ಕುಂದಾಪ್ರ ಡಾಟ್ ಕಾಂ ಸುದ್ದಿ.
ಗಂಗೊಳ್ಳಿ: ನಮ್ಮ ಹಿರಿಯರು ಸಮಾಜದ ಅಭಿವೃದ್ಧಿಗಾಗಿ ದೇವ ಗುರು ಮಂದಿರಗಳನ್ನು ಸ್ಥಾಪಿಸಿ ಸಮಾಜಕ್ಕೆ ಭದ್ರ ಬುನಾದಿಯನ್ನು ಹಾಕಿಕೊಟ್ಟು ಸನ್ಮಾರ್ಗದಲ್ಲಿ ಮುನ್ನಡೆಯಲು ಉತ್ತಮ ಮಾರ್ಗದರ್ಶನಗಳನ್ನು ನೀಡುತ್ತಾ ಬಂದಿದ್ದರು. ಆದರೆ ಇತ್ತೀಚಿನ ದಿನಗಳಲ್ಲಿ ಪ್ರತಿಯೊಂದು ಕಡೆಗಳಲ್ಲಿ ಬೇರೆ ಬೇರೆ ಕಾರಣಗಳಿಂದ ಊರಿನಲ್ಲಿ ಗೌಡ ಸಾರಸ್ವತ ಬ್ರಾಹ್ಮಣ ಸಮಾಜ ಬಾಂಧವರ ಸಂಖ್ಯೆ ಕಡಿಮೆಯಾಗುತ್ತಿದ್ದು, ಪ್ರತಿಯೊಂದು ಊರಿನಲ್ಲಿರುವ ದೇವ ಮಂದಿರಗಳನ್ನು ಸಂರಕ್ಷಿಸುವ ಬಗ್ಗೆ ಗಮನ ಹರಿಸಬೇಕು. ಜಿಎಸ್‌ಬಿ ಸಮಾಜಬಾಂಧವರು ಒಗ್ಗಟ್ಟಾಗಿ ಎಲ್ಲಾ ಕಾರ್ಯಗಳನ್ನು ನಡೆಸಬೇಕು ಎಂದು ಶಿರಾಲಿಯ ಉದ್ಯಮಿ ವೆಂಕಟೇಶ ಪ್ರಭು ಹೇಳಿದರು.
ಅವರು ಗಂಗೊಳ್ಳಿಯ ಮಲ್ಯರಮಠ ಶ್ರೀ ವೆಂಕಟರಮಣ ದೇವಸ್ಥಾನದ ಶ್ರೀ ದ್ವಾರಕಾನಾಥ ಕಲ್ಯಾಣ ಮಂಟಪದಲ್ಲಿ ಜರಗಿದ ಗಂಗೊಳ್ಳಿಯ ನಿನಾದ ಸಂಸ್ಥೆಯ 11ನೇ ವಾರ್ಷಿಕೋತ್ಸವ ಸಮಾರಂಭದಲ್ಲಿ ಮಾತನಾಡಿದರು. ಜಿಎಸ್‌ಬಿ ಸಮಾಜವನ್ನು ಇಂದು ಎಲ್ಲಾ ಸಮಾಜದವರು ಅನುಕರಣೆ ಮಾಡುತ್ತಿದ್ದಾರೆ. ಆದರೆ ನಾವು ಬೇರೆ ಸಂಸ್ಕೃತಿಯನ್ನು ಅನುಸರಿಸಿ ನಮ್ಮ ಸಂಸ್ಕೃತಿಯಿಂದ ವಿಮುಖರಾಗುತ್ತಿದ್ದೇವೆ. ನಿನಾದ ಸಂಸ್ಥೆಯು ಭಜನೆ ಮೂಲಕ ಪ್ರತಿಯೊಂದು ಕಡೆಗಳಲ್ಲಿ ಉತ್ತಮ ಸಂಸ್ಕೃತಿಯನ್ನು ಬೆಳೆಸುತ್ತಿದ್ದು, ಶೈಕ್ಷಣಿಕವಾಗಿ ಸಾಮಾಜಿಕವಾಗಿ ಮತ್ತು ಧಾರ್ಮಿಕವಾಗಿ ಈ ಸಂಸ್ಥೆಯ ಸೇವೆ ಅತ್ಯಂತ ಶ್ಲಾಘನೀಯ ಎಂದು ಹೇಳಿದರು.
ಗಂಗೊಳ್ಳಿ ಮಲ್ಯರಮಠ ಶ್ರೀ ವೆಂಕಟರಮಣ ದೇವಸ್ಥಾನದ ಪ್ರತಿನಿಧಿ ವೇದಮೂರ್ತಿ ಜಿ.ವೇದವ್ಯಾಸ ಕೆ.ಆಚಾರ್ಯ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ಇದೇ ಸಂದರ್ಭ ಮೂಲ್ಕಿ ಶ್ರೀ ವೆಂಕಟರಮಣ ದೇವಸ್ಥಾನದ ಪಿ.ವಸಂತ ನಾಯಕ್ ಪಲಿಮಾರು ಮತ್ತು ಗುಜ್ಜಾಡಿ ಸುಬ್ರಾಯ ನಾಯಕ್ ಗಂಗೊಳ್ಳಿ ಇವರನ್ನು ಸನ್ಮಾನಿಸಿ ಅಭಿನಂದಿಸಲಾಯಿತು. ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕ ಗಳಿಸಿದ ಗಂಗೊಳ್ಳಿಯ ಸರಸ್ವತಿ ವಿದ್ಯಾಲಯ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿಗಳಾದ ಪ್ರಕಾಶ್ ಪೈ ಮತ್ತು ಮಲ್ಲಿಕ್ ನಾಯಕ್ ಅವರನ್ನು ಗೌರವಿಸಲಾಯಿತು. ಶಿರ್ವ ಶ್ರೀ ಕಾಶೀ ಮಠದ ಕಾರ್ಯಕಾರಿ ಸಮಿತಿ ಸದಸ್ಯ ಡಾ.ಬಿ.ದಾಮೋದರ ಪೈ ಶುಭಾಶಂಸನೆಗೈದರು.
ನಿನಾದ ಸಂಸ್ಥೆಯ ಅಧ್ಯಕ್ಷ ಎಂ.ಮುಕುಂದ ಪೈ ಸ್ವಾಗತಿಸಿ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಕಾರ್ಯದರ್ಶಿ ಎನ್.ಗಜಾನನ ನಾಯಕ್ ವರದಿ ವಾಚಿಸಿದರು. ಜಿ.ರೋಹಿದಾಸ ನಾಯಕ್ ಸನ್ಮಾನಿತರನ್ನು ಪರಿಚಯಿಸಿದರು. ಜಿ.ಸುದರ್ಶನ ವಿ.ಆಚಾರ್ಯ ಕಾರ್ಯಕ್ರಮ ನಿರೂಪಿಸಿದರು. ಕಾರ್ಯಕ್ರಮದ ಬಳಿಕ ಎಸ್.ಸಂಜಿತ್ ನಾಯಕ್ ಹಾಗೂ ಮೈಸೂರು ಹರೀಶ ಪಾಂಡವ ತಂಡದವರ ಕೊಳಲು ಮತ್ತು ಸ್ಯಾಕ್ಸೋಫೋನ್ ಜುಗಲ್‌ಬಂದಿ ಕಾರ್ಯಕ್ರಮ ನಡೆಯಿತು.