ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು: ಸಮೀಪದ ಹೇರೂರು ಗ್ರಾಮದ ಯರುಕೋಣೆ ಗ್ರಾಮೀಣ ಪ್ರದೇಶದ ಸುಜಾತಾ ಪೂಜಾರಿ 2015-16ನೆ ಸಾಲಿನ ರಾಷ್ಟ್ರಪತಿ ರೇಂಜರ್ ಪರೀಕ್ಷೆಯಲ್ಲಿ ತೇರ್ಗಡೆಯಾಗಿದ್ದಾರೆ. ಕೆಲ ಸಮಯದ ಹಿಂದೆ ರಾಜಸ್ಥಾನದಲ್ಲಿ ನಡೆದಿದ್ದ ಅವಾರ್ಡ್ ಪರೀಕ್ಷೆಯಲ್ಲಿ ಯಶಸ್ವಿಯಾಗಿರುವ ಅವರು ಸದ್ಯವೇ ನವದೆಹಲಿಯ ರಾಷ್ಟ್ರಪತಿ ಭವನದಲ್ಲಿ ನಡೆಯುವ ಪದವಿ ಪ್ರದಾನ ಸಮಾರಂಭದಲ್ಲಿ ರಾಷ್ಟ್ರಪತಿ ಪ್ರಣವ್ ಮುಖರ್ಜಿ ಅವರಿಂದ ಪ್ರಶಸ್ತಿ ಸ್ವೀಕರಿಸುವರು.
ಉಡುಪಿ ಅಜ್ಜರಕಾಡಿನ ಜಿ. ಶಂಕರ್ ಮಹಿಳಾ ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಕಳೆದ ಸಾಲಿನಲ್ಲಿ ಪದವಿ ಶಿಕ್ಷಣ ಪಡೆಯುತ್ತಿದ್ದ ಸಂದರ್ಭದಲ್ಲಿ ಅವರು ಕಾಲೇಜಿನ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್‌ನ ರೇಂಜರ್ ದಳ ಸೇರಿದ್ದರು. ಹಿಂದಿನ ಸಾಲಿನಲ್ಲಿ ಅವರಿಗೆ ರಾಜ್ಯ ಪುರಸ್ಕಾರ ಲಭಿಸಿತ್ತು. ಈ ಸಾಲಿನಲ್ಲಿ ಕರ್ನಾಟಕದ 10 ಯುವತಿಯರು ರಾಷ್ಟ್ರಪತಿ ರೇಂಜರ್ ಪ್ರಶಸ್ತಿಗೆ ಅರ್ಹತೆ ಗಳಿಸಿದ್ದಾರೆ. ಅವರಲ್ಲಿ 6 ಜನರು ಉಡುಪಿಯವರಾಗಿದ್ದರೆ, ಸುಜಾತಾ ಕುಂದಾಪುರ ತಾಲೂಕಿಗೆ ಸೇರಿದ ಏಕೈಕ ಅಭ್ಯರ್ಥಿಯಾಗಿದ್ದಾರೆ. ಪ್ರಶಸ್ತಿಗೆ ಸ್ಪರ್ಧಿಸಲು ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್‌ನ ಜಿಲ್ಲಾ ಅಸೋಸಿಯೇಶನ್ ನೆರವಾಗಿದೆ. ಕುಂದಾಪ್ರ ಡಾಟ್ ಕಾಂ ಸುದ್ದಿ.
ಯರುಕೋಣೆಯ ಕೂಲಿ ಕಾರ್ಮಿಕ ದಂಪತಿ ಬೆಟ್ಟನಬೋಳೆ ಶೀನ ಪೂಜಾರಿ ಮತ್ತು ಮುತ್ತು ದಂಪತಿಯ ಕೊನೆಯ ಪುತ್ರಿಯಾಗಿರುವ ಸುಜಾತಾ ರಾಗಿಹಕ್ಲು ಶಾಲೆಯಲ್ಲಿ ಪ್ರಾಥಮಿಕ ಶಿಕ್ಷಣ ಮತ್ತು ನಾವುಂದದಲ್ಲಿ ಪ್ರೌಢಶಾಲಾ ಶಿಕ್ಷಣ ಪಡೆದವರು. ಈ ಹಳ್ಳಿಯ ಪ್ರತಿಭೆ ದಿಲ್ಲಿಯ ಮಟ್ಟಕ್ಕೇರುವ ಸಾಧನೆಗೈದ ಬಗ್ಗೆ ಯರುಕೋಣೆಯಲ್ಲಿ ಹರ್ಷಭರಿತ ಪ್ರತಿಕ್ರಿಯೆ ವ್ಯಕ್ತವಾಗಿದೆ.