ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು: ವೈಜ್ಞಾನಿಕ ಮನೋಭಾವನೆ, ಹೊಸ ಚಿಂತನೆಗಳನ್ನು ಮಕ್ಕಳ ಮನಸ್ಸಿಗೆ ನಾಟುವಂತೆ ಶಿಕ್ಷಕರು ಪ್ರೇರಣೆ ನೀಡಬೇಕು. ಶೈಕ್ಷಣಿಕ, ಕ್ರೀಡೆ, ಸಾಂಸ್ಕೃತಿಕ ಕ್ಷೇತ್ರಗಳಲ್ಲಿ ಪ್ರಗತಿ ಸಾಧಿಸಲು ಕ್ರೀಯಾಶೀಲ ಶಿಕ್ಷಕರಿಂದ ಮಾತ್ರ ಸಾಧ್ಯ ಎಂದು ಉಡುಪಿ ಜಿಪಂ ಮಾಜಿ ಅಧ್ಯಕ್ಷ ಎಸ್. ರಾಜು ಪೂಜಾರಿ ಹೇಳಿದರು.
ಶತಮಾನೋತ್ಸವ ಸಂಭ್ರಮ ಆಚರಿಸುತ್ತಿರುವ ಶಾಸಕರ ಮಾದರಿ ಶಾಲೆಯಲ್ಲಿ ನಡೆದ ಪ್ರತಿಭಾ ಪುರಸ್ಕಾರ ಮತ್ತು ಪ್ರದರ್ಶನ ಕಾರ್ಯಕ್ರಮದಲ್ಲಿ ಮಾತನಾಡಿದರು. ಶಿಕ್ಷಣದ ಜತೆಯಲ್ಲಿ ಸಾಂಸ್ಕೃತಿಕ, ಭೌತಿಕ ಹಾಗೂ ಸಂಸ್ಕಾರಯುತ ಪರಿಸರ ನಿರ್ಮಾಣ ಮಾಡಿದಾಗ ಆ ಶಾಲೆಯು ಸರ್ವತೋಮುಖ ಅಭಿವೃದ್ದಿಯೊಂದಿಗೆ ಉತ್ತಮ ಫಲಿತಾಂಶ ನೀಡಲು ಸಾಧ್ಯವಾಗುತ್ತದೆ ಎಂದರು.
ಸರಕಾರ ಶಿಕ್ಷಣ ಕ್ಷೇತ್ರಕ್ಕೆ ಸಾಕಷ್ಟು ಅನುದಾನ ನೀಡುತ್ತಿದ್ದು, ಶಾಲೆಗಳು ಇದರ ಪೂರ್ಣಪ್ರಮಾಣದ ಪ್ರಯೋಜನ ಪಡೆಯಬೇಕು ಎಂದ ಪೂಜಾರಿ, ಪೋಷಕರು ಕಾಲಕಾಲಕ್ಕೆ ತಮ್ಮ ಮಕ್ಕಳ ಶಿಕ್ಷಣದ ಗುಣಮಟ್ಟವನ್ನು ಗಮನಿಸುವುದು ತುಂಬಾ ಅವಶ್ಯಕ. ಇದರಿಂದ ಮಕ್ಕಳು ತಪ್ಪುದಾರಿಯಲ್ಲಿ ಸಾಗದಂತೆ ತಡೆಯಲು ಸಹಕಾರಿಯಾಗುತ್ತದೆ ಎಂದರು.
ಎಸ್‌ಡಿಎಂಸಿ ಅಧ್ಯಕ್ಷ ರವೀಂದ್ರ ಶ್ಯಾನುಭಾಗ್ ಅಧ್ಯಕ್ಷತೆವಹಿಸಿದ್ದರು. ಉಪಾಧ್ಯಕ್ಷೆ ಗಿರಿಜಾ ದೇವಾಡಿಗ, ಶತಮಾನೋತ್ಸವ ಸಮಿತಿಯ ಉಪಾಧ್ಯಕ್ಷ ಜಯಾನಂದ ಹೋಬಳಿದಾರ್, ತಾಪಂ ಸದಸ್ಯೆ ಸುಜಾತಾ ದೇವಾಡಿಗ, ಎಸ್‌ಡಿಎಂಸಿ ಸದಸ್ಯರಾದ ನಾಗರತ್ನ, ಶಾಂತಾ, ಮಣಿಕಂಠ, ವಿದ್ಯಾರ್ಥಿ ನಾಯಕಿ ರಂಜೀತ ಉಪಸ್ಥಿತರಿದ್ದರು. ಕುಂದಾಪ್ರ ಡಾಟ್ ಕಾಂ ಸುದ್ದಿ.
ಪದವೀಧರ ಮುಖ್ಯಶಿಕ್ಷಕ ಜನಾರ್ದನ ದೇವಾಡಿಗ ಪ್ರಾಸ್ತಾವಿಸಿದರು. ವೀಣಾ ಹೆಗಡೆ ಸ್ವಾಗತಿಸಿ, ನಾರಾಯಣ ದೇವಾಡಿಗ ವಂದಿಸಿದರು. ಗಣಪತಿ ಹೋಬಳಿದಾರ ನಿರೂಪಿಸಿದರು. ನಂತರ ಶಾಲಾ ವಿದ್ಯಾರ್ಥಿಗಳಿಂದ ಪ್ರತಿಭಾ ಪ್ರದರ್ಶನ ನಡೆಯಿತು.