ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಬಿಸಿಲ ಬೇಗೆಯಿಂದ ಧಗದಗಿಸುತ್ತಿದ್ದ ಕುಂದಾಪುರ ತಾಲೂಕಿನ ಹಲವೆಡೆ ಇಂದು ಸಂಜೆಯ ವೇಳೆಗೆ ಮಳೆಯ ಸಿಂಚನವಾಗಿದೆ. ಕುಂದಾಪುರ ನಗರ ಹಾಗೂ ತಾಲೂಕಿನ ಸಿದ್ಧಾಪುರ, ನೇರಳಕಟ್ಟೆ, ಕೋಟೇಶ್ವರ, ಕೊಲ್ಲೂರು ಭಾಗಗಳಲ್ಲಿ ಲಘ ಮಳೆಯಾಗಿದೆ. ಇನ್ನು ಬೈಂದೂರು, ಉಪ್ಪುಂದ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಮಧ್ಯಾಹ್ನದಿಂದಲೇ ಮೋಡ ಕವಿದ ವಾತಾವರಣವಿದ್ದರೂ ಈವರೆಗೂ ಮಳೆಯಾಗಿಲ್ಲ. ಕುಂದಾಪ್ರ ಡಾಟ್ ಕಾಂ ಸುದ್ದಿ.
ದಿನದಿಂದ ದಿನಕ್ಕೆ ಸೂರ್ಯನ ಶಾಖ ಹೆಚ್ಚುತ್ತಿದ್ದು ಮಳೆಯಿಲ್ಲದೇ ಜನರು ಕಂಗೆಟ್ಟಿದ್ದರು. ಹಲವೆಡೆ ನೀರಿನ ಒರತೆಗಳು ಬತ್ತಿಹೋಗಿ ನೀರಿಗಾಗಿ ಪರಿತಪಿಸುವ ಸ್ಥಿತಿ ನಿರ್ಮಾಣವಾಗಿದೆ. ಇಂದಿನ ತುಂತುರು ಮಳೆ ಕೊಂಚ ಭೂಮಿಯನ್ನು ತಂಪುಗೊಳಿಸುವುದೇ ಹೊರತು ನೀರಿನ ಒರತೆಯನ್ನು ಹೆಚ್ಚಿಸದು. ಹಾಗಾಗಿ ಒಂದು ದೊಡ್ಡ ಮಳೆಯೇ ಬರಲಿ ಎಂದು ಜನ ಕಾಯುತ್ತಿದ್ದಾರೆ. ಇದರ ನಡುವೆ ವರ್ಷದಲ್ಲಿ ಮೊದಲು ಬಿದ್ದ ಹನಿಮಳೆಯನ್ನು ಜನ ಸ್ವಾಗತಿಸಿದ್ದಾರೆ.