ಯಕ್ಷಗಾನದ ಮೂಲಕ ಆಶಕ್ತರ ವೈದ್ಯಕೀಯ ಚಿಕಿತ್ಸೆಗೆ 2.20ಲಕ್ಷ ಸಹಾಯಧನ ವಿತರಣೆ
ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ವಿವಿಧ ಕಾಯಿಲೆಗಳಿಂದ ಬಳಲುತ್ತಿರುವ ಆಶಕ್ತರು ಹಾಗೂ ಆಸಹಾಯಕರ ವೈದ್ಯಕೀಯ ಚಿಕಿತ್ಸೆಗೆ ಯಕ್ಷಗಾನ ಕಾರ್ಯಕ್ರಮ ಆಯೋಜಿಸುವ ಮೂಲಕ ಎರಡು ಲಕ್ಷದ ಇಪ್ಪತ್ತು ಸಾವಿರ ರೂಪಾಯಿ ಸಹಾಯಧನವನ್ನು ಹಸ್ತಾಂತರಿಸುವ ಮಾನವೀಯ ಕಾರ್ಯವನ್ನು ತ್ರಾಸಿ-ಹೊಸಪೇಟೆಯ ಮಹಿಷಮರ್ಧಿನಿ ಫ್ರೆಂಡ್ಸ್ ಮಾಡಿದೆ. ಆರ್ಥಿಕ ಅಸಹಾಯಕತೆಯಿಂದ ಬಳಲುತ್ತಿರುವ ಕುಟುಂಬಗಳ ಸಂಕಷ್ಟಕ್ಕೆ ಸ್ಪಂದಿಸುವ ನಿರ್ಧಾರ ಮಾಡಿದ ಮಹಿಷಮರ್ದಿನಿ ಫ್ರೆಂಡ್ಸ್ ಜಾತಿ,ಮತ ಧರ್ಮ ಹೊರತು ಪಡಿಸಿ ಆಯ್ದ ೮ ಮಂದಿಗೆ ವೈದ್ಯಕೀಯ ಸಹಾಯಧನ ನೀಡಿತು.
ಏ.13ರಂದು ತ್ರಾಸಿಯಲ್ಲಿ ನಡೆದ ಸಾಲಿಗ್ರಾಮ ಮೇಳದ ರಂಗವೇದಿಕೆಯಲ್ಲಿ ಸಹಾಯಧನವನ್ನು ಫಲಾನುಭವಿಗಳಿಗೆ ಹಸ್ತಾಂತರಿಸಿ ಮಾತನಾಡಿದ ತಾ.ಪಂ.ಸದಸ್ಯ ರಾಜು ದೇವಾಡಿಗ ಅವರು, ಮೊಗವೀರ ಯುವ ಸಂಘಟನೆ ಇಂದು ಡಾ.ಜಿ.ಶಂಕರ್ ನೇತೃತ್ವದಲ್ಲಿ ರಕ್ತದಾನದ ಮೂಲಕ ಜಿಲ್ಲೆಯಲ್ಲಿ ರಕ್ತದಾನದ ಮಹತ್ವದ ಅರಿವು ಮೂಡಿಸುವ ಕೆಲಸವಾಗಿದೆ. ಮಹಿಷಮರ್ದಿನಿ ಫ್ರೆಂಡ್ಸ್ ಇವತ್ತು ಒಂದು ಜಾತಿಗೆ ಸೀಮಿತವಾಗದೇ ಎಲ್ಲಾ ಧರ್ಮದ ಬಾಂಧವರಿಗೂ ಸಹಾಯಧನ ನೀಡುವ ಮೂಲಕ ಮಾನವೀಯ ಕಾರ್ಯ ಮಾಡಿದೆ ಎಂದರು.
ಜಿ.ಪಂ.ಮಾಜಿ ಸದಸ್ಯ ಅನಂತ ಮೊವಾಡಿ ಮಾತನಾಡಿ, ಸಮಾಜದಲ್ಲಿ ನೊಂದು ಬೆಂದವರಿಗೆ ಸಹಾಯ ಮಾಡುವ ನಿಸ್ವಾರ್ಥ ಕಾರ್ಯ ಶ್ಲಾಘನಾರ್ಯ. ಎರಡು ಲಕ್ಷದ ಇಪ್ಪತ್ತು ಸಾವಿರ ಮೊತ್ತದ ವೈದ್ಯಕೀಯ ಸಹಾಯಧನ ನೀಡುತ್ತಿರುವುದು ತ್ರಾಸಿ ಇತಿಹಾಸದಲ್ಲಿ ಪ್ರಥಮ ಎಂದು ಅಭಿಪ್ರಾಯ ಪಟ್ಟರು.
ಮಹಿಷಮರ್ದಿನಿ ಫ್ರೆಂಡ್ಸ್ ತ್ರಾಸಿ-ಹೊಸಪೇಟೆ ಇದರ ಅಧ್ಯಕ್ಷರಾದ ರಾಜು ಮೆಂಡನ್ ತ್ರಾಸಿ, ಮೊಗವೀರ ಯುವ ಸಂಘಟನೆಯ ಉಪಾಧ್ಯಕ್ಷ ರಾಜು ಶ್ರೀಯಾನ್, ತ್ರಾಸಿ ಗ್ರಾ.ಪಂ.ಅಧ್ಯಕ್ಷರಾದ ರವೀಂದ್ರ ಖಾರ್ವಿ, ಪಾಂಡುರಂಗ ದೇವಾಡಿಗ, ಸಾಲಿಗ್ರಾಮ ಮೇಳದ ಭಾಗವತರಾದ ರಾಘವೇಂದ್ರ ಮಯ್ಯ ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ಕಿಡ್ನಿ ವೈಫಲ್ಯದಿಂದ ಬಳಲುತ್ತಿರುವ ಪದ್ಮಾವತಿ ಸುರೇಶ ಮೊಗವೀರ ಇವರಿಗೆ ೧.೫ಲಕ್ಷ, ರಾಜೇಶ ಪೂಜಾರಿ ಭಟ್ರಹಿತ್ಲು ತ್ರಾಸಿ, ಜ್ಯೋತಿ ಮೊಗವೀರ ಸಸಿಹಿತ್ಲು ತ್ರಾಸಿ, ಸುನೀತಾ ನಾಯ್ಕ ತ್ರಾಸಿ, ಚಂದ್ರ ಶೆಟ್ಟಿಗಾರ್ ಕೊಳ್ಕೆರೆ ತ್ರಾಸಿ, ಪೆರ್ಡಿಕ್ ಫೆರ್ನಾಂಡೀಸ್ ತ್ರಾಸಿ, ದುರ್ಗಯ್ಯ ಖಾರ್ವಿ ಹೊಸಪೇಟೆ ತ್ರಾಸಿ, ಗೀತಾ ಮೊಗವೀರ ತ್ರಾಸಿ ಇವರಿಗೆ ತಲಾ ೧೦,೦೦೦ ರೂ.ಗಳ ಸಹಾಯಧನ ವಿತರಿಸಲಾಯಿತು.
ಮೊಗವೀರ ಯುವ ಸಂಘಟನೆ ಹೆಮ್ಮಾಡಿ ಘಟಕದ ಅಧ್ಯಕ್ಷ ವಾಸು.ಜಿ.ನಾಯ್ಕ್ ವಂಡ್ಸೆ ಕಾರ್ಯಕ್ರಮ ನಿರ್ವಹಿಸಿ, ವಂದಿಸಿದರು. ನಂತರ ಸಾಲಿಗ್ರಾಮ ಮೇಳದವರಿಂದ ’ವಜ್ರ ಮಾನಸಿ’ ಯಕ್ಷಗಾನ ಪ್ರದರ್ಶನ ನಡೆಯಿತು.