ಕುಂದಾಪ್ರ ಡಾಟ್ ಕಾಂ ಸುದ್ದಿ.
ಗಂಗೊಳ್ಳಿ: ದೇವರು ಹುಟ್ಟಿದ ನಡೆದಾಡಿದ ವಿಶ್ವದ ಏಕೈಕ ದೇಶ ಭಾರತ. ಇಂತಹ ಶ್ರೇಷ್ಠವಾದ ಪವಿತ್ರವಾದ ನಮ್ಮ ದೇಶ ಗಂಡಾಂತರಕ್ಕೆ ಸಿಲುಕಿದೆ. ದೇಶದಲ್ಲಿ ಹಿಂದುಗಳ ಸಂಖ್ಯೆ ವಿಪರೀತ ಕಡಿಮೆಯಾಗುತ್ತಿದ್ದು, ಹಿಂದು ಸಮಾಜ ನಾಶದ ಕಡೆ ಹೋಗುತ್ತಿದೆ. ಹೀಗಾಗಿ ದೇಶ ಧರ್ಮ ಉಳಿಸುವ ಮಹತ್ಕಾರ್ಯದಲ್ಲಿ ಎಲ್ಲರೂ ತೊಡಗಿಕೊಳ್ಳಬೇಕು ಎಂದು ರಾಷ್ಟ್ರೀಯ ಸ್ವಯಂಸೇವಕ ಸಂಘದ ದಕ್ಷಿಣ ಮಧ್ಯ ಕಾರ್ಯಕಾರಿಣಿ ಸದಸ್ಯ ಡಾ. ಪ್ರಭಾಕರ ಭಟ್ ಕಲ್ಲಡ್ಕ ಹೇಳಿದರು.
ಅವರು ಗಂಗೊಳ್ಳಿಯ ಶ್ರೀ ವೀರೇಶ್ವರ ದೇವಸ್ಥಾನದ ವಠಾರದಲ್ಲಿ ಹಿಂದೂ ಜಾಗರಣ ವೇದಿಕೆ ಗಂಗೊಳ್ಳಿ ಇವರ ಆಶ್ರಯದಲ್ಲಿ ಜರಗಿದ ೫೦೫ ಕಲಶಗಳ ಸಾಮೂಹಿಕ ಶ್ರೀ ಸತ್ಯನಾರಾಯಣ ಪೂಜೆ ಹಾಗೂ ೧೩ ಲಕ್ಷ ಲಿಖಿತ ಶ್ರೀ ರಾಮನಾಮ ತಾರಕ ಜಪಯಜ್ಞದ ಕಾರ್ಯಕ್ರಮದ ಧಾರ್ಮಿಕ ಸಭೆಯಲ್ಲಿ ದಿಕ್ಸೂಚಿ ಭಾಷಣ ಮಾಡಿ ಮಾತನಾಡಿದರು.
ಹಿಂದುಗಳಿಗೆ ಪವಿತ್ರವಾದ ಭಗವದೀತೆಯ ಒಂದೊಂದು ಶ್ಲೋಕಗಳು ಇತಿಹಾಸ. ಮಹಾಭಾರತ, ರಾಮಾಯಣ ಹಾಗೂ ಭಗವದ್ಗೀತೆಗಳು ನಮ್ಮ ಜೀವನದ ದರ್ಶನ. ನಮ್ಮಲ್ಲಿ ನಮ್ಮ ಮತದ, ಸಂಸ್ಕೃತಿಯ ಅಡಿಪಾಯ ಭದ್ರವಾಗಿಲ್ಲ. ನಮ್ಮ ಭಾವನೆ, ಆಧ್ಯಾತ್ಮಿಕ ಶಕ್ತಿ ಸತ್ತು ಹೋಗುತ್ತಿದೆ. ಈ ದೇಶದ ಸಂಸ್ಕೃತಿ ಸಂಸ್ಕಾರಗಳು ಭಾರಿ ಶ್ರೇಷ್ಠವಾದುದು. ನಮ್ಮ ತಾಯಂದಿರು ನಮ್ಮ ಸಂಸ್ಕೃತಿ, ಸಂಸ್ಕಾರ ಹಾಗೂ ಜೀವನ ಮೌಲ್ಯಗಳನ್ನು ಉಳಿಸುತ್ತಿದ್ದಾರೆ. ಮುಂದಿನ ದಿನಗಳಲ್ಲಿ ನಮ್ಮ ಈ ಪವಿತ್ರವಾದ ಸಂಸ್ಕೃತಿ, ಸಂಸ್ಕಾರ ಜೀವನ ಮೌಲ್ಯಗಳು ಉಳಿಯಬೇಕಾದರೆ ಮನೆ ಮನೆಗಳು, ಮನ ಮನಗಳು ಧರ್ಮಕ್ಷೇತ್ರವಾಗಬೇಕು. ಉತ್ತಮ ಸಂಸ್ಕೃತಿ ಸಂಸ್ಕಾರಗಳನ್ನು ನಿರ್ಮಾಣ ಮಾಡಬೇಕು ಎಂದು ಅವರು ಹೇಳಿದರು. ಕುಂದಾಪ್ರ ಡಾಟ್ ಕಾಂ ಸುದ್ದಿ.
ಧರ್ಮ ಭಾರತದ ಪ್ರಾಣ. ಧರ್ಮ ಬಿಟ್ಟರೆ ಭಾರತ ಭಾರತವಾಗಿ ಉಳಿಯದು. ನಮ್ಮ ಧರ್ಮವು ವಿಶ್ವದಲ್ಲಿ ಅತಿ ಹೆಚ್ಚು ಅವಮಾನ, ಅನ್ಯಾಯಕ್ಕೆ ಒಳಗಾಗಿದೆ. ಹಿಂದು ಧರ್ಮವನ್ನು ಕೋಮುವಾದಿ, ಸಂಕುಚಿತ, ಪ್ರಗತಿ ವಿರೋಧಿ ಎಂದು ಬಿಂಬಿಸುವ ಪ್ರಯತ್ನಗಳು ಈ ಹಿಂದಿನಿಂದಲೂ ನಡೆಯುತ್ತಿದೆ. ನಮ್ಮನ್ನಾಳುವ ಸರಕಾರಗಳು ಅಲ್ಪಸಂಖ್ಯಾತರ ತುಷ್ಟೀಕರಣದಲ್ಲಿ ತೊಡಗಿಕೊಂಡಿದೆ. ಅಲ್ಪಸಂಖ್ಯಾತರಿಗೆ ವಿವಿಧ ಯೋಜನೆ, ಸೌಲಭ್ಯಗಳನ್ನು ನೀಡುತ್ತಾ ಅಲ್ಪಸಂಖ್ಯಾತರ ಅಭಿವೃದ್ಧಿಗೆ ಹೆಚ್ಚಿನ ಮುತುವರ್ಜಿ ವಹಿಸುತ್ತಿದೆ. ಓಟು, ಸೀಟು ಹಾಗೂ ನೋಟಿಗಾಗಿ ಇಂತಹ ಕೆಲಸಗಳು ನಡೆಯುತ್ತಿದ್ದು ಹಿಂದುಗಳ ಮೇಲೆ ನಿರಂತರವಾದ ದಬ್ಬಾಳಿಕೆಗಳು ನಡೆಯುತ್ತಿದೆ ಎಂದು ಅವರು ಹೇಳಿದು. ಕುಂದಾಪ್ರ ಡಾಟ್ ಕಾಂ ಸುದ್ದಿ.
ನಮ್ಮ ದೇಶದಲ್ಲಿ ಭಾರತ್ ಮಾತಾಕೀ ಜೈ ಎಂದು ಹೇಳುವಂತಿಲ್ಲ. ಪಾಕಿಸ್ತಾನ್ ಜಿಂದಾಬಾದ್ ಎಂದು ಹೇಳಿದವರನ್ನು ನಮ್ಮ ದೇಶದಿಂದ ಹೊರಗಡೆ ಹೋಗಲು ಬಿಡುವುದಿಲ್ಲ. ಇಂತಹ ಸಂದಿಗ್ಧ ಪರಿಸ್ಥಿತಿ ಬೇರೆ ಯಾವ ದೇಶದಲ್ಲಿಯೂ ಕಾಣ ಸಿಗುವುದಿಲ್ಲ. ರಾಷ್ಟ್ರಧ್ವಜವನ್ನು ವಿಶ್ವವಿದ್ಯಾನಿಲಯಗಳಲ್ಲಿ ಹಾರಾಟ ಮಾಡಲು ಬಿಡಬಾರದೆಂಬ ಭಾವನೆ ಮತ್ತು ಬೇರೆ ದೇಶಗಳ ಏಜೆಂಟರಂತೆ ವರ್ತಿಸುತ್ತಿರುವಂತೆ ಇಂದಿನ ಯುವಪೀಳಿಗೆ, ಯುವಜನಾಂಗ ನಿರ್ಮಾಣವಾಗುತ್ತಿರುವುದು ದುರಂತದ ಸಂಗತಿ. ಹೀಗಾಗಿ ನಮ್ಮ ದೇಶದ, ಧರ್ಮದ ರಕ್ಷಣೆ ನಮ್ಮೆಲ್ಲರ ಕರ್ತವ್ಯವಾಗಿದ್ದು ಇದಕ್ಕಾಗಿ ಯಾವುದೇ ತ್ಯಾಗಕ್ಕೂ ಸಿದ್ಧರಾಗಬೇಕು ಎಂದು ಅವರು ಕರೆ ನೀಡಿದರು.
ಕಾರ್ಯಕ್ರಮದಲ್ಲಿ ಆಶೀರ್ವಚನ ನೀಡಿ ಮಾತನಾಡಿದ ಬಂಟ್ವಾಳದ ಮಣಿಲ ಶ್ರೀ ಧಾಮದ ಶ್ರೀ ಮೋಹನದಾಸ ಪರಮಹಂಸ ಸ್ವಾಮೀಜಿ ಮಾತನಾಡಿ, ಜಗತ್ತಿನಲ್ಲಿ ಭಯೋತ್ಪಾದನೆ ವ್ಯಾಪಕವಾಗಿ ವ್ಯಾಪಿಸುತ್ತಿದೆ. ಅನ್ಯಮತೀಯರು ದೇಶವನ್ನು ಒಡೆಯುವ ಪ್ರಯತ್ನ ನಡೆಸುತ್ತಿದ್ದಾರೆ. ಆದುದರಿಂದ ನಮ್ಮ ದೇಶದ ಸಂಸ್ಕೃತಿಯ ಪಾವಿತ್ರ್ಯತೆಯನ್ನು ಕಾಪಾಡಿಕೊಂಡು ಬರುವುದರ ಜೊತೆಗೆ ದೇಶದ ಭದ್ರತೆ ಬಗ್ಗೆ ಹೆಚ್ಚು ಗಮನ ನೀಡಬೇಕು. ನಮ್ಮಲ್ಲಿನ ಜಾತಿಗಳನ್ನು ಬದಿಗೊತ್ತಿ ಧರ್ಮ ಸಂರಕ್ಷಣೆ, ಧರ್ಮ ಜಾಗೃತಿ ಬಗ್ಗೆ ಎಲ್ಲರೂ ಒಂದಾಗಬೇಕು ಎಂದರು.
ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಬಡಾಕೆರೆ-ನಾವುಂದದ ನಾಗಯಕ್ಷಿ ಪಾತ್ರಿಗಳಾದ ವೇದಮೂರ್ತಿ ಲೋಕೇಶ ಅಡಿಗ, ಕಳೆದ ಅನೇಕ ವರ್ಷಗಳಿಂದ ನಮ್ಮ ಧರ್ಮ ಸಂಸ್ಕೃತಿ ಮೇಲೆ ಆಕ್ರಮಣಗಳು ನಡೆದಿದ್ದರೂ ನಮ್ಮ ಸಂಸ್ಕೃತಿಯನ್ನು ಬೇಧಿಸಲು ಯಾರಿಂದಲೂ ಸಾಧ್ಯವಾಗಿಲ್ಲ. ಅಂತಹ ಅದ್ಭುತವಾದ ಶಕ್ತಿ ನಮ್ಮ ಸಂಸ್ಕೃತಿ ಧರ್ಮಕ್ಕೆ ಇದೆ. ಪ್ರೀತಿ ವಾತ್ಸಲ್ಯದಿಂದ ಸಂಸ್ಕೃತಿ ಸಂಸ್ಕಾರಗಳನ್ನು ಮೈಗೂಡಿಸಿಕೊಂಡು ಸುಭದ್ರವಾದ ದೇಶ ಕಟ್ಟಲು ಎಲ್ಲರೂ ಒಂದಾಗಬೇಕು ಎಂದು ಹೇಳಿದರು.
ಉಡುಪಿಯ ಭಾರತೀಯ ಸಂಸ್ಕೃತಿ ಪ್ರತಿಷ್ಠಾನದ ಅಧ್ಯಕ್ಷ ಎಂ.ರಾಜಶೇಖರ ಹೆಬ್ಬಾರ್ ಅಧ್ಯಕ್ಷತೆ ವಹಿಸಿದ್ದರು. ಕೆನರಾ ಗೂಡ್ಸ್ ಟ್ರಾನ್ಸ್‌ಪೋರ್ಟ್ಸ್‌ನ ಪಾಲುದಾರ ಎಂ.ರಘುವೀರ ಪೈ ಶುಭಾಶಂಸನೆಗೈದರು. ಇದೇ ಸಂದರ್ಭ ಕುಂದಾಪುರ ವಕೀಲರಾದ ರವಿಚಂದ್ರ ಶೆಟ್ಟಿ, ರಾಘವೇಂದ್ರ ಚರಣ್ ನಾವಡ, ಡಾ.ಶಿವಾನಂದ ರಾವ್ ಗಂಗೊಳ್ಳಿ, ಹೂವ ಕಾರ್ವಿ, ಲಕ್ಷ್ಮೀಕಾಂತ ಮಡಿವಾಳ, ಬೈರು ನಾರಾಯಣ ಖಾರ್ವಿ, ಆನಂದ ನಾಯಕ್ ತ್ರಾಸಿ, ಲಕ್ಷ್ಮೀ ಗಾಣಿಗ, ಚಂದ್ರಾವತಿ ಖಾರ್ವಿ ಲೈಟ್‌ಹೌಸ್, ಶೀನ ಪಟೇಲ್ ದಾಕುಹಿತ್ಲು, ಗಂಗಾಧರ ಗಾಣಿಗ, ವೈ.ಸುರೇಶ ಖಾರ್ವಿ, ಚಂದ್ರ ಮೇಸ್ತ ಬಾಂಡ್ಯ, ಕುಮಾರ್ (ಪುಟ್ಟ) ಗಂಗೊಳ್ಳಿ ಇವರನ್ನು ಸನ್ಮಾನಿಸಿ ಗೌರವಿಸಲಾಯಿತು. ಗಂಗೊಳ್ಳಿಯ ಮತ್ಸ್ಯೋದ್ಯಮಿ ಮಡಿಕಲ್ ಸುರೇಶ ಖಾರ್ವಿ, ಗಂಗೊಳ್ಳಿಯ ಉದ್ಯಮಿ ಉಪೇಂದ್ರ ಪೂಜಾರಿ, ಶ್ರೀ ರಾಮನಾಮ ತಾರಕ ಜಪಯಜ್ಞ ಸಮಿತಿಯ ಗೌರವಾಧ್ಯಕ್ಷ ವೇದಮೂರ್ತಿ ಜಿ.ನಾರಾಯಣ ವಿಶ್ವನಾಥ ಆಚಾರ್ಯ ಮತ್ತಿತರರು ಉಪಸ್ಥಿತರಿದ್ದರು. ಕುಂದಾಪ್ರ ಡಾಟ್ ಕಾಂ ಸುದ್ದಿ.
ಮಾಜಿ ಶಾಸಕ ಕೆ.ಲಕ್ಷ್ಮೀನಾರಾಯಣ, ವಿಹಿಂಪ ಉಡುಪಿ ಜಿಲ್ಲಾಧ್ಯಕ್ಷ ಬೈಕಾಡಿ ಸುಪ್ರಸಾದ್ ಶೆಟ್ಟಿ, ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಸ್ಥಾನದ ಮಾಜಿ ಆಡಳಿತ ಧರ್ಮದರ್ಶಿ ಬಿ.ಎಂ.ಸುಕುಮಾರ್ ಶೆಟ್ಟಿ, ರಾಷ್ಟ್ರೀಯ ಸ್ವಯಂಸೇವಕ ಸಂಘದ ಸುಬ್ರಹ್ಮಣ್ಯ ಹೊಳ್ಳ, ಶಂಕರ ಅಂಕದಕಟ್ಟೆ, ಜಿಪಂ ಸದಸ್ಯೆ ಶೋಭಾ ಜಿ.ಪುತ್ರನ್, ತಾಪಂ ಸದಸ್ಯರಾದ ಗಂಗೊಳ್ಳಿ ಸುರೇಂದ್ರ ಖಾರ್ವಿ, ನಾರಾಯಣ ಕೆ. ಗುಜ್ಜಾಡಿ, ರಾಜು ದೇವಾಡಿಗ ತ್ರಾಸಿ, ಕುಂದಾಪುರ ಪುರಸಭೆ ಉಪಾಧ್ಯಕ್ಷ ರಾಜೇಶ ಕಾವೇರಿ ಮತ್ತಿತರರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.
ಶ್ರೀ ರಾಮನಾಮ ತಾರಕ ಜಪಯಜ್ಞ ಸಮಿತಿಯ ಅಧ್ಯಕ್ಷ ಜಿ.ಪುರುಷೋತ್ತಮ ಆರ್ಕಾಟಿ ಸ್ವಾಗತಿಸಿದರು. ಗಂಗೊಳ್ಳಿ ಹಿಂಜಾವೇ ಅಧ್ಯಕ್ಷ ಗೋವಿಂದ್ರಾಯ ಶೇರುಗಾರ್ ಆಶಯ ಭಾಷಣ ಮಾಡಿದರು. ಹಿಂಜಾವೇ ಉಡುಪಿ ಜಿಲ್ಲಾ ಹಿಂಜಾವೇ ಸಹ ಸಂಚಾಲಕ ಟಿ.ವಾಸುದೇವ ದೇವಾಡಿಗ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಸುಂದರ ಜಿ. ಕಾರ್ಯಕ್ರಮ ನಿರೂಪಿಸಿದರು. ಸತೀಶ ಜಿ. ವಂದಿಸಿದರು. ಕಾರ್ಯಕ್ರಮಕ್ಕೂ ಮೊದಲು ಸ್ವಾಮೀಜಿಯವರನ್ನು ಗಂಗೊಳ್ಳಿಯ ಶ್ರೀ ರಾಮ ಮಂದಿರದ ಬಳಿಯಿಂದ ಪೂರ್ಣಕುಂಭ ಸ್ವಾಗತದೊಂದಿಗೆ ಬರಮಾಡಿಕೊಳ್ಳಲಾಯಿತು.