ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು: ಸಮಾಜದಲ್ಲಾಗುವ ವೈಪರಿತ್ಯವನ್ನು ಸರಿಪಡಿಸುವ ಜವಾಬ್ದಾರಿ ತಾಯಂದಿರ ಮೇಲಿದೆ. ಸಂಸ್ಕಾರಯುತ ಶಿಕ್ಷಣವನ್ನು ಮೊದಲು ಮನೆಯಿಂದಲೇ ಆರಂಭಿಸಿದಾಗ ಮಾತ್ರ ಸಶಕ್ತ ಸಮಾಜದ ನಿರ್ಮಾಣ ಸಾಧ್ಯ. ತ್ಯಾಗ ಬಲಿದಾನ ಇಲ್ಲದೆ ಧರ್ಮ, ದೇಶ ಉಳಿಯಲು ಸಾಧ್ಯವಿಲ್ಲ ಎಂದು ರಾಷ್ಟ್ರೀಯ ಸ್ವಯಂ ಸೇವಕ ಸಂಘ ಮಂಗಳೂರು ವಿಭಾಗದ ಸಹ ಕಾರ್ಯವಾಹ ಜನಾರ್ದನ್ ಉಪ್ಪಳ ಹೇಳಿದರು.
ಬೈಂದೂರು ಜಯಾನಂದ ಹೋಬಳಿದಾರ್ ಅವರ ನಿವಾಸದಲ್ಲಿ ನಡೆದ ’ಭಾರತ್ ಮಾತಾ ಪೂಜನ’ ಕಾರ್ಯಕ್ರಮ ಉದ್ಘಾಟಿಸಿ (ಭೌದ್ದಿಕ್) ಮಾತನಾಡಿದರು. ಭಾರತೀಯರಲ್ಲಿ ರಾಷ್ಟ್ರಭಕ್ತಿ, ಸಾಮಾಜಿಕ ಶಕ್ತಿ ನಿರ್ಮಾಣ ಮಾಡುವುದು ಅನಿವಾರ್ಯವಾಗಿದೆ. ಹಿಂದುತ್ವವೇ ಭಾರತದ ರಾಷ್ಟ್ರೀಯತೆ. ಸಮಾಜದಲ್ಲಿ ತಾರತಮ್ಯ ಸಲ್ಲದು. ಇಲ್ಲಿ ಜಾತಿ ಭೇಧಕ್ಕಿಂತ ರೀತಿ-ನೀತಿ ಮುಖ್ಯವಾಗಿರಬೇಕು. ಭಾರತವೇ ನಮ್ಮ ಆತ್ಮ, ಪ್ರಾಣ, ಉಸಿರು. ಹಿಂದುತ್ವ ಸ್ವಾಭಿಮಾನ ಸಂಕೇತ ಎಂದರು.
’ಜಯ ಜಯ ಹೇ ಭಗವತಿ ಸುರ ಭಾರತಿ ತವ ಚರಣೌ ಪ್ರಣಮಾಮ್ಯಹಂ’ ಸಮೂಹ ಗೀತೆಯೊಂದಿಗೆ ಭಾರತಾಂಬೆಯ ಭಾವಚಿತ್ರಕ್ಕೆ ಪುಷ್ಪಾರ್ಚನೆಗೈದು ಆರತಿ ಬೆಳಗಿದ ನಂತರ ಮೂರ್ತಿ ಬೈಂದೂರು ಹಾಡಿದ ದೇಶಭಕ್ತಿ ಗೀತೆಯೊಂದಿಗೆ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು. ಯಳಜಿತ ಮಂಗೇಶ ಶೆಣೈಯವರ ಸಾರಥ್ಯದಲ್ಲಿ ಶ್ರೀ ಸಿದ್ಧಿವಿನಾಯಕ ಸಾಂಸ್ಕೃತಿಕ ಕೇಂದ್ರದ ಬಾಲಕಲಾವಿದರು ಖ್ಯಾತ ಕವಿಗಳ ರಚನೆಯ ಭಾವಗೀತೆ, ದೇಶಭಕ್ತಿ ಗೀತೆ, ದೇವರ ನಾಮಗಳನ್ನು ಶ್ರುತಿಬದ್ದವಾಗಿ ಪ್ರಸ್ತುತಪಡಿಸಿದರು. ಇವರು ರಚಿಸಿದ ’ಭವ್ಯ ಜೀವನಕ್ಕೆ ದಿವ್ಯ ಸಂಸ್ಕಾರ’ ಎಂಬ ಕೃತಿಯನ್ನು ಲೋಕಾರ್ಪಣೆಗೊಳಿಸಲಾಯಿತು. ಕಲಿಕೆಯಲ್ಲಿ ಮುಂದಿದ್ದು, ಆರ್ಥಿಕವಾಗಿ ಹಿಂದುಳಿದ ಐವರು ವಿದ್ಯಾರ್ಥಿನಿಯರಿಗೆ ಸಹಾಯಧನ ನೀಡಲಾಯಿತು. ರಾಘವೇಂದ್ರ ದಡ್ಡು ನಿರೂಪಿಸಿದರು.
– ಜನನಿ ಉಪ್ಪುಂದ