ಬಸ್ರೂರು: ಸೆಂಟರ್ ಆಫ್ ಇಂಡಿಯನ್ ಟ್ರೇಡ್ ಯೂನಿಯನ್ಸ್ ಗೆ ಸೇರ್ಪಡೆಗೊಂಡ ಬಸ್ರೂರು ಗ್ರಾಮ ಪಂಚಾಯತ್ ವ್ಯಾಪ್ತಿಯ ಕಾರ್ಮಿಕ ಸಂಘಟನೆಗಳಾದ, ಕಟ್ಟಡ ಮತ್ತು ಇತರೇ ನಿರ್ಮಾಣ ಕಾರ್ಮಿಕರು, ಹಂಚು, ಬೀಡಿ ಕಾರ್ಮಿಕರು, ಅಂಗನವಾಡಿ ಅಕ್ಷರ ದಾಸೋಹ, ನೌಕರರು, ರಿಕ್ಷಾ ಚಾಲಕರು ಹಾಗೂ ಕೃಷಿ ಕೂಲಿಕಾರರ ಸಂಘದ ಮನೆ ನಿವೇಶನ ರಹಿತ ಅರ್ಜಿದಾರರ – ಬೃಹತ್ ಸಮಾವೇಶವು ಬಸ್ರೂರು ಮೂಡ್ಕಳಿ ಕೋಟಿ ಚೆನ್ನಯ ಗರಡಿ ದೇವಸ್ಥಾನದ ವಠಾರದಲ್ಲಿ ಜರುಗಿತು.
ರೈತ ಕೃಷಿ ಕೂಲಿಕಾರರ ಮುಖಂಡರಾದ ಯು. ದಾಸ ಭಂಡಾರಿ ಸಮಾವೇಶ ಉದ್ಘಾಟಿಸಿ ಮಾತನಾಡುತ್ತಾ ದಿನಬಳಕೆಯ ಆಹಾರ ವಸ್ತುಗಳ ಬೆಲೆ ಏರಿಕೆಯಿಂದಾಗಿ, ಗ್ರಾಮೀಣ ಪ್ರದೇಶಧ ಬಡಕೂಲಿ ಕಾರ್ಮಿಕರು ಮೂಲಭೂತ ಸೌಕರ್ಯದಿಂದ ವಂಚಿತರಾಗಿ ಕಷ್ಟಕರವಾದ ಜೀವನ ಸಾಗಿಸುತ್ತಿದ್ದಾರೆ. ಆದ್ದರಿಂದ ಆರ್ಥಿಕ ಸಾಮಾಜಿಕ ಅನಿಷ್ಠಗಳ ವಿರುದ್ಧ ದುಡಿಯುವ ವರ್ಗ ಸಂಘಟಿತ ಹೋರಾಟಕ್ಕೆ ಮುಂದಾಗಬೇಕು ಎಂದು ಹೇಳಿದರು.
ಸಿಐಟಿಯು ತಾಲೂಕು ಅಧ್ಯಕ್ಷ ಎಚ್. ನರಸಿಂಹ, ಕೃಷಿ ಕೂಲಿಕಾರರ ಸಂಘದ ಜಿಲ್ಲಾ ಕಾರ್ಯದರ್ಶಿ, ವೆಂಕಟೇಶ ಕೋಣಿ ಮುಖ್ಯ ಅತಿಥಿಗಳಾಗಿ ಸಮಾವೇಶದಲ್ಲಿ ಭಾಗವಹಿಸಿದ್ದರು. ಬಸ್ರೂರು ಗ್ರಾಮ ಪಂಚಾಯತ್ ವ್ಯಪ್ತಿಯ ಬಡನಿವೇಶನ ರಹಿತರ ಅಂತಿಮ ಪಟ್ಟಿಯ ಪ್ರಕಾರ ನಿವೇಶನ ರಹಿತ ಅರ್ಜಿದಾರರಿಗೆ ನಿವೇಶನ ಸ್ಥಳಕ್ಕೆ ಹಕ್ಕು ಪತ್ರ ಮಂಜೂರು ಮಾಡುವುದಕ್ಕಾಗಿ ಸರಕಾರಿ ಸ್ಥಳ ಗುರುತಿಸಲು ಒತ್ತಾಯಿಸುವುದಕ್ಕೆ ಎ.20ರಂದು ಬಸ್ರೂರು ಗ್ರಾಮ ಪಂಚಾಯತ್ ಕಛೇರಿ ಎದುರು ಜರಗುವ ಬೃಹತ್ ಪ್ರತಿಭಟನಾ ಪ್ರದರ್ಶನ ಹೋರಾಟ ಯಶಸ್ವಿಗೊಳಿಸಲು ಸಮಾವೇಶದಲ್ಲಿ ತೀರ್ಮಾನ ಮಾಡಲಾಯಿತು.
ಏಪ್ರಿಲ್ 28ರಂದು ರೈತ ಕೂಲಿಕಾರರು ಭೂಮಿ ಹಕ್ಕಿನ ಹೋರಾಟಕ್ಕೆ ಬೆಂಗಳೂರು-ವಿಧಾನ ಸೌಧ ಚಲೋ ಕಾರ್ಯಕ್ರಮಕ್ಕೆ ಬಸ್ರೂರು ಗ್ರಾಮದ ಮನೆ ನಿವೇಶನ ರಹಿತ ಅರ್ಜಿದಾರರೆಲ್ಲರೂ ಭಾಗವಹಿಸಿ ಯಶಸ್ವಿಗೊಳಿಸಲು ಸಮಾವೇಶದಲ್ಲಿ ಕರೆ ಕೊಡಲಾಯಿತು.
ಕಟ್ಟಡ ಕಾರ್ಮಿಕರ ಸಂಘ, ಬಸ್ರೂರು ಘಟಕದ ಅಧ್ಯಕ್ಷ ಜನಾರ್ಧನ ಆಚಾರ್ ಸಭೆಯ ಅಧ್ಯಕ್ಷತೆ ವಹಿಸಿದ್ದರು. ಬಸ್ರೂರು ಗ್ರಾಮ ಪಂಚಾಯತ್ ಸದಸ್ಯೆರಾದ ಬಿ.ಸಿ.ಕೆ. ನಾರಾಯಣ, ಕಮಲ ಶೆಟ್ಟಿಗಾರ್ ಮತ್ತು ಗೋಪಾಲ ಶೆಟ್ಟಿಗಾರ, ಬೋಜ ಶೆಟ್ಟಿಗಾರ ಉಪಸ್ಥಿತರಿದ್ದರು.