ಕುಂದಾಪ್ರ ಡಾಟ್ ಕಾಂ ಸುದ್ದಿ
ಕುಂದಾಪುರ: ಮಧ್ಯಕಾಲಿನ ಯುಗದ ಪ್ರಾಚೀನತೆಯನ್ನು ಪಡೆದಿರುವ ಯಕ್ಷಗಾನ ಕಲೆ ಕರಾವಳಿಯ ದೆವಸ್ಥಾನಗಳಲ್ಲಿ ಭಕ್ತಿಯ ಒಂದು ಭಾಗವಾಗಿಯೇ ಇದೆ. ಇಂದು ದೇವಸ್ಥಾನಗಳೆಲ್ಲಾ ಶಕ್ತಿ ಕೇಂದ್ರಗಳಾಗುವ ಭರದಲ್ಲಿ ಇಂತಹ ಸಾವಿರಾರು ಕಲೆಗಳು ಸ್ಥಿತ್ಯಂತರವನ್ನು ಪಡೆಯುವಂತಹ ಸ್ಥಿತಿಯಿಂದ ದೂರ ಉಳಿದು ತಮ್ಮ ತನವನ್ನು ಕಾಪಾಡಿಕೊಳ್ಳಬೇಕಾಗಿದೆ. ಎಂದು ಮಂಗಳೂರು ವಿಶ್ವವಿದ್ಯಾನಿಲಯದ ಕನ್ನಡ ವಿಭಾಗ ಮುಖ್ಯಸ್ಥರಾದ ಪ್ರೊ. ಬಿ.ಶಿವರಾಮ ಶೆಟ್ಟಿ ಹೇಳಿದರು.
ಅವರು ಕೊಟೇಶ್ವರದ ನಮ್ಮ ಕಲಾಕೇಂದ್ರ ಆಯೋಜಿಸಿದ ಒಂದು ವಾರದ ಯಕ್ಷಹಬ್ಬದ ಕೊನೆಯ ದಿನದ ಯಕ್ಷಧ್ವಜ ಪುರಸ್ಕಾರವನ್ನು ನೀಡಲು ಆಗಮಿಸಿದ್ದರು. ಬಡಗು ತಿಟ್ಟಿನ ಪ್ರಖ್ಯಾತ ಕಲಾವಿದ ಹಾಸ್ಯ ಚಕ್ರವರ್ತಿ ಹಳ್ನಾಡಿ ಜಯರಾಮ ಶೆಟ್ಟಿಯವರಿಗೆ ನೀಡಿ ಗೌರವಿಸಲಾಯ್ತು.
ಗೌರವವನ್ನು ಸ್ವೀಕರಿಸಿದ ಹಳ್ನಾಡಿಯವರು ಮಾತನಾಡಿ ರಾಜ್ಯದ ನಾನಾಭಾಗಗಳಲ್ಲಿ ನಾನು ತಿರುಗಾಟ ಮಾಡಿ ಸನ್ಮಾನ ಸ್ವೀಕರಿಸಿದರೂ ಸಹ ಕರಾವಳಿಯಲ್ಲಿ ಮೊದಲಿಗೆ ನನಗೆ ಪ್ರಶಸ್ತಿಯನ್ನು ನೀಡುತ್ತಿರುವುದಕ್ಕೆ ಹೃದಯ ತುಂಬಿ ಬಂದಿದೆ. ನನ್ನ ಸಮಾಜವೇ ನನ್ನನ್ನು ಗುರುತಿಸದ ಸಂದರ್ಭದಲ್ಲಿ ನಮ್ಮ ಕಲಾಕೇಂದ್ರದ ಸನ್ಮಾನ ತೃಪ್ತಿ ತಂದಿದೆ ಎಂದರು.
ಸಭಾಧ್ಯಕ್ಷತೆಯನ್ನು ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಳದ ಪ.ಪೂ.ಕಾಲೇಜಿನ ಪ್ರಾಂಶುಪಾಲರಾದ ಅರುಣ ಪ್ರಕಾಶ್ ಶೆಟ್ಟಿ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಉದ್ಯಮಿಗಳಾದ ಮಲ್ಯಾಡಿ ಶಿವರಾಮ ಶೆಟ್ಟಿ, ಭೂ ಅಭಿವೃದ್ಧಿ ಬ್ಯಾಂಕ್‌ನ ಅಧ್ಯಕ್ಷರಾದ ಎಸ್.ದಿನಕರ ಶೆಟ್ಟಿ ಉಪಸ್ಥಿತರಿದ್ದರು. ಸಂಸ್ಥೆಯ ಅಧ್ಯಕ್ಷ ರಂಜಿತ್ ಕುಮಾರ್ ಶೆಟ್ಟಿ ಪ್ರಾಸ್ತಾವಿಕ ಮಾತನಾಡಿದರು. ಸಮಿತಿಯ ಅಧ್ಯಕ್ಷ ಕೆ. ರವಿರಾಜ್ ಶೆಟ್ಟಿ ಕೇಸನಮಕ್ಕಿ ಸ್ವಾಗತಿಸಿದರು. ಗೌರವಾಧ್ಯಕ್ಷ ಮಾರ್ಕೋಡು ಗೋಪಾಲ ಕೃಷ್ಣ ಶೆಟ್ಟಿ ವಂದಿಸಿದರು. ಪ್ರಸಂಗಕರ್ತರಾದ ಕೆ.ಬಸವರಾಜ ಶೆಟ್ಟಿಗಾರ್ ಸನ್ಮಾನಿತರ ಪರಿಚಯವನ್ನು ಮಾಡಿದರು. ಶ್ರೀರಾಜ್, ವಕ್ವಾಡಿ ಕಾರ್ಯಕ್ರಮ ನಿರ್ವಹಿಸಿದರು. ಕಾರ್ಯಕ್ರಮದ ಬಳಿಕ ಚಂದ್ರಹಾಸ ಪ್ರಸಂಗದ ಪ್ರದರ್ಶನ ನಡೆಯಿತು.