ದರಿಂದ ಕುಪಿತರಾದ ಪರೀಕ್ಷೆ ಬರೆಯಬೇಕಿದ್ದ ಗಂಗೊಳ್ಳಿಯ ಸರಸ್ವತಿ ವಿದ್ಯಾಲಯದ ವಿಜ್ಞಾನ ವಿಭಾಗದ ವಿದ್ಯಾರ್ಥಿಗಳು ಪಿಯು ಇಲಾಖೆಯ ಅವ್ಯವಸ್ಥೆ ವಿರುದ್ಧ ಪ್ರತಿಭಟನೆ ನಡೆಸಿದರು.
ಮತ್ತೆ ಮತ್ತೆ ಪ್ರಶ್ನೆ ಪತ್ರಿಕೆಗಳು ಲೀಕ್ ಆಗುತ್ತಿರುವುದು ವ್ಯವಸ್ಥೆಯಲ್ಲಿನ ಅತ್ಯಂತ ದೊಡ್ಡ ಹುಳುಕನ್ನು ಎತ್ತಿ ತೋರಿಸುತ್ತಿದೆ. ಈ ಅವಾಂತರಕ್ಕೆ ಇಲಾಖೆಯಲ್ಲಿನ ಅಧಿಕಾರಿಗಳೇ ಕಾರಣ. ಒಂದಷ್ಟು ಹಣದ ಆಸೆಗಾಗಿ ಲಕ್ಷಾಂತರ ವಿದ್ಯಾರ್ಥಿಗಳ ಭವಿಷ್ಯದೊಡನೆ ಆಟವಾಡುವ ತಪ್ಪಿತಸ್ಥರನ್ನು ಶೀಘ್ರವಾಗಿ ಬಂಧಿಸಿ ಅವರನ್ನು ಕಠಿಣ ಶಿಕ್ಷೆಗೆ ಗುರಿಪಡಿಸಬೇಕು. ಮತ್ತು ಭವಿಷ್ಯದಲ್ಲಿ ಅವರನ್ನು ಯಾವ ಹುದ್ದೆಗಳಿಗೂ ಪರಿಗಣಿಸಬಾರದು ಎಂದು ಪ್ರತಿಭಟನಾ ನಿರತ ವಿದ್ಯಾರ್ಥಿಗಳು ಅಭಿಪ್ರಾಯಪಟ್ಟರು.
ಪರೀಕ್ಷೆ ರದ್ದಾದ ಕಾರಣ ಆಕ್ರೋಶಿತಗೊಂಡಿದ್ದ ವಿದ್ಯಾರ್ಥಿಗಳು ಪಿಯು ಇಲಾಖೆಯ ವಿರುದ್ಧ ಫೋಷಣೆಗಳನ್ನು ಕೂಗಿದರು. ವಿದ್ಯಾರ್ಥಿಗಳ ಪರವಾಗಿ ಬಿಂದು ,ವಿಜೇಶ್, ರಾಜು ಮಾತನಾಡಿದರು.ಗಂಗೊಳ್ಳಿ ಠಾಣಾಧಿಕಾರಿ ಸುಬ್ಬಣ್ಣ ವಿದ್ಯಾರ್ಥಿಗಳ ಅಹವಾಲನ್ನು ಆಲಿಸಿದರು.