ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು: ಯಾವುದೇ ಊರು ಪ್ರಸಿದ್ಧಿಗೆ ಬರಬೇಕಿದ್ದರೂ ಅಲ್ಲಿನ ಸಂಸ್ಕೃತಿಯ ಬೇರು ಗಟ್ಟಿಯಾಗಿರಬೇಕು. ಜೊತೆಗೆ ಜನರಲ್ಲಿ ಸಾಂಸ್ಕೃತಿಕ ಮನೋಭಾವವಿದ್ದರೆ ಬದುಕು ಸಂದರವಾಗುತ್ತದೆ ಎಂದು ಬೈಂದೂರು ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಅಂದುಕಾ ಎ.ಎಸ್ ಹೇಳಿದರು.
ಅವರು ಸಮಷ್ಟಿ ಪ್ರತಿಷ್ಠಾನ ರಿ. ಹಾಗೂ ಸ್ನೇಹ ತರಂಗ ಬೈಂದೂರು ಸಹಯೋಗದೊಂದಿಗೆ ಸುರಭಿ ರಿ. ಬೈಂದೂರು ಸಂಸ್ಥೆಯ ರಜತಯಾನ ತಿಂಗಳ ತಿರುಳು ಕಾರ್ಯಕ್ರಮದ ಅಂಗವಾಗಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಕಾರದೊಂದಿಗೆ ಶಾರದಾ ವೇದಿಕೆಯಲ್ಲಿ ಹಮ್ಮಿಕೊಂಡ ಯಕ್ಷ – ಗೊಂಬೆ ವೈಭವ ಕಾರ್ಯಕ್ರಮದಲ್ಲಿ ಅತಿಥಿಯಾಗಿ ಮಾತನಾಡಿದರು. ಧರ್ಮ ಹಾಗೂ ಸಂಸ್ಕೃತಿಗೆ ನಿಕಟವಾದ ನಂಟಿದೆ. ಅಧರ್ಮದ ಕಾರ್ಯವನ್ನು ಮಾಡದಿರುವುದೇ ಧರ್ಮ ಎಂದು ಭಾವಿಸಬೇಕಾಗುತ್ತದೆ. ಜನರಿಗೆ ಉತ್ತಮ ಸಂದೇಶ ನೀಡುವ, ಮನಸ್ಸನ್ನು ಉಲ್ಲಾಸಗೊಳಿಸುವ ಹಾಗೂ ಒಳಿತನ್ನು ಮಾಡುವ ಕಾರ್ಯವನ್ನು ಸಂಘ ಸಂಸ್ಥೆಗಳ ಮೂಲಕ ಮಾಡಬೇಕಾಗಿದೆ ಎಂದರು.
ಉದ್ಯಮಿ ನಾಕಟ್ಟೆ ಜಗನ್ನಾಥ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಕಾರ್ಯಕ್ರಮದಲ್ಲಿ ಪಶುಪಾಲನಾ ಇಲಾಖೆಯ ನಿವೃತ್ತ ಉಪನಿರ್ದೇಶಕ ಡಾ. ಶಂಕರ ಶೆಟ್ಟಿ, ಬೈಂದೂರು ಹಿರಿಯ ನಾಗರಿಕ ವೇದಿಕೆ ಅಧ್ಯಕ್ಷ ಪುಂಡಲೀಕ ನಾಯಕ್, ಯಳಜಿತ ಸಹಿಪ್ರಾ ಶಾಲೆ ಶತಮಾನೋತ್ಸವ ಸಮಿತಿ ಅಧ್ಯಕ್ಷ ವೈ. ಮಂಗೇಶ್ ಶ್ಯಾನುಭಾಗ್, ಉಪ್ಪುಂದ – ಬೈಂದೂರು ಲಯನ್ಸ್ ಕ್ಲಬ್ ಅಧ್ಯಕ್ಷ ಸತೀಶ್ ಶೆಟ್ಟಿ, ಉಪ್ಪುಂದ ಜೆಸಿಐ ಸುಪ್ರಿಮ್ ಅಧ್ಯಕ್ಷೆ ಜ್ಯೋತಿ ಜಯರಾಮ ಶೆಟ್ಟಿ, ಅಂಬಳೆ ಶ್ರೀ ರೇಣುಕಾ ಮಾತೆ ತೊಗಲು ಗೊಂಬೆ ಮೇಳದ ಯಜಮಾನ ಗುಂಡುರಾಜ ಹಾಸನ, ನಿರ್ದೇಶಕ ದೇವರಾಜ ಅಂಬಳೆ, ಸುರಭಿ ಬೈಂದೂರು ಅಧ್ಯಕ್ಷ ಆನಂದ ಮದ್ದೋಡಿ, ಕಾರ್ಯದರ್ಶಿ ರಾಮಕೃಷ್ಣ ದೇವಾಡಿಗ, ಸಮಷ್ಟಿ ಪ್ರತಿಷ್ಠಾನದ ಮ್ಯಾನೇಜಿಂಗ್ ಟ್ರಸ್ಟೀ ಸುನಿಲ್ ಹೆಚ್. ಜಿ. ಉಪಸ್ಥಿತರಿದ್ದರು.
ಸುರಭಿ ನಿರ್ದೇಶಕ ಸುಧಾಕರ ಪಿ. ಬೈಂದೂರು ಪ್ರಾಸ್ತಾವಿಕ ಮಾತುಗಳನ್ನಾಡಿದರು. ಸುರಭಿ ಸದಸ್ಯರಾದ ಗಣೇಶ್ ಪೂಜಾರಿ ಸ್ವಾಗತಿಸಿ, ಗಣೇಶ್ ಟೈಲರ್ ವಂದಿಸಿದರು. ಖಜಾಂಚಿ ರಾಘವೇಂದ್ರ ಪಡುವರಿ ಕಾರ್ಯಕ್ರಮ ನಿರೂಪಿಸಿದರು. ಶ್ರೀ ಗಣೇಶ ಯಕ್ಷಗಾನ ಗೊಂಬೆಯಾಟ ಮಂಡಳಿ ಉಪ್ಪಿನಕುದ್ರು ಇವರಿಂದ ಚೂಡಾಮಣಿ – ಲಂಕಾದಹನ ತೊಗಲು ಗೊಂಬೆಯಾಟ ಪ್ರಾತ್ಯಕ್ಷಿಕೆ ನಡೆಯಿತು.