ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಇಲ್ಲಿನ ತೆಕ್ಕಟ್ಟೆ ರಾಷ್ಟ್ರೀಯ ಹೆದ್ದಾರಿ-66ರ ಇಕ್ಕೆಲಗಳಲ್ಲಿರುವ ಎರಡು ವಾಣಿಜ್ಯ ಸಂಕೀರ್ಣಗಳ 6 ಅಂಗಡಿಗಳಿಗೆ, ಹಾಗೂ ಸಮೀಪದ ದೇವಸ್ಥಾನದ ಪಕ್ಕದಲ್ಲಿರುವ ಇರುವ ಒಂದು ಅಂಗಡಿಗೆ ಕನ್ನ ಹಾಕಿರುವ ಕಳ್ಳರ ತಂಡ ಚಿನ್ನದಂಗಡಿಯ 2 ಕೆ.ಜಿ ಬೆಳ್ಳಿ ಸೇರಿದಂತೆ ಸುಮಾರು ಒಂದು ಲಕ್ಷಕ್ಕೂ ಅಧಿಕ ಮೌಲ್ಯದ ಸೊತ್ತುಗಳನ್ನು ಕದ್ದೊಯ್ದಿದ್ದು, ಈ ಕುಕೃತ್ಯ ಅಂಗಡಿಗಳಿಗೆ ಅಳವಡಿಸಲಾಗಿದ್ದ ಸಿಸಿಟಿವಿಯಲ್ಲಿ ಸೆರೆಯಾಗಿದೆ.
ಹೆದ್ದಾರಿ ಬದಿಯ ಅಂಗಡಿಗಳನ್ನು ಗುರಿಯಾಗಿಸಿಕೊಂಡು ಕಳ್ಳತನಕ್ಕೆ ಮುಂದಾಗಿದ್ದ 6 ಜನರ ತಂಡ ಹೈಡ್ರೋಲಿಕ್ ಜಾಕ್ ಬಳಸಿ ಶಟರ್ ಮುರಿದು ಒಳನುಗ್ಗಿದ್ದಾರೆ ಎನ್ನಲಾಗಿದ್ದು, ಮೆಡಿಕಲ್ ಶಾಪ್ ಹಾಗೂ ಒಂದು ಕಾಂಪ್ಲೆಕ್ಸ್ ನಲ್ಲಿ ಹಾಕಲಾಗಿದ್ದ ಸಿಸಿ ಟಿವಿಯಲ್ಲಿ ಕಳ್ಳರ ಚಲನವಲನವನ್ನು ಗುರುತಿಸಲಾಗಿದೆ. ಕಳ್ಳರು ತೆಕ್ಕಟ್ಟೆಯು ಶಾರದಾ ಜ್ಯುವೆಲ್ಲರ್ಸ್ ನಿಂದ ಸುಮಾರು 2 ಕೆ.ಜಿ ಬೆಳ್ಳಿ, ಕೃಷ್ಣ ಮೆಡಿಕಲ್ಸ್’ನಿಂದ ಸುಮಾರು 15,000ರೂ ನಗದು, ಆರ್ಯ ಪೆಂಟ್ಸ್ ಹಾಗೂ ವಿಜಯಲಕ್ಷ್ಮಿ ಟ್ರೇಟರ್ಸ್’ನಿಂದ ತಲಾ 3,000ರೂ ನಗದು, ಶ್ರೀ ಮಹಾಲಿಂಗೇಶ್ವರ ಕಾಂಡಿಮೆಂಟ್ಸ್’ನಿಂದ 1000ರೂ ನಗದು ಹಾಗೂ ವಸ್ತುಗಳು ಕದ್ದಿದ್ದರೇ, ಇನ್ನು ಶಾರದಾ ಇಲೆಕ್ಟ್ರಿಕಲ್ ಸರ್ವಿಸ್ ಮತ್ತು ಏಕದಂತೆ ಇಲೆಕ್ಟ್ರಿಕಲ್ಸ್ ಅಂಗಡಿ ಒಳನುಗ್ಗಿದ್ದರೂ ನಗದು ಸಿಗದೆ ಬರಿಗೈಯಲ್ಲಿ ವಾಪಾಸಾಗಿದ್ದಾರೆ. ಕುಂದಾಪ್ರ ಡಾಟ್ ಕಾಂ ಸುದ್ದಿ.
ಘಟನಾ ಸ್ಥಳಕ್ಕೆ ಬೆರಳಚ್ಚು ತಜ್ಞರು ಹಾಗೂ ಶ್ವಾನದಳ ಭೇಟಿ ನೀಡಿ ಪರಿಶೀಲಿಸದ್ದಾರೆ. ಉಡುಪಿ ಡಿವೈಎಸ್ಪಿ ಕುಮಾರಸ್ವಾಮಿ, ಬ್ರಹ್ಮಾವರ ವೃತ್ತ ನಿರೀಕ್ಷಕ ಶ್ರೀಕಾಂತ, ಕೋಟ ಠಾಣಾಧಿಕಾರಿ ಕಬ್ಬಾಳರಾಜ್ ಮೊದಲಾದವರು ಭೇಟಿ ನೀಡಿದ್ದಾರೆ. ಕೋಟ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಕುಂದಾಪ್ರ ಡಾಟ್ ಕಾಂ ಸುದ್ದಿ.