ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ : ಶತಮಾನ ಕಂಡ ಸರಕಾರಿ ಶಾಲೆಯಲ್ಲಿ ಆಧುನಿಕ ತಂತ್ರಜ್ಞಾನವನ್ನೊಳಗೊಂಡ ವಿದ್ಯುನ್ಮಾನ ಕಲಿಕೆ ಯಂತ್ರದಿಂದ ಪಾಠ ಭೋಧಿಸುವ ಕ್ರಮವನ್ನು ಅಳವಡಿಸಿಕೊಂಡಿರುವುದರಿಂದ ವಿದ್ಯಾರ್ಥಿಗಳು ಬಹಳ ಆಸಕ್ತಿಯಿಂದ ಪಾಠವನ್ನು ಆಲಿಸಿಕೊಂಡು ತಮ್ಮ ಜ್ಞಾನ ಕೌಶಲವನ್ನು ಹೆಚ್ಚಿಸಿಕೊಳ್ಳಲು ಅನುಕೂಲವಾಗಿದೆ. ಶಿಕ್ಷಣದ ಆಧುನೀಕರಣದಿಂದ ವಿದ್ಯಾರ್ಥಿಗಳ ಸಮಗ್ರ ವಿಕಾಸ ಸಾಧ್ಯ ಎನ್ನುವ ನಿಟ್ಟಿನಲ್ಲಿ ರೋಟರಿ ೩೧೮೦ ಜಿಲ್ಲೆಯಲ್ಲಿ ಮೊದಲ ಬಾರಿಗೆ ಪುರಸಭಾ ವ್ಯಾಪ್ತಿಯ ಶಾಲೆಗೆ ರೋಟರಿಯಿಂದ ಸ್ಮಾರ್ಟ್ ಕ್ಲಾಸ್ ಇ ಲರ್ನಿಂಗ್ ಕಿಟ್‌ನ್ನು ನೀಡಲಾಗುತ್ತಿದೆ ಎಂದು ರೋಟರಿ ಜಿಲ್ಲಾ ಗವರ್ನರ್ ಭರತೇಶ್ ಅಧಿರಾಜ್ ಹೇಳಿದರು.
ಅವರು ಕುಂದಾಪುರದ ಸರಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆ(ಗರ್ಲ್ಸ್ ಸ್ಕೂಲ್)ಗೆ ರೋಟರಿ ಕ್ಲಬ್ ಕುಂದಾಪುರ ಸನ್‌ರೈಸ್ ವತಿಯಿಂದ ಕೊಡಮಾಡಲ್ಪಟ್ಟ ಸ್ಮಾರ್ಟ್ ಕ್ಲಾಸ್ ಇ ಲರ್ನಿಂಗ್ ಕಿಟ್‌ನ್ನು ಉದ್ಘಾಟಿಸಿ ಶುಭಹಾರೈಸಿದರು.
ರೋಟರಿ ಕ್ಲಬ್ ಕುಂದಾಪುರ ಸನ್‌ರೈಸ್‌ನ ಅಧ್ಯಕ್ಷ ದಿನಕರ ಪಟೇಲ್ ಮಾತನಾಡಿ, ಸರಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆ(ಗರ್ಲ್ಸ್ ಸ್ಕೂಲ್)ಯ ಶತಮಾನೋತ್ಸವ ಸಮಿತಿ ಹಾಗೂ ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷರಾಗಿ ಶಾಲೆಯ ಸರ್ವಾಂಗೀಣ ಅಭಿವೃದ್ಧಿಗೆ ಶ್ರಮಿಸಿದ್ದು, ಶಾಲೆಯನ್ನು ಆಧುನಿಕರಣಗೊಳಿಸುವ ಉದ್ದೇಶದಿಂದ ಸ್ಮಾರ್ಟ್ ಕ್ಲಾಸ್‌ನ್ನು ಕೊಡುಗೆಯಾಗಿ ನೀಡಲಾಗಿದೆ. ಇದರ ಸಂಪೂರ್ಣ ಪ್ರಯೋಜನವನ್ನು ವಿದ್ಯಾರ್ಥಿಗಳು ಪಡೆದುಕೊಂಡಾಗ ನಮ್ಮ ಶ್ರಮ ಸಾರ್ಥಕವಾಗುತ್ತದೆ ಎಂದರು.
ಈ ಸಂದರ್ಭದಲ್ಲಿ ರೋಟರಿ ಅಸಿಸ್ಟೆಂಟ್ ಗವರ್ನರ್ ಸತೀಶ್ ಎನ್. ಶೇರೆಗಾರ್, ಜೋನಲ್ ಲೆಫ್ಟಿನೆಂಟ್ ಗಜೇಂದ್ರ ಶೆಟ್ಟಿ, ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷೆ ಕುಸುಮಾ ಚರಣ್ ಶ್ಯಾನುಭಾಗ್, ಶ್ರೀ ಮಹಾಂಕಾಳಿ ದೇವಸ್ಥಾನದ ಅಧ್ಯಕ್ಷ ಜಯಾನಂದ ಖಾರ್ವಿ, ಸಮೂಹ ಸಂಪನ್ಮೂಲ ವ್ಯಕ್ತಿ ಸದಾನಂದ ಶೆಟ್ಟಿ, ಇ ಲರ್ನಿಂಗ್ ಕಿಟ್ ದಾನಿಗಳಾದ ಚಂದ್ರಕಾಂತ ಶೆಣೈ, ಬಿ. ಕಿಶೋರ್‌ಕುಮಾರ್, ದಿನಕರ ಕೊತ್ವಾಲ್, ನಿವೃತ್ತ ಶಿಕ್ಷಕಿ ಸುಮಿತ್ರ, ಸುಧೀರ, ರೋಟರಿ ಸನ್‌ರೈಸ್ ಕಾರ್ಯದರ್ಶಿ ಗಣೇಶ್ ಸಿ. ಎಚ್. ಇನ್ನಿತರರು ಉಪಸ್ಥಿತರಿದ್ದರು. ಶಾಲಾ ಮುಖ್ಯೋಪಧ್ಯಾಯ ಡಿ. ಲಿಂಗಪ್ಪ ಸ್ವಾಗತಿಸಿ, ಪ್ರಾಸ್ತಾವಿಕ ಮಾತುಗಳನ್ನಾಡಿದರು. ಸಹ ಶಿಕ್ಷಕಿ ಸುಮನಾ ಎನ್. ಕಾರ್ಯಕ್ರಮ ನಿರೂಪಿಸಿದರು. ದೈಹಿಕ ಶಿಕ್ಷಣ ಶಿಕ್ಷಕ ಸುನಿಲ್ ಕುಮಾರ್ ವಂದಿಸಿದರು.