ಕುಂದಾಪ್ರ ಡಾಟ್ ಕಾಂ ಸುದ್ದಿ
ಬೈಂದೂರು: ಇಲ್ಲಿನ ಸೈಂಟ್ ಥೋಮಸ್ ರೆಸಿಡೆನ್ಸಿಯಲ್ ಶಾಲೆಯಲ್ಲಿ ನೂತನವಾಗಿ ನಿರ್ಮಾಣಗೊಂಡ ವಿದ್ಯಾರ್ಥಿಗಳ ಮಂತ್ರಿ ಮಂಡಲ ಹಾಗೂ ಪಠ್ಯ ಪೂರಕ ಚಟುವಟಿಕೆಗಳ ಕಾರ್ಯಕ್ರಮ ಸಿಸಿಎಯನ್ನು ಪತ್ರಕರ್ತ ಜಯಶೇಖರ್ ಮಡಪ್ಪಾಡಿ ಉದ್ಘಾಟಿಸಿದರು.
ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಪ್ರಪಂಚದಲ್ಲಿ ಅಗ್ರಸ್ಥಾನದಲಿ ಭಾರತಕ್ಕೆ ಅದೇ ಕಾರಣಕ್ಕೆ ವಿಶೇಷ ಗೌರವ ದೊರಕುತ್ತಿದೆ. ಪ್ರಜೆಗಳೇ ಪ್ರಭುಗಳು ಎನ್ನುವ ಆಶಯದಲ್ಲಿ ಸಂವಿಧಾನ ಮತ್ತು ಶಾಸನಗಳ ಜೊತೆಯಲ್ಲಿ ದೇಶವನ್ನು ಮುನ್ನಡೆಸುವಾಗ ಪ್ರತಿಯೊಬ್ಬ ಪ್ರಜೆಯೂ ನಾಯಕನಾಗುತ್ತಾನೆ. ಅದೇ ಮಾದರಿಯನ್ನು ಪ್ರತಿಯೊಬ್ಬರೂ ವಿದ್ಯಾರ್ಥಿ ಜೀವನದಲ್ಲಿಯೇ ಅಳವಡಿಸಿಕೊಂಡಾಗ ಉತ್ತವ ಸಮಾಜ ನಿರ್ಮಾಣ ಸಾಧ್ಯ ಎಂದರು. ಶಿಕ್ಷಣದ ಜೊತೆಗೆ ನೈತಿಕ ಹಾಗೂ ಮೌಲಿಕ ಶಿಕ್ಷಣವನ್ನು ಅರಿತುಕೊಂಡು ಅನುಸರಿಸಿದಾಗ ಸಮಾಜದಲ್ಲಿ ಉತ್ತಮ ವ್ಯಕ್ತಿಯಾಗುವುದು ಸಾಧ್ಯ ಎಂದರು.
ನಂತರ ಶಾಲೆಯ ಪ್ರಾಂಶುಪಾಲ ರೆವರೆಂಡ್ ಫಾದರ್ ಎಲ್ದೋ ಪುತ್ತನ್ ಕಂಡತ್ತಿಲ್ ನೂತನ ಮಂತ್ರಿ ಮಂಡಲದ ಸದಸ್ಯರಿಗೆ ಪ್ರಮಾಣ ವಚನ ಬೋಧಿಸಿ ಮಾತನಾಡಿ, ಆಂಗ್ಲ ಭಾಷೆ ಎನ್ನುವುದು ಪ್ರತಿಯೊಬ್ಬನ ಮುಂದಿನ ಬದುಕಿಗೆ ಅಗತ್ಯವಾಗಿದ್ದು, ಭಾಷೆಯನ್ನು ಅರ್ಥ ಮಾಡಿಕೊಳ್ಳುವುದು ಮತ್ತು ಮಾತನಾಡುವುದರ ಬಗ್ಗೆ ಪೂರಕವಾದ ಚಟುವಟಿಕೆಗಳನ್ನು ಅಳವಡಿಸಿಕೊಂಡಾಗ ಹೆಚ್ಚು ಪರಿಣಾಮಕಾರಿಯಾಗುತ್ತದೆ ಎಂದರು.
ನೂತನವಾಗಿ ಆಯ್ಕೆಯಾದ ರೋಹನ್ ಹಾಗೂ ತೇಜಸ್ವಿನಿ ಅವರಿಗೆ ಹಿಂದಿನ ಸಾಲಿನ ನಾಯಕರಾದ ಪ್ರಜ್ಞೇಶ್ ಹಾಗೂ ಸ್ವೀಡೆಲ್ ಅವರು ಅಧಿಕಾರ ಹಸ್ತಾಂತರಿಸಿದರು. ಶಿಕ್ಷಕ ನಾಗರಾಜ್ ಸ್ವಾಗತಿಸಿ, ಸುಬ್ರಹ್ಮಣ್ಯ ಎಂ ಹಾಗೂ ಮರಿಯಮ್ಮ ಬೋಸ್ ಕಾರ್ಯಕ್ರಮ ನಿರೂಪಿಸಿದರು. ಮೆಲ್ವಿನ್ ವಂದಿಸಿದರು. ಬಳಿಕ ಎಂಟನೇ ತರಗತಿಯ ವಿದ್ಯಾರ್ಥಿಗಳಿಂದ ನೃತ್ಯ ಕಾರ್ಯಕ್ರಮ ನಡೆಯಿತು.