ಕುಂದಾಪುರ: ನೂರಾರು ವರ್ಷಗಳ ಇತಿಹಾಸ ಹೊಂದಿರುವ ಗೊಂಬೆಯಾಟವನ್ನು ರಾಷ್ಟ್ರೀಯ ರಂಗಕಲೆ ಎಂದು ಗುರುತಿಸದೇ ಹೋದರೇ ಅದು ಕೇವಲ ಒಂದು ಪ್ರದೇಶಕ್ಕಷ್ಟೇ ಸೀಮಿತವಾಗಿಬಿಡುವ ಅಪಾಯವಿದೆ. ಕಲೆಯ ಶಕ್ತಿ ಸಾಮರ್ಥ್ಯಗಳನ್ನು ಗ್ರಹಿಸದಿರುವುದರಿಂದ ಈ ರಂಗಪ್ರಕಾರವನ್ನು ಸಮರ್ಥವಾಗಿ ಬೆಳೆಸಲು ಸಾಧ್ಯವಾಗುತ್ತಿಲ್ಲ ಎಂದು ಕರ್ನಾಟಕ ಜನಪದ ವಿಶ್ವವಿದ್ಯಾನಿಲಯದ ಕುಲಪತಿ ಡಾ. ಚಿನ್ನಪ್ಪ ಗೌಡ ಹೇಳಿದರು.
ಅವರು ಉಪ್ಪಿನಕುದ್ರು ಗೊಂಬೆಮನೆಯಲ್ಲಿ ಉಪ್ಪಿನಕುದ್ರು ಶ್ರೀ ದೇವಣ್ಣ ಪದ್ಮನಾಭ ಕಾಮತ್ ಮೆಮೋರಿಯಲ್ ಯಕ್ಷಗಾನ ಗೊಂಬೆಯಾಟ ಟ್ರಸ್ಟ್ ವಾರ್ಷಿಕೋತ್ಸವ ಸಮಾರಂಭದಲ್ಲಿ ಕೊಗ್ಗ ದೇವಣ್ಣ ಕಾಮತ್ ಪ್ರಶಸ್ತಿ ಪ್ರದಾನಿಸಿ ಮಾತನಾಡಿದರು.
ಪುರಾತನ ಕಲೆಗಳನ್ನು ಮುಂದುವರಿಸಿಕೊಂಡು ಹೋಗುವುದು ಸುಲಭವಲ್ಲ. ಪರಂಪರೆಯ ಗಾಂಭೀರ್ಯ, ಆಧುನಿಕತೆಯ ವಿಸ್ತಾರವನ್ನು ಒಳಗೊಳ್ಳುವ ಅನಿವಾರ್ಯತೆ ಕಲಾಕಾರನ ಮುಂದಿದೆ. ಸಮಾಜದಲ್ಲಿ ಸ್ವಸ್ಥ, ಸುಸಂಸ್ಕೃತ ಮನಸ್ಸುಗಳನ್ನು ಕಟ್ಟುವ ಕೆಲಸವಾದರೇ ಕಲೆಯ ಉದ್ದೇಶ ಸಾರ್ಥಕ್ಯಗೊಳ್ಳುತ್ತದೆ ಎಂದರು.
ಕನ್ನಡ ಸಾಹಿತ್ಯ ಪರಿಷತ್ ಮಾಜಿ ಅಧ್ಯಕ್ಷ ಹರಿಕೃಷ್ಣ ಪುನರೂರು ವಾರ್ಷಿಕೊತ್ಸವವನ್ನು ಉದ್ಘಾಟಿಸಿ ಶುಭ ಹಾರೈಸಿದರು. ಸಿಂಡಿಕೇಟ್ ಬ್ಯಾಂಕ್ ನಿವೃತ್ತ ಸಿನಿಯರ್ ಮ್ಯಾನೆಜರ್ ಬಾಬುರಾಯ್ ಶೆಣೈ, ಕುಂದಾಪುರದ ಚಾರ್ಟೆಟ್ ಅಕೌಂಟೆಂಟ್ ಪಿ. ಪ್ರಭಾಕರ ಮಯ್ಯ, ಹಿರಿಯ ಪತ್ರಕರ್ತ ಎಸ್. ಜನಾರ್ಧನ, ಉದ್ಯಮಿ ನಾರಾಯಣ ಮೇಲಾಡು ಉಪಸ್ಥಿತರಿದ್ದರು.
ಸಾಲಿಗ್ರಾಮ ಮಕ್ಕಳ ಮೇಳದ ಸಂಚಾಲಕ ಶ್ರೀಧರ್ ಹಂದೆ ಅವರಿಗೆ ಕೊಗ್ಗ ದೇವಣ್ಣ ಕಾಮತ್ ಪ್ರಶಸ್ತಿ ಪ್ರದಾನಿಸಲಾಯಿತು. ಸುದ್ದಿಮನೆ ವಾರಪತ್ರಿಕೆ ಸಂಪಾದಕ ಸಂತೋಷ್ ಕೋಣಿ, ಬಂಟ್ವಾಡಿ ಶಾಲೆಯ ಮುಖ್ಯ ಶಿಕ್ಷಕ ನಾಗೇಶ್ ಶ್ಯಾನುಭೋಗ್, ಯಕ್ಷಗಾನ ಕಲಾವಿದೆ ವರದಾ ಮಧುಸೂಧನ ಐತಾಳ್ ಅವರನ್ನು ಸನ್ಮಾನಿಸಲಾಯಿತು. ಉಪ್ಪಿನಕುದ್ರು ಗೊಂಬೆಯಾಟ ಅಕಾಡೆಮಿಯ ಪತ್ರಿಕೆ ’ಗೊಂಬೆ ಪ್ರಪಂಚ’ ಬಿಡುಗಡೆಗೊಳಿಸಲಾಯಿತು.
ಉಪ್ಪಿನಕುದ್ರು ಶ್ರೀ ದೇವಣ್ಣ ಪದ್ಮನಾಭ ಕಾಮತ್ ಮೆಮೋರಿಯಲ್ ಯಕ್ಷಗಾನ ಗೊಂಬೆಯಾಟ ಟ್ರಸ್ಟ್ ಅಧ್ಯಕ್ಷ ಭಾಸ್ಕರ್ ಕೊಗ್ಗ ಕಾಮತ್ ಸ್ವಾಗತಿಸಿ, ಪ್ರಾಸ್ತಾವಿಕ ಮಾತುಗಳನ್ನಾಡಿದರು. ಶಿಕ್ಷಕ ನಾಗೇಶ್ ಶ್ಯಾನುಭೋಗ್ ಕಾರ್ಯಕ್ರಮ ನಿರೂಪಿಸಿದರು.