ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಕೃಷಿಯನ್ನೇ ನಂಬಿಕೊಂಡು ಜೀವನ ನಡೆಸುತ್ತಿರುವವರಿಗೆ ಈ ಭಾರಿ ನೀರಿನ ಅಭಾವದಿಂದ ಬರ ಎದುರಿಸುತ್ತಿರುವಾಗ ಕೆರಾಡಿ ಗ್ರಾಮ ಏಕಾಏಕಿ ಮನೆ ತೆರಿಗೆ ಪರಿಷ್ಕರಣೆ ಮೂಲಕ ಐದಾರು ಪಟ್ಟು ತೆರಿಗೆ ಏರಿಸಿ ಗಾಯದ ಮೇಲೆ ಬರೆ ಎಳೆದಿದೆ. ಹೆಚ್ಚಳವಾಗಿ ಮಾಡಿರುವ ತೆರಿಗೆಯನ್ನು ಕೈಬಿಡದಿದ್ದರೆ, ಗ್ರಾಪಂಗೆ ತೆರಿಗೆ ಪಾವತಸದೇ ಪ್ರತಿಭಟಿಸಲಾಗಿತ್ತದೆ ಎಂದು ಕೆರಾಡಿ ಗ್ರಾಪಂ ಮಾಜಿ ಅಧ್ಯಕ್ಷ ಪ್ರಸನ್ನ ಕುಮಾರ್ ಶೆಟ್ಟಿ ಎಚ್ಚರಿಸಿದ್ದಾರೆ.
ಕೆರಾಡಿ ಗ್ರಾಪಂ. ಎದುರು ಮನೆ ತೆರಿಗೆ ಪರಿಷ್ಕಣೆ ವಿರುದ್ಧ ಬೆಳ್ಳಾಲ, ಕೆರಾಡಿ ಗ್ರಾಮಸ್ಥರು ನಡೆಸಿದ ಬೃಹತ್ ಪ್ರತಿಭಟನೆಯಲ್ಲಿ ಮಾತನಾಡಿ, ಕೆರಾಡಿ ಮತ್ತು ಬೆಳ್ಳಾಲದಲ್ಲಿ ಕೃಷಿ ಕೂಲಿ ಕಾರ್ಮಿಕರು ವಾಸಿಸುತ್ತಿದ್ದು, ಆರ್ಥಿಕವಾಗಿ ಹಿಂದುಳಿದವರ ಮೇಲೆ ಗ್ರಾಪಂ ಹೆಚ್ಚು ತೆರಿಗೆ ಬರೆ ಎಳೆದಿದೆ. ಗ್ರಾಪಂ ತಕ್ಷಣ ತೆರಿಗೆ ಏರಿಕೆ ಕೈಬಿಡದಿದ್ದರೆ, ತೆರಿಗೆ ಹೆಚ್ಚಳ ಕೈ ಬಿಡುವವರೆಗೂ ಹೋರಾಟ ನಡೆಸಬೇಕಾಗುತ್ತದೆ ಎಂದು ಎಚ್ಚರಿಸಿದರು.
ಗ್ರಾಪಂ ಅಭಿವೃದ್ಧಿ ಹೆಸರಲ್ಲಿ ತೆರಿಗೆ ಪರಿಷ್ಕರಣೆ ಮಾಡಲಾಗುತ್ತಿದೆ ಎಂದು ಹೇಳುತ್ತಿದ್ದು, ಜನರನ್ನು ಕತ್ತಲಲ್ಲಿಟ್ಟು ತೆರಿಗೆ ಪರಿಷ್ಕರಣೆ ಮಾಡಿದೆ. ಜನರಿಗೆ ಮಾಹಿತಿ ನೀಡದೆ, ಆಕ್ಷೇಪಕ್ಕೂ ಅವಕಾಶ ನೀಡಿದೆ ತೆರಿಗೆ ಪರಿಷ್ಕರಣೆ ಅಕ್ಷಮ್ಯವಾಗಿದ್ದು, ತೆರಿಗೆ ಹೆಚ್ಚಳಕ್ಕೆ ಗ್ರಾಮಸ್ಥರ ಆಕ್ಷೇಪವಿದೆ ಎಂದು ಹೇಳಿದರು.
ಬೃಹತ್ ಪ್ರಮಾಣದಲ್ಲಿ ಸೇರಿದ ಗ್ರಾಮಸ್ಥರು ಕೆರಾಡಿ ಬಸ್ ನಿಲ್ದಾಣದಿಂದ ಮೆರವಣಿಗೆ ಮೂಲಕ ಗ್ರಾಪಂ ಕಚೇರಿಗೆ ಆಗಮಿಸಿ, ಧಿಕ್ಕಾರ ಕೂಗಿದರು. ಪ್ರತಿಭಟನೆಯಲ್ಲಿ ಪುರುಷರೊಟ್ಟಿಗೆ ನೂರಾರು ಮಹಿಳೆಯರು ಪಾಲ್ಗೊಂಡಿದ್ದರು. ಪಕ್ಷಭೇದ ಮರೆತು ತೆರಿಗೆ ಪರಿಷ್ಕರಣೆ ವಿರೋಧಿಸುವ ತೀರ್ಮಾನಕ್ಕೆ ಬರಲಾಯಿತು. ಕೆರಾಡಿ ಗ್ರಾಪಂ ಅಭಿವೃದ್ಧಿ ಅಧಿಕಾರಿ ಸತೀಶ್ ಅವರಿಗೆ ಮನವಿ ಸಲ್ಲಿಸಲಾಯಿತು.
ಕುಂದಾಪುರ ತಾಪಂ ಮಾಜಿ ಸದಸ್ಯ ನಾಗಪ್ಪ ಕೊಠಾರಿ, ಮಂಜು ಕೊಠಾರಿ, ಸತೀಶ್ ಶೆಟ್ಟಿ, ತೇಜರಾಜ್ ಶೆಟ್ಟಿ, ವಿನೋದ್ ಪೂಜಾರಿ, ಹೆರ್ಜೆ ಕರುಣಾಕರ ಶೆಟ್ಟಿ, ಶಾಲಿನಿ ಶೆಟ್ಟಿ, ಶ್ರೀಮತಿ ಶೆಟ್ಟಿ, ಕನಕ ಆಚಾರ್ಯ, ಶ್ರೀಮತಿ ನಾಯ್ಕ ಮುಂತಾದವರು ಪ್ರತಿಭಟನೆ ನೇತೃತ್ವ ವಹಿಸಿದ್ದರು.