ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಮರವಂತೆ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಆರಂಭವಾದ ಮತ್ತು ಬಳಿಕದ ಕೆಲವು ವರ್ಷಗಳ ದಾಖಲೆಗಳು ನಶಿಸಿಹೋದ ಕಾರಣ ಶಾಲೆಯ ಕಾಲಾವಧಿಯ ನಿಖರ ಮಾಹಿತಿ ಇಲ್ಲದಿದ್ದರೂ, ಅದು ಎಂಬತ್ತನ್ನು ಸಮೀಪಿಸಿದೆ ಎನ್ನುವುದು ಊರ ಹಿರಿಯರ ಅನುಭವದ ನುಡಿ. ಎಂಬತ್ತು ವರ್ಷ ಎನ್ನುವುದು ಸುದೀರ್ಘ ಎನ್ನಬಹುದಾದ ಕಾಲಮಾನ. ಕಿರಿಯ ಪ್ರಾಥಮಿಕ ಶಾಲೆಯಾಗಿ ಆರಂಭವಾದ ಅದು ಮುಂದೆ ಹಿರಿಯ ಪ್ರಾಥಮಿಕ ಶಾಲೆಯಾಯಿತು. ಆಂಗ್ಲ ಮಾಧ್ಯಮದ ಔನ್ನತ್ಯದ ಭ್ರಮೆಗೆ ಒಳಗಾದ ಈಚಿನ ತಲೆಮಾರನ್ನು ಬಿಟ್ಟರೆ ಊರಿನ ಉಳಿದೆಲ್ಲ ಅಕ್ಷರಸ್ಥರು, ಶಿಕ್ಷಿತರು, ಸಾಧಕರು ಇಲ್ಲೇ ಆರಂಭ ಮಾಡಿದವರು. ಅವರಲ್ಲಿ ಹಲವರು ಆಡಳಿತಗಾರರು, ಬ್ಯಾಂಕರುಗಳು, ಶಿಕ್ಷಕರು, ವಿಜ್ಞಾನಿಗಳು, ಉದ್ಯಮಿಗಳು, ಕಲಾವಿದರಾಗಿ ಮೂಡಿ ಬಂದಿದ್ದಾರೆ. ಆ ಪರಂಪರೆಯನ್ನು ಅದು ಈಗಲೂ ಉಳಿಸಿಕೊಂಡಿದೆ.
ಶಾಲೆಯ ಅಮೃತ ಮಹೋತ್ಸವಕ್ಕೆ ಎರಡು ವರ್ಷಗಳ ಹಿಂದೆ ಚಾಲನೆ ನೀಡಲಾಗಿತ್ತು. ಈ ಕಾಲಘಟ್ಟವನ್ನು ಸ್ಮರಣೀಯವಾಗಿಸಬೇಕು; ಉತ್ಸವದ ಸಂಭ್ರಮದ ನಡುವೆ ಶಾಲೆಗೆ ಶಾಶ್ವತ ಆಸ್ತಿ ಸೃಜಿಸಿಬೇಕು ಎನ್ನುವುದು ಉತ್ಸವಾಚರಣೆಗೆ ರೂಪಿಸಲ್ಪಟ್ಟ ಪ್ರಾತಿನಿಧಿಕ ಸಮಿತಿಯ ಸಂಕಲ್ಪ. ಈ ಸಂಕಲ್ಪ ಸಿದ್ಧಿಗೆ ಊರವರ, ಶಾಲಾಭಿವೃದ್ಧಿ ಸಮಿತಿಯ, ಹಿಂದಿನ ವಿದ್ಯಾರ್ಥಿಗಳ, ಶಿಕ್ಷಣಾಭಿಮಾನಿ ದಾನಿಗಳ, ಶಿಕ್ಷಕರ ಸಹಯೋಗ, ಉದಾರ ನೆರವು ಒದಗಿಬಂತು. ಈ ನಡುವೆ ಸರಕಾರ ಎರಡು ಕೊಠಡಿಗಳ ನಿರ್ಮಾಣಕ್ಕೆ ಅನುದಾನ ನೀಡಿತು. ಅಮೃತ ಮಹೋತ್ಸವ ಸಮಿತಿ ಅದಕ್ಕೆ ಹೊಂದಿಕೊಂಡು ಒಂದು ಕೊಠಡಿ ನಿರ್ಮಿಸಿ, ಮೂರು ತಗರತಿ ಕೋಣೆಗಳ ಮೇಲೆ ಕಿರು ಸಭಾ ಭವನ ನಿರ್ಮಿಸಿತು. ಕುಂದಾಪ್ರ ಡಾಟ್ ಕಾಂ ಸುದ್ದಿ.
ಇದೀಗ 16 ಮತ್ತು 17ಕ್ಕೆ ಅಮೃತ ಸಂಭ್ರಮದ ಮುಹೂರ್ತ ನಿಗದಿಯಾಗಿದೆ. 16ರ ಬೆಳಿಗ್ಗೆ ಜಿಲ್ಲಾ ಪಂಚಾಯಿತಿಯ ಮಾಜಿ ಅಧ್ಯಕ್ಷ ಎಸ್. ರಾಜು ಪೂಜಾರಿ ತಮ್ಮ ತಂದೆ ರಾಮ ಪೂಜಾರಿ ಅವರ ಸ್ಮರಣೆಗೆ ನಿರ್ಮಿಸಿಕೊಟ್ಟಿರುವ ಧ್ವಜಸ್ತಂಭದ ಉದ್ಘಾಟನೆಯೊಂದಿಗೆ ಉತ್ಸವ ಚಾಲನೆ ಪಡೆಯಲಿದೆ. ಕೋಟ ಪಡುಕೆರೆಯ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ಡಾ. ರಾಜೇಂದ್ರ ನಾಯಕ್, ಶಿಕ್ಷಣ ತಜ್ಞರು, ಇಲಾಖಾ ಅಧಿಕಾರಿಗಳು ಶೈಕ್ಷಣಿಕ ಚಿಂತನ ಮಂಥನ ನಡೆಸುವರು. ಹಿರಿಯ ಶಿಕ್ಷಕರಿಗೆ ಗೌರವ ಸಲ್ಲಿಕೆಯಾಗಲಿದೆ.
ಸಂಜೆ ಸಂಸದ ಬಿ. ಎಸ್. ಯಡಿಯೂರಪ್ಪ ಉತ್ಸವವನ್ನು ವಿದ್ಯುಕ್ತವಾಗಿ ಉದ್ಘಾಟಿಸುವರು. ಶಿಕ್ಷಣ ಸಚಿವ ಕಿಮ್ಮನೆ ರತ್ನಾಕರ ಅಮೃತ ಭವನ ಉದ್ಘಾಟಿಸುವರು. ಶಾಸಕ ಕೆ. ಗೋಪಾಲ ಪೂಜಾರಿ ಅಧ್ಯಕ್ಷತೆ ವಹಿಸಲಿದ್ದು, ವಿಧಾನ ಪರಿಷತ್ ಸದಸ್ಯ ಕೆ. ಪ್ರತಾಪಚಂದ್ರ ಶೆಟ್ಟಿ ಕಂಪ್ಯೂಟರ್ ಕೊಠಡಿ ಉದ್ಘಾಟಿಸುವರು. ಕೆನಡಾದಲ್ಲಿ ವಿಜ್ಞಾನಿಯಾಗಿರುವ ಶಾಲೆಯ ಹಿಂದಿನ ವಿದ್ಯಾರ್ಥಿ ಡಾ. ಶ್ರೀನಿವಾಸ ಮಧ್ಯಸ್ಥ, ಜನಪ್ರತಿನಿಧಿಗಳು, ಅಧಿಕಾರಿಗಳು ಅತಿಥಿಗಳಾಗಿರುವರು. ವಿದ್ಯಾರ್ಥಿಗಳು ಸಾಂಸ್ಕೃತಿಕ ಕಾರ್ಯಕ್ರಮ ಪ್ರದರ್ಶಿಸುವರು. ಕುಂದಾಪ್ರ ಡಾಟ್ ಕಾಂ ಸುದ್ದಿ.
17ರ ಸಂಜೆ ವಿಧಾನ ಪರಿಷತ್ ಸದಸ್ಯ ಕೋಟ ಶ್ರೀನಿವಾಸ ಪೂಜಾರಿ ಅವರ ಅಧ್ಯಕ್ಷತೆಯಲ್ಲಿ ನಡೆಯುವ ಕಾರ್ಯಕ್ರಮ ಹಿಂದಿನ ವಿದ್ಯಾರ್ಥಿಗಳಿಗೆ ಮೀಸಲು. ಹಿಂದಿನ ವಿದ್ಯಾರ್ಥಿ ಡಾ. ಶುಭಾ ಮರವಂತೆ ಸ್ವಸ್ತಿವಾಚನ ಮಾಡುವರು. ಡಿವೈಎಸ್‌ಪಿ ಮಂಜುನಾಥ ಶೆಟ್ಟಿ, ಮರವಂತೆ ರಾಜಶೇಖರ ಹೆಬ್ಬಾರ್ ಸೇರಿದಂತೆ ಪ್ರಮುಖರು ಅತಿಥಿಗಳಾಗಿರುವರು. ಹಳೆ ವಿದ್ಯಾರ್ಥಿಗಳು ಯಕ್ಷಗಾನ ನಾಟಕಗಳ ಮೂಲಕ ರಂಜನೆ ನೀಡುವರು. ಕುಂದಾಪ್ರ ಡಾಟ್ ಕಾಂ ಸುದ್ದಿ.
ಅಮೃತ ಮಹೋತ್ಸವವು ಊರ ಜನರಲ್ಲಿ, ಶಾಲೆಯಲ್ಲಿ ದುಡಿಯುತ್ತಿರುವ ಶಿಕ್ಷಕರಲ್ಲಿ ಶಾಲೆಯೆಡೆಗೆ ಇನ್ನಷ್ಟು ಅಭಿಮಾನ, ಹೆಮ್ಮೆ ಮೂಡಿಸಲಿದೆ. ಅವರು ಶಾಲೆಯನ್ನು ಇನ್ನಷ್ಟು ಎತ್ತರಕ್ಕೆ ಒಯ್ಯುವತ್ತ ತಮ್ಮನ್ನು ಅರ್ಪಿಸಿಕೊಳ್ಳುವರು ಎಂದು ನಿರೀಕ್ಷಿಸಲಾಗಿದೆ. / ಕುಂದಾಪ್ರ ಡಾಟ್ ಕಾಂ ಸುದ್ದಿ.