ಕುಂದಾಪ್ರ ಡಾಟ್ ಕಾಂ ಸುದ್ದಿ.
ಗಂಗೊಳ್ಳಿ : ಸಾಮಾನ್ಯ ಜನರಿಗೆ ಕಾನೂನು ಅರಿವು ಮೂಡಿಸುವುದು ಮತ್ತು ಕಾನೂನು ಮಾಹಿತಿ ನೀಡುವ ಉದ್ದೇಶದಿಂದ ಕಾನೂನು ಸಾಕ್ಷರತೆ ಮತ್ತು ಲೋಕ ಅದಾಲತ್ ಕಾರ್ಯಕ್ರಮ ರೂಪಿಸಲಾಗಿದೆ. ದೇಶದ ಪ್ರತಿಯೊಬ್ಬರಿಗೂ ಸಮಾನವಾದ ಹಕ್ಕು ದೊರೆಯಬೇಕಿದೆ. ನಮಗೆ ದೊರೆಬೇಕಾಗಿರುವ ಹಕ್ಕುಗಳನ್ನು ಪಾಲಿಸಿಕೊಳ್ಳುವುದರ ಜೊತೆಗೆ ನಮ್ಮ ಕರ್ತವ್ಯವನ್ನು ನಿಭಾಯಿಸಬೇಕು. ಸಾಮಾನ್ಯ ಜನರಿಗೆ ಕಾನೂನಿನ ನೆರವು ಸಿಗಬೇಕೆಂಬ ದೃಷ್ಟಿಯಿಂದ ತಾಲೂಕು ಕಾನೂನು ಸೇವಾ ಸಮಿತಿಯನ್ನು ರಚಿಸಲಾಗಿದ್ದು, ಎಲ್ಲರೂ ಮುಕ್ತವಾಗಿ ತಮ್ಮ ಸಮಸ್ಯೆಗಳನ್ನು ಈ ವೇದಿಕೆ ಮೂಲಕ ಪರಿಹರಿಸಿಕೊಳ್ಳಬಹುದು ಎಂದು ಕುಂದಾಪುರದ ೨ನೇ ಹೆಚ್ಚುವರಿ ಸಿವಿಲ್ ಮತ್ತು ಪ್ರಥಮ ದರ್ಜೆ ನ್ಯಾಯಿಕಾ ದಂಡಾಧಿಕಾರಿ ಝೈಬುನ್ನಿಸಾ ಹೇಳಿದರು.
ಅವರು ಗಂಗೊಳ್ಳಿಯ ಶ್ರೀ ಶಾರದಾ ಮಂಟಪದಲ್ಲಿ ತಾಲೂಕು ಕಾನೂನು ಸೇವಾ ಸಮಿತಿ ಕುಂದಾಪುರ, ವಕೀಲರ ಸಂಘ ಕುಂದಾಪುರ, ಅಭಿಯೋಗ ಇಲಾಖೆ, ಪೊಲೀಸ್ ಇಲಾಖೆ, ಸಾರ್ವಜನಿಕ ಶಿಕ್ಷಣ ಇಲಾಖೆ, ಶಿಶು ಅಭಿವೃದ್ಧಿ ಇಲಾಖೆ, ತಾಲೂಕು ಪಂಚಾಯತ್ ಕುಂದಾಪುರ ಇವರ ಆಶ್ರಯದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಇವರ ಸಹಯೋಗದೊಂದಿಗೆ ಆಯೋಜಿಸಲಾಗಿದ್ದ ಕಾನೂನು ಸಾಕ್ಷರತಾ ರಥದ ಮೂಲಕ ಕಾನೂನು ಸಾಕ್ಷರತೆ ಮತ್ತು ಲೋಕ ಅದಾಲತ್ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಕುಂದಾಪುರ ವಕೀಲರ ಸಂಘದ ಅಧ್ಯಕ್ಷ ಬನ್ನಾಡಿ ಸೋಮನಾಥ ಹೆಗ್ಡೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿದ್ದ ಕುಂದಾಪುರದ ವಕೀಲೆ ಅಂಜಲಿ ಚಂದ್ರಕಾಂತ್ ಅವರು ಮಹಿಳೆ ಮತ್ತು ಕಾನೂನು ವಿಷಯದ ಬಗ್ಗೆ ಮಾಹಿತಿ ನೀಡಿದರು. ಕುಂದಾಪುರದ ಸಹಾಯಕ ಸರಕಾರಿ ಅಭಿಯೋಜಕ ಸಂದೇಶ ಭಂಡಾರಿ ಶುಭ ಹಾರೈಸಿದರು. ಪತ್ರಕರ್ತ ಬಿ.ರಾಘವೇಂದ್ರ ಪೈ ಉಪಸ್ಥಿತರಿದ್ದರು.
ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಸೇವಾಪ್ರತಿನಿಧಿ ವನಜಾ ಸ್ವಾಗತಿಸಿದರು. ಕುಂದಾಪುರ ವಕೀಲರ ಸಂಘದ ಪ್ರಧಾನ ಕಾರ್ಯದರ್ಶಿ ರವೀಶ್ಚಂದ್ರ ಶೆಟ್ಟಿ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ತ್ರಾಸಿ ವಲಯ ಮೇಲ್ವಿಚಾರಕ ಚಂದ್ರ ಮರಾಠೆ ಕಾರ್ಯಕ್ರಮ ನಿರೂಪಿಸಿದರು. ಕೃಷ್ಣ ಪೂಜಾರಿ ವಂದಿಸಿದರು.