ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಸ್ಪರ್ಧಾತ್ಮಕ ಜಗತ್ತಿನಲ್ಲಿ ಸಂವಹನ ಕಲೆ ಹಾಗೂ ಇನ್ನಿತರ ಕೌಶಲ್ಯಗಳು ಹೆಚ್ಚೆಚ್ಚು ಇದ್ದಷ್ಟು ಭವಿಷ್ಯವನ್ನು ಚೆನ್ನಾಗಿ ರೂಪಿಸಿಕೊಳ್ಳಲು ಸಾಧ್ಯವಿದೆ ಎಂದು ಎಂದು ಮಾಜಿ ಸಂಸದ ಜಯಪ್ರಕಾಶ್ ಹೆಗ್ಡೆ ಹೇಳಿದರು.
ಅವರು ಇಲ್ಲಿನ ಭಂಡಾರ್ಕಾರ್ಸ್ ಕಾಲೇಜಿನ ವಾಣಿಜ್ಯಶಾಸ್ತ್ರ ಮತ್ತು ವ್ಯವಹಾರ ಅಧ್ಯಯನ ವಿಭಾಗಗಳು ಜಂಟಿಯಾಗಿ ಆಯೋಜಿಸಿದ್ದ ಮಂಗಳೂರು ವಿಶ್ವವಿದ್ಯಾಲಯ ಮಟ್ಟದ ವ್ಯವಹಾರ ಅಧ್ಯಯನ ಉತ್ಸವ ಸ್ಪರ್ಧಾ – 16 ವನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು.
ಪ್ರತಿಭೆ ಇದ್ದರೆ ಸಾಲದು. ಅದಕ್ಕೆ ತಕ್ಕಂತೆ ತಯಾರಿ ಮತ್ತು ಅಧ್ಯಯನ ಅಗತ್ಯವಾಗಿರುತ್ತದೆ. ಕೇವಲ ಉದ್ಯೋಗಕ್ಕಾಗಿ ಅಲ್ಲದೇ ಬದುಕನ್ನು ಉತ್ತಮ ರೀತಿಯಲ್ಲಿ ನಡೆಸಲು ಮತ್ತು ಯಶಸ್ವಿಯಾಗಲು ನೀವು ನಿಮ್ಮ ಕೌಶಲವನ್ನು ಹೆಚ್ಚಿಸಿಕೊಳ್ಳಬೇಕು. ಶಿಕ್ಷಣ ಎನ್ನುವುದು ಬದುಕಿನ ಒಂದು ಭಾಗವಾಗಿದೆ. ನಿಮಗೆ ಕಾಲೇಜು ಉತ್ತಮ ಶಿಕ್ಷಣವನ್ನು ಕೊಡುತ್ತದೆ. ಆದರೆ ಬದುಕೆ ಒಂದು ಅನುಭವ. ಜೀವನದ ಪ್ರತಿ ಹೆಜ್ಜೆಯನ್ನು ಎಚ್ಚರಿಕೆಯಿಂದ ಇಟ್ಟಾಗ ಯಶಸ್ಸು ನಮ್ಮದಾಗುತ್ತದೆ ಎಂದು ಅಭಿಪ್ರಾಯಪಟ್ಟರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಂಶುಪಾಲರಾದ ಡಾ.ಎನ್.ಪಿ. ನಾರಾಯಣ ಶೆಟ್ಟಿ ಮಾತನಾಡಿ ಜೀವನದಲ್ಲಿ ಅತಿ ಮುಖ್ಯವಾದ ಕೌಶಲವೆಂದರೆ ಮಾನವ ಸಂಬಂಧಗಳನ್ನು ಬೆಸೆಯುವುದು ಎಂದು ಹೇಳಿದರು.
ವೇದಿಕೆಯಲ್ಲಿ ವಿದ್ಯಾರ್ಥಿ ಕ್ಷೇಮಪಾಲನಾಧಿಕಾರಿ ಪ್ರೊ.ಅರುಣಾಚಲ ಮಯ್ಯ, ವ್ಯವಹಾರ ಅಧ್ಯಯನ ವಿಭಾಗದ ಮುಖ್ಯಸ್ಥೆ ಅರ್ಚನಾ ಅರವಿಂದ ಮತ್ತು ವಿದ್ಯಾರ್ಥಿ ವಿರಾಜ್ ಕಾಂಚನ್ ಉಪಸ್ಥಿತರಿದ್ದರು. ವಾಣಿಜ್ಯಶಾಸ್ತ್ರ ವಿಭಾಗದ ಮುಖ್ಯಸ್ಥ ಪ್ರೊ. ಜಿ.ಎಸ್. ಹೆಗಡೆ ಸ್ವಾಗತಿಸಿದರು. ವಿದ್ಯಾರ್ಥಿ ಕಾರ್ತಿಕ್ ಪ್ರಾಸ್ತಾವಿಕವಾಗಿ ಮಾತನಾಡಿದರು. ವಿದ್ಯಾರ್ಥಿನಿ ಮಾಧುರಿ ವಂದಿಸಿದರು.