ಕುಂದಾಪ್ರ ಡಾಟ್ ಕಾಂ ವರದಿ.
ಗಂಗೊಳ್ಳಿ: ಯಾವುದೇ ದಾನಕ್ಕಿಂದ ಅನ್ನದಾನ ಅತ್ಯಂತ ಪುಣ್ಯದ ಕೆಲಸ. ಹೀಗಾಗಿ ಅನೇಕ ದೇವಾಲಯಗಳಲ್ಲಿ ಹಾಗೂ ಶುಭ ಕಾರ್ಯಗಳಲ್ಲಿ ಅನ್ನದಾಸೋಹಕ್ಕೆ ಹೆಚ್ಚಿನ ಪ್ರಾಮುಖ್ಯತೆ ನೀಡಲಾಗುತ್ತಿದೆ. ಆದರೆ ಶಿಕ್ಷಣಕ್ಕೆ ಹೆಚ್ಚಿನ ಹೆಸರುವಾಸಿಯಾಗಿರುವ ಗಂಗೊಳ್ಳಿಯ ಸರಸ್ವತಿ ವಿದ್ಯಾಲಯ ಪದವಿಪೂರ್ವ ಕಾಲೇಜಿನಲ್ಲಿ ಸದ್ದಿಲ್ಲದೆ ಪ್ರತಿನಿತ್ಯ ನೂರಾರು ಶಾಲಾ ವಿದ್ಯಾರ್ಥಿಗಳಿಗೆ ಅನ್ನದಾಸೋಹ ಕಾರ್ಯಕ್ರಮ ನಡೆಯುತ್ತಿದ್ದು ಎಲ್ಲರ ಗಮನ ಸೆಳೆಯುತ್ತಿದೆ.
ಕಳೆದ ಏಳು ದಶಕಗಳಿಂದ ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳಿಗೆ ಅತ್ಯಂತ ಕಡಿಮೆ ಶುಲ್ಕದಲ್ಲಿ ಉತ್ತಮ ಶಿಕ್ಷಣ ನೀಡುತ್ತಾ ಬಂದಿರುವ ಗಂಗೊಳ್ಳಿಯ ಸರಸ್ವತಿ ವಿದ್ಯಾಲಯ ವಿದ್ಯಾಸಂಸ್ಥೆಯು ರಾಜ್ಯದಲ್ಲೇ ಉತ್ತಮ ಹೆಸರು ಪಡೆದುಕೊಂಡು ಸಹಸ್ರಾರು ವಿದ್ಯಾರ್ಥಿಗಳ ಜನಮಾನಸದಲ್ಲಿ ಅಚ್ಚಳಿದೆ ಉಳಿದಿದೆ. ಪ್ರತಿನಿತ್ಯ ಸುಮಾರು ೩ ರಿಂದ ೧೦ ಕಿ.ಮೀ. ದೂರದಿಂದ ಬರುತ್ತಿರುವ ಸಹಸ್ರಾರು ಮಂದಿ ಗ್ರಾಮೀಣ ಪ್ರದೇಶದ ಮಕ್ಕಳು ಈ ವಿದ್ಯಾಸಂಸ್ಥೆಗಳಲ್ಲಿ ವಿದ್ಯಾರ್ಜನೆಯಲ್ಲಿ ತೊಡಗಿಕೊಂಡಿದ್ದಾರೆ. ಈ ವಿದ್ಯಾಸಂಸ್ಥೆಗೆ ಬರುವ ವಿದ್ಯಾರ್ಥಿಗಳು ಮಧ್ಯಾಹ್ನ ಹಸಿದ ಹೊಟ್ಟೆಯಲ್ಲಿ ಕುಳಿತುಕೊಳ್ಳಬಾರದು ಮತ್ತು ಹೊರಗಿನ ಆಹಾರವನ್ನು ಸೇವಿಸಿ ಆರೋಗ್ಯವನ್ನು ಹಾಳು ಮಾಡಿಕೊಳ್ಳಬಾರದೆಂಬ ಉದ್ದೇಶದಿಂದ ಶಾಲೆಯ ಆಡಳಿತ ಮಂಡಳಿಯು, ದೂರದ ಪ್ರದೇಶದಿಂದ ಬರುವ ವಿದ್ಯಾರ್ಥಿಗಳಿಗೆ ಪ್ರತಿನಿತ್ಯ ಉಚಿತವಾಗಿ ಮಧ್ಯಾಹ್ನದೂಟವನ್ನು ನೀಡುವ ಮೂಲಕ ಎಲ್ಲರ ಪ್ರಶಂಸೆಗೆ ಪಾತ್ರವಾಗಿದೆ.
ಬಹುತೇಕ ಎಲ್ಲಾ ಶಾಲಾ ಕಾಲೇಜುಗಳಲ್ಲಿ ಮಧ್ಯಾಹ್ನದೂಟಕ್ಕಾಗಿ ಒಂದಿಷ್ಟು ಹಣವನ್ನು ವಿದ್ಯಾರ್ಥಿಗಳಿಂದ ಸಂಗ್ರಹಿಸು ಸರಸ್ವತಿ ವಿದ್ಯಾಲಯ ವಿದ್ಯಾಸಂಸ್ಥೆಗಳಲ್ಲಿ ಯಾವುದೇ ಹೆಚ್ಚುವರಿ ಶುಲ್ಕ ಮತ್ತು ಮಧ್ಯಾಹ್ನದೂಟಕ್ಕಾಗಿ ಹೆಚ್ಚುವರಿ ಶುಲ್ಕವನ್ನು ಸಂಗ್ರಹಿಸದೇ ಮಕ್ಕಳಿಗೆ ಉಚಿತವಾಗಿ ಉತ್ತಮ ಗುಣಮಟ್ಟದ ಮಧ್ಯಾಹ್ನದೂಟವನ್ನು ನೀಡಲಾಗುತ್ತಿದೆ. ಸರಸ್ವತಿ ವಿದ್ಯಾಲಯ ಪದವಿಪೂರ್ವ ಕಾಲೇಜಿನ ಸುಮಾರು 145 ಪದವಿಪೂರ್ವ ವಿದ್ಯಾರ್ಥಿಗಳು ಪ್ರಸ್ತುತ ಸಾಲಿನಲ್ಲಿ ಮಧ್ಯಾಹ್ನದೂಟದ ಪ್ರಯೋಜನ ಪಡೆದುಕೊಳ್ಳುತ್ತಿದ್ದಾರೆ. ಕಳೆದ ಸಾಲಿನಲ್ಲಿ ಸುಮಾರು 50 ವಿದ್ಯಾರ್ಥಿಗಳು ಈ ಯೋಜನೆಯ ಪ್ರಯೋಜನ ಪಡೆದುಕೊಂಡಿದ್ದರೆ, ಈ ಸಾಲಿನಲ್ಲಿ ಮಧ್ಯಾಹ್ನದೂಟದ ಪ್ರಯೋಜನ ಪಡೆದುಕೊಳ್ಳುತ್ತಿರುವ ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚಾಗಿದೆ. ಕುಂದಾಪ್ರ ಡಾಟ್ ಕಾಂ ವರದಿ.
ಶಾಲೆಯ ಮಕ್ಕಳಿಗೆ ಉಚಿತವಾಗಿ ಮಧ್ಯಾಹ್ನದೂಟ ನೀಡುತ್ತಿರುವುದರಿಂದ ಶಾಲಾ ಆಡಳಿತ ಮಂಡಳಿ ಮೇಲೆ ಹೆಚ್ಚಿನ ಹೊರೆ ಬೀಳುತ್ತಿದೆ. ಪ್ರತಿ ತಿಂಗಳು ಅಡುಗೆ ಮಾಡಿದ ಸಿಬ್ಬಂದಿಗೆ ಸಂಬಳ ಸೇರಿದಂತೆ ಸುಮಾರು ೨೦ ಸಾವಿರ ರೂ.ಗಳನ್ನು ಪದವಿಪೂರ್ವ ವಿದ್ಯಾರ್ಥಿಗಳ ಮಧ್ಯಾಹ್ನದೂಟಕ್ಕೆ ಖರ್ಚು ಮಾಡುತ್ತಿದೆ. ಇದರಿಂದ ವಾರ್ಷಿಕ ಸುಮಾರು 2 ಲಕ್ಷ ರೂ.ಗಳು ಶಾಲಾ ಆಡಳಿತ ಮಂಡಳಿಯ ಮಕ್ಕಳ ಮಧ್ಯಾಹ್ನದೂಟದ ಯೋಜನೆಗಾಗಿ ವಿನಿಯೋಗಿಸಬೇಕಾಗಿದೆ.
ಮಧ್ಯಾಹ್ನದೂಟದ ಪ್ರಯೋಜನ ಪಡೆದುಕೊಳ್ಳುವ ವಿದ್ಯಾರ್ಥಿಗಳಲ್ಲಿ ಅನೇಕ ಮಂದಿ ದೂರದ ಊರುಗಳಿಂದ ಬರುತ್ತಿರುವುದರಿಂದ ಅವರು ಮಧ್ಯಾಹ್ನ ಮನೆಗೆ ಹೋಗಿ ಬರಲು ಸಾಧ್ಯವಿಲ್ಲ. ಹೀಗಾಗಿ ಶಾಲಾ ಆಡಳಿತ ಮಂಡಳಿಗೆ ಹೊರೆಯಾದರೂ ತೊಂದರೆಯಿಲ್ಲ ಎಂಬ ಮಹದಾಸೆ, ದೂರದೃಷ್ಟಿತ್ವದಿಂದ ಶಾಲಾ ಆಡಳಿತ ಮಂಡಳಿ ಈ ಯೋಜನೆಯ ಯಶಸ್ಸಿಗೆ ದಿಟ್ಟ ಹೆಜ್ಜೆಯನ್ನಿಟ್ಟಿದೆ. ಶಾಲೆಯ ಹಳೆ ವಿದ್ಯಾರ್ಥಿಗಳು, ಅಭಿಮಾನಿಗಳು ಹಾಗೂ ದಾನಿಗಳು ಶಾಲೆಯ ಈ ಯೋಜನೆಗೆ ಬೆಂಬಲ ಪ್ರೋತ್ಸಾಹ ನೀಡಲಿದ್ದಾರೆ ಎಂಬ ನಂಬಿಕೆಯಿಂದ ಶಾಲೆಯ ಆಡಳಿತ ಮಂಡಳಿ ಮಕ್ಕಳಿಗೆ ಉಚಿತವಾಗಿ ಮಧ್ಯಾಹ್ನದೂಟವನ್ನು ಬಡಿಸುತ್ತಿದೆ. ಕುಂದಾಪ್ರ ಡಾಟ್ ಕಾಂ ವರದಿ.
ಸರಸ್ವತಿ ವಿದ್ಯಾಲಯ ಪದವಿಪೂರ್ವ ಕಾಲೇಜಿನ ಮಕ್ಕಳ ಮಧ್ಯಾಹ್ನದೂಟಕ್ಕೆ ಧನಸಹಾಯ, ಸಹಕಾರ ಮಾಡಲಿಚ್ಛಿಸುವವರು ಕೆನರಾ ಬ್ಯಾಂಕ್ ಗಂಗೊಳ್ಳಿ ಶಾಖೆಯ ಮಿಡ್‌ಡೇ ಮೀಲ್ ಹೆಸರಿನ ಉಳಿತಾಯ ಖಾತೆ ಸಂಖ್ಯೆ 0604101015626, ಐಎಫ್‌ಎಸ್‌ಸಿ ಕೋಡ್ – ಸಿಎನ್‌ಆರ್‌ಬಿ0000604 ಜಮೆ ಮಾಡಬಹುದು ಅಥವಾ ಶಾಲೆಯ ಕಛೇರಿಯನ್ನು ಸಂಪರ್ಕಿಸಿ ಧನಸಹಾಯ ಮಾಡಬಹುದು ಎಂದು ಶಾಲೆಯ ಪ್ರಾಂಶುಪಾಲೆ ಕವಿತಾ ಎಂ.ಸಿ. ತಿಳಿಸಿದ್ದಾರೆ.