ಕುಂದಾಪ್ರ ಡಾಟ್ ಕಾಂ ವರದಿ.
ಕುಂದಾಪುರ: ಅಂತರಾಷ್ಟ್ರೀಯ ಖ್ಯಾತಿಯ ವ್ಯಂಗ್ಯಚಿತ್ರಕಾರ ಸತೀಶ್ ಆಚಾರ‍್ಯ ಅವರ ಮನೆಯ ಮೇಲಿನ ಹೋರ್ಡಿಂಗ್‌ನಲ್ಲಿ ಹಾಕಲಾಗಿದ್ದ ‘ಕಾಂಗ್ರೆಸ್ ಮುಕ್ತ ಭಾರತ’ ಕಾರ್ಟೂನು, ಕುಂದಾಪುರದ ಕಾಂಗೆಸಿಗರ ಕೆಂಗಣ್ಣಿಗೆ ಗುರಿಯಾಗಿದ್ದು ಪುರಸಭೆಯ ಮೂಲಕ ಉದ್ದೇಶಪೂರ್ವಕವಾಗಿ ತೆರವುಗೊಳಿಸಿದ ಘಟನೆ ನಡೆದಿದೆ. ಈ ಬಗ್ಗೆ ಸಾಮಾಜಿಕ ತಾಣಗಳಲ್ಲಿ ವ್ಯಾಪಕ ಖಂಡನೆ ಎದುರಾಗಿದೆ.
‘ಕಾಂಗ್ರೆಸ್ ಮುಕ್ತ ಭಾರತ’ ಎಂಬ ಶೀರ್ಷಿಕೆಯ ಕಾರ್ಟೂನ್ ಹೋರ್ಡಿಂಗಿನಲ್ಲಿ ದೇಶದಲ್ಲಿ ಬದಲಾಗುತ್ತಿರುವ ರಾಜಕೀಯ ಚಿತ್ರಣ ಹಾಗೂ ಬಿಜೆಪಿಯ ‘ಕಾಂಗ್ರೆಸ್ ಮುಕ್ತ ಭಾರತ’ ಘೋಷಣೆಯಂತೆ ಕಾಂಗ್ರೆಸ್ ಅಧಿಕಾರ ಕಳೆದುಕೊಳ್ಳುತ್ತಿರುವುದನ್ನು ಕೇಂದ್ರವಾಗಿಟ್ಟುಕೊಂಡು ಚಿತ್ರಿಸಲಾಗಿದ್ದ ಕಾರ್ಟೂನ್ ದೇಶದ ವಿವಿಧ ಪತ್ರಿಕೆ ಹಾಗೂ ವೆಬ್ಸೈಟ್‌ಗಳಲ್ಲಿ ಪ್ರಕಟಗೊಂಡು ಭಾರಿ ಜನಪ್ರಿಯತೆ ಗಳಿಸಿತ್ತು. ಹಾಗಾಗಿ ಈ ಕಾರ್ಟೂನು ಪ್ರತಿ ಭಾರಿಯಂತೆ ಸತೀಶ್ ಆಚಾರ‍್ಯ ಅವರ ಮನೆಯ ಮೇಲಿನ ಕಾರ್ಟೂನ್ ಕಾರ್ನರ್‌ನಲ್ಲಿ ಕೂಡ ಜಾಗ ಪಡೆದಿತ್ತು. ಆದರೆ ಕುಂದಾಪುರ ಪುರಸಭೆ ಏಕಾಏಕಿ ಫ್ಲೆಕ್ಸ್ ನಿರ್ಮೂಲನೆಯ ನೆಪವೊಡ್ಡಿ ಈ ಕಾರ್ಟೂನ್ ತೆರವುಗೊಳಿಸಿದೆ. ಇದರ ಹಿಂದೆ ಕಾಂಗ್ರೆಸ್‌ನ ಕೆಲವರ ಒತ್ತಡವೂ ಇದ್ದು ಪುರಸಭೆಯಲ್ಲಿ ಈ ವಿಷಯ ಚರ್ಚೆಗೆ ಬಂದ ಬಳಿಕವೇ ಫೆಕ್ಸ್ ತೆರವುಗೊಳಿಸುವ ನಾಟಕವಾಡಿ ಕಾರ್ಟೂನ್ ತೆಗೆದಿದ್ದಾರೆ ಎನ್ನಲಾಗಿದೆ. /ಕುಂದಾಪ್ರ ಡಾಟ್ ಕಾಂ ವರದಿ/
ಅಭಿವ್ಯಕ್ತಿ ಸ್ವಾಂತಂತ್ರ್ಯದ ಹರಣ:
ವ್ಯಕ್ತಿಯೋರ್ವರ ಅಭಿವ್ಯಕ್ತಿ ಸ್ವಾತಂತ್ರ್ಯವನ್ನು, ಟೀಕೆ-ಟಿಪ್ಪಣಿಗಳನ್ನು ಸಹಿಸದ ಕಾಂಗ್ರೆಸಿಗರು ಪುರಸಭೆಯ ಫ್ಲೆಕ್ಸ್ ನಿರ್ಮೂಲನೆಯ ಕಾರಣವಿಟ್ಟುಕೊಂಡು ಕಾರ್ಟೂನ್ ತೆರವುಗೊಳಿಸಿರುವುದು ಸಾಮಾಜಿಕ ತಾಣಗಳಲ್ಲಿ ಅಭಿವ್ಯಕ್ತಿ ಸ್ವಾತಂತ್ರ್ಯದ ಹರಣ ಎಂಬ ಕೂಗು ಎದ್ದಿದೆ. ದೇಶದಲ್ಲಿ ದಿನೇ ದಿನೇ ತನ್ನ ಖಾತೆ ಕಳೆದುಕೊಳ್ಳುತ್ತಿರುವ ಪಕ್ಷಕ್ಕೆ ಸಂಘಟನೆಗಿಂತ ಸಂಘರ್ಷದಲ್ಲಿಯೇ ಆಸಕ್ತಿ ಇದ್ದಂತೆ ತೋರುತ್ತಿರುವುದು ಈ ಘಟನೆ ಮೂಲಕವೇ ಸ್ಪಷ್ಟವಾಗುತ್ತಿದೆ ಟೀಕಿಸಿದ್ದಾರೆ. ಪುರಸಭೆ ಉದ್ದೇಶಪೂರ್ವಕವಾಗಿಯೇ ಕಾರ್ಟೂನ್ ತೆರವುಗೊಳಿದೆ ಎಂದು ಸತೀಶ್ ಆಚಾರ್ಯ ಸಾಮಾಜಿಕ ತಾಣಗಳಲ್ಲಿ ತಿಳಿಸಿದ್ದು, ತಮ್ಮ ಫೇಸ್ಟುಕ್ ಕವರ್ ಪೇಜ್‌ಗೆ ‘ಕಾಂಗ್ರೆಸ್ ಮುಕ್ತ ಭಾರತ’ ಕಾರ್ಟೂನ್ ಹಾಕಿಕೊಳ್ಳುವ ಮೂಲಕ ಪ್ರತಿಭಟಿಸಿದ್ದಾರೆ. ಈ ಬಗ್ಗೆ ಸಾಮಾಜಿಕ ತಾಣಗಳಲ್ಲಿಯೂ ಕುಂದಾಪುರ ಕಾಂಗ್ರೆಸಿಗರ ಕೃತ್ಯದ ಬಗ್ಗೆ ವ್ಯಾಪಕ ಟೀಕೆ ಎದುರಾಗಿದ್ದು, ಹಿರಿಯ ಪತ್ರಕರ್ತರು, ವ್ಯಂಗ್ಯಚಿತ್ರಕಾರರು ಹಾಗೂ ಕಾರ್ಟೂನ್ ಪ್ರೀಯರು ಸತೀಶ್ ಆಚಾರ‍್ಯ ಅವರ ಬೆಂಬಲಕ್ಕೆ ನಿಂತಿದ್ದಾರೆ. ಕುಂದಾಪ್ರ ಡಾಟ್ ಕಾಂ ವರದಿ.
ಕುಂದಾಪುರದಲ್ಲಿ ಕಾರ್ಟೂನ್ ಕ್ರೇಜ್ ಹುಟ್ಟಿಸಿದ್ದ ಸತೀಶ್ ಆಚಾರ‍್ಯ:
ಕಳೆದ ಕೆಲವು ವರ್ಷಗಳ ಹಿಂದೆ ಮುಂಬೈ ನಗರಿಯನ್ನು ತೊರೆದು ಹುಟ್ಟೂರಾದ ಕುಂದಾಪುರದಲ್ಲಿಯೇ ನೆಲೆಸಿರುವ ಸತೀಶ್ ಆಚಾರ‍್ಯ ಅವರದ್ದು ಕಾರ್ಟೂನು ಲೋಕದಲ್ಲಿ ದೊಡ್ಡ ಹೆಸರು. ಪ್ರಪಂಚದ ಹತ್ತು ಶ್ರೇಷ್ಠ ವ್ಯಂಗ್ಯಚಿತ್ರಕಾರರಲ್ಲಿ ಓರ್ವರು. ಪ್ರತಿಷ್ಠಿತ ಮಾಯಾ ಕಾಮತ್ ಪ್ರಶಸ್ತಿ ಸೇರಿದಂತೆ ಪ್ರತಿಷ್ಠಿತ ಗೌರವಕ್ಕೆ ಪಾತ್ರರಾದವರು. ದೇಶದ ಇಂಗ್ಲಿಷ್, ಹಿಂದಿ, ಕನ್ನಡ ಸೇರಿದಂತೆ ಇತರ ಭಾಷೆಗಳ ದೈನಿಕ ಹಾಗೂ ವೆಬ್ಸೈಟ್‌ಗಳಿಗೆ ಕಾರ್ಟೂನು ಬರೆಯುತ್ತಿದ್ದು, ವಿಶ್ವದಾದ್ಯಂತ ತಮ್ಮ ಅಭಿಮಾನಿಗಳನ್ನು ಹೊಂದಿದ್ದಾರೆ.
ತಮ್ಮ ಬಿಡುವಿರದ ಕೆಲಸದ ನಡುವೆಯೂ ಮುಂದಿನ ಪಿಳೀಗೆಗೆ ಕಾರ್ಟೂನು ತಲುಪಿಸಬೇಕೆಂಬ ಕಾರಣಕ್ಕೆ ಕುಂದಾಪುರದಲ್ಲಿಯೇ ‘ಕಾರ್ಟೂನ್ ಹಬ್ಬ’ ಎಂಬ ವಿನೂತನ ಕಾರ್ಯಕ್ರಮವನ್ನು ಕಳೆದ ಎರಡು ವರ್ಷಗಳಿಂದ ಆಯೋಜಿಸಿ ಮಕ್ಕಳಿಂದ ಹಿರಿಯರವರೆಗೂ ಕಾರ್ಟೂನ್ ಕ್ರೇಜ್ ಹುಟ್ಟಿಸಿದ್ದರು. ಆಗಾಗ್ಗೆ ತಮ್ಮ ಮನೆಯ ಮೇಲ್ಚಾವಡಿಯ ಹೋರ್ಡಿಂಗ್‌ನಲ್ಲಿ ಪ್ರಚಲಿತ ಸನ್ನಿವೇಶಕ್ಕೆ ತಕ್ಕಂತೆ ಎಲ್ಲಾ ಬಗೆಯ ಕಾರ್ಟೂನುಗಳನ್ನು ಪ್ರದರ್ಶಿಸುತ್ತಿದ್ದುದು ಎಲ್ಲರ ಗಮನ ಸೆಳೆಯುತ್ತಿದ್ದವು.
ವ್ಯಂಗ್ಯಚಿತ್ರಗಳು ನಮ್ಮ ನಡುವಿನ ಸಾಕ್ಷೀಪ್ರಜ್ಞೆಯನ್ನು ಎಚ್ಚರಿಸುವಂತವುಗಳು. ಚಿತ್ರದಲ್ಲಿ ಓರೆಕೋರೆಗಳಿದ್ದರೂ ಸಮಾಜವನ್ನು ಜಾಗೃತಗೊಳಿಸುವ, ತಿದ್ದುವ ಸಂದೇಶವೇ ಅಲ್ಲಿಯೂ ಅಡಗಿರುವುದು. ಅದೊಂದು ಅಭಿವ್ಯಕ್ತಿ ಸ್ವಾತಂತ್ರ್ಯದ ಅಸ್ತ್ರವೂ ಹೌದು. ಆದರೆ ಸಂಕುಚಿತ ಸ್ವಭಾವದ ಜನರು ಅದರ ಮೇಲೆಯೂ ಸವಾರಿಗೆ ಹೊರಟಿದ್ದ ಮಾತ್ರ ಖಂಡನೀಯ. ಕಾರ್ಟೂನು ತೆರವುಗೊಳಿಸಿದ ಕುಂದಾಪುರ ಪುರಸಭೆ, ಇದಕ್ಕೆ ಕುಮ್ಮಕ್ಕು ನೀಡಿದ ಕುಂದಾಪುರದ ಕಾಂಗ್ರೆಸಿಗರ ನಿಲುವನ್ನು ಕುಂದಾಪ್ರ ಡಾಟ್ ಕಾಂ ಖಂಡಿಸುತ್ತದೆ ಮತ್ತು ಸತೀಶ್ ಆಚಾರ‍್ಯ ಅವರಿಗೆ ಪ್ರತಿಭಟನೆಗೆ ಬೆಂಬಲ ಸೂಚಿಸುತ್ತಿದೆ.