ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ತಾಲೂಕಿನ ಶ್ರೀ ಸಿದ್ಧಿ ಶೈಕ್ಷಣಿಕ ಪ್ರತಿಷ್ಠಾನ ಹಟ್ಟಿಯಂಗಡಿಯ ಆಶ್ರಯದಲ್ಲಿ ನಡೆಯುತ್ತಿರುವ ಶ್ರೀ ಸಿದ್ಧಿವಿನಾಯಕ ವಸತಿ ಶಾಲೆಯು 2015-16ನೇ ಶೈಕ್ಷಣಿಕ ವರ್ಷದಲ್ಲಿ ನೂರು ಪ್ರತಿಶತ ಫಲಿತಾಂಶವನ್ನು ದಾಖಲಿಸುವ ಮೂಲಕ ಸಂಸ್ಥೆಯ ಶೈಕ್ಷಣಿಕವಾಗಿ ಉತ್ತಮ ಸಾಧನೆ ಮಾಡಿದೆ. ಕೇಂದ್ರಿಯ ಪಠ್ಯಕ್ರಮ ಆಧಾರಿತ ಶಿಕ್ಷಣದಲ್ಲಿ ಸತತವಾಗಿ ಹದಿಮೂರನೆಯ ಬಾರಿಗೆ ಶೇ. 100 ಫಲಿತಾಂಶವನ್ನು ದಾಖಲಿಸಿದ ತಾಲ್ಲೂಕಿನ ಏಕೈಕ ಶಾಲೆ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.
ಐಸಿಎಸಿ ಪಠ್ಯಕ್ರಮದಲ್ಲಿ ಈ ಶೈಕ್ಷಣಿಕ ಸಾಲಿನ ಪರೀಕ್ಷೆಗೆ ಹಾಜರಾದ 62 ವಿದ್ಯಾರ್ಥಿಗಳಲ್ಲಿ , 56 ವಿದ್ಯಾರ್ಥಿಗಳು ಅತ್ಯುನ್ನತ ಶ್ರೇಣಿಯಲ್ಲೂ, 6 ವಿದ್ಯಾರ್ಥಿಗಳು ಉನ್ನತ ಶ್ರೇಣಿಯಲ್ಲೂ ತೇರ್ಗಡೆಯಾಗಿದ್ದಾರೆ. ಕುಮಾರ ಶೋಧನ್ ಟಿ. ಶೆಟ್ಟಿ ಶಾಲೆಗೆ ಪ್ರಥಮ ಸ್ಥಾನ ಪಡೆದಿರುತ್ತಾರೆ.
ಬದಲಾಗುತ್ತಿರುವ ಶೈಕ್ಷಣಿಕ ಕಾಲಘಟ್ಟದಲ್ಲಿ ಯಾವುದೇ ರಾಜಿಯಿಲ್ಲದೇ ಮೂಲ ಪರಂಪರೆಯನ್ನು ಉಳಿಸಿಕೊಂಡು ಆಧುನಿಕ ಶಿಕ್ಷಣದಲ್ಲಿ ತನ್ನದೇ ಆದ ಅದ್ವಿತೀಯ ಛಾಪನ್ನು ಮೂಡಿಸಿಕೊಂಡು ಕಳೆದ ಹತ್ತೊಂಬತ್ತು ವರ್ಷಗಳಿಂದ ಕರ್ನಾಟಕ ರಾಜ್ಯದ ಅಗ್ರಪಂಕ್ತಿಯ ವಿದ್ಯಾಲಯವಾಗಿ ಬೆಳೆದು ಬಂದಿದೆ. ರಾಜ್ಯದ ಹಾಗೂ ಹೊರರಾಜ್ಯದ ಸುಮಾರು 1150ಕ್ಕೂ ಹೆಚ್ಚು ವಿದ್ಯಾರ್ಥಿಗಳು ವಿದ್ಯಾರ್ಜನೆ ಮಾಡುತ್ತಿರುವ ಈ ಶಾಲೆಯು ಸತತವಾಗಿ ಹದಿಮೂರನೇ ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ 100% ಫಲಿತಾಂಶವನ್ನು ದಾಖಲಿಸುವುದರ ಮೂಲಕ ತನ್ನ ವೈಶಿಷ್ಟ್ಯತೆಯನ್ನು ಎತ್ತಿ ಹಿಡಿದಿದೆ. ಗುಣಮಟ್ಟದ ಶಿಕ್ಷಣ ಹಾಗೂ ಶಿಕ್ಷಣಕ್ಕೆ ಪೂರಕವಾದ ವಾತಾವರಣಕ್ಕೆ ಹೆಗ್ಗುರುತಾಗಿರುವ ಸಂಸ್ಥೆಯು ನುರಿತ ಹಾಗೂ ಸಮರ್ಪಣಾ ಮನೋಭಾವವನ್ನು ಹೊಂದಿರುವ ಶಿಕ್ಷಕರ ದಂಡನ್ನು ಹೊಂದಿರುತ್ತದೆ
ಶಾಲೆಗೆ ಕೀರ್ತಿ ತಂದ ಎಲ್ಲಾ ವಿದ್ಯಾರ್ಥಿಗಳನ್ನು ಶಾಲಾ ಪ್ರಾಂಶುಪಾಲರಾದ ಶರಣ ಕುಮಾರ, ಕಾರ್ಯದರ್ಶಿಗಳಾದ ವೇದಮೂರ್ತಿ ಹೆಚ್. ರಾಮಚಂದ್ರ ಭಟ್ಟ ಹಾಗೂ ಆಡಳಿತ ಮಂಡಳಿಯವರು ಅಭಿನಂದಿಸಿದ್ದಾರೆ.