ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಪ್ರಮುಖ ಕಾರ್ಮಿಕ ಕಾಯಿದೆಗಳಿಗೆ ತಿದ್ದುಪಡಿ ತರಲು ಹೊರಟಿರುವ ಕೇಂದ್ರ ಸರಕಾರ ಕಾರ್ಮಿಕರ ಹಕ್ಕುಗಳನ್ನು ಕಸಿದುಕೊಳ್ಳಲು ಮುಂದಾಗಿದೆ. ಗುತ್ತಿಗೆ ಕಾರ್ಮಿಕ ಕಾನೂನಿಗೆ ತಿದ್ದುಪಡಿ ಮಾಡಿ ಸಮಾನ ಕೆಲಸಕ್ಕೆ ಸಮಾನ ವೇತನ ನೀಡಬೇಕು. ರಾಷ್ಟ್ರವ್ಯಾಪೀ ಕನಿಷ್ಠ ವೇತನ ನಿಗದಿ ಮಾಡಬೇಕು. ಅಸಂಘಟಿತ ಕಾರ್ಮಿಕರ ಸಮಾಜಿಕ ಭದ್ರತಾ ನಿಧಿ ಸ್ಥಾಪನೆಮಾಡಬೇಕು. ಕಲ್ಯಾಣ ಯೋಜನೆಗಳ ಜಾರಿಗಾಗಿ ಹಣ ಮೀಸಲಿಡಬೇಕು ಎಂದು ಸಿಐಟಿಯು ರಾಜ್ಯ ಕಾರ್ಯದರ್ಶಿ ಪ್ರತಾಪಸಿಂಹ ಹೇಳಿದರು.
ಇಲ್ಲಿನ ಕಾರ್ಮಿಕ ಭವನದಲ್ಲಿ ಸಿಐಟಿಯು ಕಾರ್ಮಿಕ ಸಂಘದ ಕುಂದಾಪುರ ತಾಲೂಕು 3ನೇ ಸಮ್ಮೇಳನ ಸಮಾರಂಭ ಉದ್ಘಾಟಿಸಿ ಪ್ರತಾಪಸಿಂಹ ಮಾತನಾಡುತ್ತಿದ್ದರು. ಕೇಂದ್ರ ಸರಕಾರ ದೇಶದ ಅಭಿವೃದ್ಧಿ ಬಗ್ಗೆ ಅಬ್ಬರದ ಪ್ರಚಾರ ಮಾಡುತ್ತದೆ. ಅಭಿವೃದ್ಧಿ ಪ್ರಗತಿ ಹೇಗೆ ಅನುಷ್ಟಾನಗೊಳಿಸಲಾಗುತ್ತದೆ ಎಂಬುದರ ಅರಿವು ಮಾಡಿಕೊಳ್ಳಬೇಕು. ಅಭಿವೃದ್ಧಿ ವ್ಯಾಪ್ತಿಯಲ್ಲಿ ಕಾರ್ಮಿಕರು, ಕೂಲಿಕಾರರು ಬರುವುದಿಲ್ಲ. ದುಡಿಯಲು ಕೂಲಿ ಕಾರ್ಮಿಕರು ಆದರೆ ಅಭಿವೃದ್ಧಿಯ ಪಾಲಕ್ಕೆ ನಾವು ಅರ್ಹರಲ್ಲ ಎಂಬ ಭಾವನೆ ಮೂಡುತ್ತಿದೆ. ಅಭಿವೃದ್ಧಿ ಎಂದರೆ ವೈಭವದ ಜೀವನ ಅಲ್ಲ. ಕನಿಷ್ಠ ಜೀವನ ಮಟ್ಟ ಜನರ ಬದುಕು ಸಮೃದ್ಧಿಯಾಗಿದೆಯೇ ? ಮೂಲಭೂತ ಸೌಕರ್ಯ ಕುಡಿಯುವ ನೀರು ಅಂಗನವಾಡಿ ಶಾಲೆಗಳಿಗೆ ಶೌಚಾಲಯವಿದೆಯೇ ? ಎಂಬುವುದು ಪ್ರಶ್ನೆಯಾಗಿಯೇ ಉಳಿದಿದೆ ಎಂದು ಪ್ರತಾಪಸಿಂಹ ಹೇಳಿದರು.
ಸಿಐಟಿಯು ತಾಲೂಕು ಪ್ರಧಾನ ಕಾರ್ಯದರ್ಶಿ ಸುರೇಶ ಕಲ್ಲಾಗರ ಸಮ್ಮೇಳನದಲ್ಲಿ – ಗತ ವರ್ಷದ ಚಟುವಟಿಕೆ ವರದಿ ಮಂಡಿಸಿದರು. ವರದಿ ಮೇಲೆ ೭ ಮಂದಿ ಕಾರ್ಮಿಕ ಪ್ರತಿನಿಧಿಗಳು ಚರ್ಚೆ ವಿಮರ್ಶೆ ನಡೆಸಿದ ಬಳಿಕ ಸರ್ವಾನುಮತದಿಂದ ವರದಿಯನ್ನು ಅಂಗೀಕರಿಸಲಾಯಿತು. ಸಿಐಟಿಯು ಮುಖಂಡ ಯು. ದಾಸಭಂಡಾರಿ ಸಿಐಟಿಯು ಧ್ವಜಾರೋಹಣ ಮಾಡಿದರು. ಮುಖಂಡರಾದ ಕೆ. ಶಂಕರ, ರತಿಶೆಟ್ಟಿ, ವೆಂಕಟೇಶ ಕೋಣಿ, ಜಯಶ್ರೀ ಪಡುವರಿ ಶೀಲಾವತಿ ಉಪಸ್ಥಿತರಿದ್ದರು.