ಬೈಂದೂರು ರೋಟರಿ ಕ್ಲಬ್ ಪದಪ್ರದಾನ ಸಮಾರಂಭ
ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು: ಸೇವಾ ಸಂಸ್ಥೆಗಳ ನಿಸ್ವಾರ್ಥ ಸೇವೆ ತಾಯಿಯ ಪ್ರೀತಿಗಿಂತಲೂ ಮಿಗಿಲಾದ ಸ್ಥಾನವನ್ನು ಹೊಂದಿದೆ. ತಾಯಿಯಾದರೂ ತನ್ನ ಮಗು ಮುಂದೊಂದು ದಿನ ತನ್ನನ್ನು ಚನ್ನಾಗಿ ನೋಡಿಕೊಳ್ಳಲಿ ಎಂಬ ಸ್ವಾರ್ಥ ಹೊಂದಿರುತ್ತಾಳೆ. ಆದರೆ ಸೇವಾ ಸಂಸ್ಥೆಗಳಿಗೆ ಅಂತಹ ಸ್ವಾರ್ಥವಿಲ್ಲ. ಅದರಲ್ಲಿ ತೊಡಗಿಸಿಕೊಳ್ಳುವವರೂ ನಿಸ್ವಾರ್ಥ ಮನೋಭಾವವನ್ನು ಹೊಂದಿ ಮುನ್ನಡೆಯಬೇಕಾದುದು ಅವರ ಜವಾಬ್ದಾರಿ ಎಂದು ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ. ಎಂ. ಮೋಹನ ಆಳ್ವ ಹೇಳಿದರು.
ಇಲ್ಲಿನ ರೋಟರಿ ಭವನದಲ್ಲಿ ಬೈಂದೂರು ರೋಟರಿ ಕ್ಲಬ್ ಆಶ್ರಯದಲ್ಲಿ ಜರುಗಿದ ನೂತನ ಅಧ್ಯಕ್ಷ, ಕಾರ್ಯದರ್ಶಿಗಳ ಪದಪ್ರದಾನ ಸಮಾರಂಭದಲ್ಲಿ ಅವರು ಮಾತನಾಡಿದರು. ಮನುಷ್ಯ ವಿದ್ಯಾವಂತನಾದಂತೆ ಜಾತಿಯ ಗಂಡಾತರ ಮಾನವ ಸಂಬಂಧಗಳನ್ನು ದೂರ ಮಾಡುತ್ತಿದೆ, ಮಾನವೀಯತೆ ಮರೆಯಾಗಿದೆ. ಜಾತಿರಹಿತ ಸಮಾಜವನ್ನು ಕಟ್ಟುವುದು ಶಿಕ್ಷಣವಂತರ ಗುರಿಯಾಗಬೇಕು. ಇನ್ನೊಬ್ಬರನ್ನೂ ಪ್ರೀತಿ, ವಾತ್ಸಲ್ಯದಿಂದ ನೋಡುವುದೇ ನಿಜವಾದ ಮಾನವೀಯತೆಯನ್ನು ಬೆಳೆಸಿಕೊಳ್ಳಬೇಕು ಎಂದವರು ಹೇಳಿದರು.
ಈ ಸಂದರ್ಭದಲ್ಲಿ ನೂತನ ಅಧ್ಯಕ್ಷರಾಗಿ ಮಂಜುನಾಥ ಶೆಟ್ಟಿ, ಕಾರ್ಯದರ್ಶಿಯಾಗಿ ಸುಧಾಕರ ಪಿ ಅಧಿಕಾರ ಸ್ವೀಕರಿಸಿದರು. ರೋಟರಿ ವಲಯ ೧ರ ಅಸಿಸ್ಟೆಂಟ್ ಗವರ್ನ್‌ರ್ ಮಧುಕರ್ ಹೆಗ್ಡೆ ಬಿಂದುವಾಣಿ ಬಿಡುಗಡೆಗೊಳಿಸಿದರು. ವಲಯ ಸೇನಾನಿ ಹಾಜಿ ಅಬು ಶೇಕ್, ಪಿಡಿಜಿ ಜಗನ್ನಾಥ ಶೆಟ್ಟಿ ಶುಭಹಾರೈಸಿದರು.
ಬೈಂದೂರು ರೋಟರಿಗೆ ನೂತನ ಸದಸ್ಯರನ್ನು ಸೇರ್ಪಡೆಗೊಳಿಸಲಾಯಿತು. ನಿಕಟಪೂರ್ವ ಕಾರ್ಯದರ್ಶಿ ವೆಂಕಟೇಶ ಕಾರಂತ್ ವರದಿ ವಾಚಿಸಿದರು. ಗೋವಿಂದ, ಜತೀಂದ್ರ ಮರವಂತೆ, ಕೃಷ್ಣಪ್ಪ ಶೆಟ್ಟಿ, ಗಣಪತಿ ಹೋಬಳಿದಾರ್ ಅತಿಥಿ ಹಾಗೂ ನೂತನ ಸದಸ್ಯರನ್ನು ಪರಿಚಯಿಸಿದರು. ನಿಕಟಪೂರ್ವಾಧ್ಯಕ್ಷ ರಘುರಾಮ ಶೆಟ್ಟಿ ಸ್ವಾಗತಿಸಿದರು. ಉಪಾಧ್ಯಕ್ಷ ಮಂಜುನಾಥ ಮಹಲೆ ಧನ್ಯವಾದಗೈದರು. ಸೋಮನಾಥನ್ ಕಾರ್ಯಕ್ರಮ ನಿರೂಪಿಸಿದರು.