ಕುಂದಾಪ್ರ ಡಾಟ್ ಕಾಂ ಸುದ್ದಿ
ಬೈಂದೂರು: ಸ್ಟೇಟ್ ಬ್ಯಾಂಕ್ ಆಫ್ ಮೈಸೂರು ಯಡ್ತರೆ ಶಾಖೆಯಲ್ಲಿ ಗ್ರಾಮೀಣ ಭಾಗದ ಗ್ರಾಹಕರ ಅನುಕೂಲಕ್ಕಾಗಿ ವಿಶೇಷ ತಂತ್ರಜ್ಷಾನ ಅಳವಡಿಸಿದ ಇ-ಟಚ್‌ನ್ನು ಬ್ಯಾಂಕಿನ ವ್ಯವಸ್ಥಾಪಕ ನಿರ್ದೇಶಕ ಎನ್. ಕೆ. ಚಾರಿ ಸೋಮವಾರ ಲೋಕಾರ್ಪಣೆಗೊಳಿಸಿದರು.
ನಂತರ ಮಾತನಾಡಿದ ಅವರು, ನಮ್ಮ ಬ್ಯಾಂಕಿನ ಗ್ರಾಹಕರಲ್ಲದೇ ಉಳಿದ ಬ್ಯಾಂಕುಗಳ ಗ್ರಾಹಕರೂ ಇದರ ಪ್ರಯೋಜನ ಪಡೆಯಬಹುದಾಗಿದೆ. ಉಡುಪಿಯಿಂದ ಭಟ್ಕಳದ ವರೆಗಿನ ಸುಮಾರು ೯೦ ಕಿ.ಮಿ ವ್ಯಾಪ್ತಿಯಲ್ಲಿ ಈ ವ್ಯವಸ್ಥೆಯಿಲ್ಲ. ಇದರಿಂದ ಸುಲಭ ವಿಧಾನದಿಂದ ಬ್ಯಾಂಕಿನ ವ್ಯವಹಾರ ಮಾಡಬಹುದಾಗಿದೆ. ಬದಲಾವಣೆಗೆ ತಕ್ಕಂತೆ ಗ್ರಾಹಕರನ್ನು ಸ್ಪಂದಿಸಲು ಇದು ಸಹಕಾರಿಯಾಗಿದ್ದು, ದಿನದ ೨೪ ಗಂಟೆಯೂ ಕಾರ್ಯನಿರ್ವಹಿಸುತ್ತದೆ. ಎಲ್ಲರೂ ಇದರ ಉಪಯೋಗ ಪಡೆಯುವಂತಾಗಬೇಕು ಎಂದರು.
ಬ್ಯಾಂಕುಗಳನ್ನು ವೀಲಿನಗೊಳಿಸುವ ಕೇಂದ್ರ ಸರಕಾರದ ಯೋಜನೆ ಕುರಿತು ಸುದ್ಧಿಗಾರರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಚಾರಿ, ಇದೊಂದು ಉತ್ತಮ ವ್ಯವಸ್ಥೆಯಾಗಿದ್ದು, ಗ್ರಾಹಕ ಹಾಗೂ ಸರಕಾರದ ವೆಚ್ಚ ಕಡಿತಗೊಳಿಸಬಹುದು. ಒಬ್ಬರ ಖಾತೆ ಹಲವಾರು ಬ್ಯಾಂಕುಗಳಲ್ಲಿರುತ್ತದೆ. ಇದರ ಏಕೀಕರಣದಿಂದ ನಿರ್ವಹಣೆಗಾಗಿ ತಗಲುವ ಖರ್ಚು ಹಾಗೂ ಅನಗತ್ಯವಾಗಿ ವ್ಯಯಿಸುವ ಹೆಚ್ಚುವರಿ ಶುಲ್ಕಗಳನ್ನು ತಡೆಯಬಹುದು. ಅಲ್ಲದೇ ಬ್ಯಾಂಕಿಗೂ ಗ್ರಾಹಕರಿಗೂ ಹೆಚ್ಚಿನ ಅನುಕೂಲತೆ ಸಿಗುವಂತಾಗುವುದು ಎಂದರು.
ಎಸ್‌ಬಿಎಂ ಮಂಗಳೂರು ವಲಯ ಉಪಪ್ರಧಾನ ವ್ಯಸ್ಥಾಪಕ ಎಸ್. ಗಿರಿಧರ್, ಕಾರವಾರ ಪ್ರಾದೇಶಿಕ ಕಛೇರಿ-೩ರ ಸಹಾಯಕ ಪ್ರಧಾನ ವ್ಯವಸ್ಥಾಪಕ ಕೆ. ನರಸಿಂಹ ಭಟ್, ಯಡ್ತರೆ ಶಾಖಾ ವ್ಯವಸ್ಥಾಪಕ ಉಲ್ಲಾಸ್ ಟಿ. ಕಿಣಿ, ಕಟ್ಟಡದ ಮಾಲಕ ಬಿ. ಜಗನ್ನಾಥ ಶೆಟ್ಟಿ ಹಾಗೂ ಬ್ಯಾಂಕಿನ ಗ್ರಾಹಕರು, ಸಿಬ್ಬಂದಿಗಳು ಉಪಸ್ಥಿತರಿದ್ದರು.