ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು: ಗೋರಕ್ಷಕನೆಂಬ ಮುಖವಾಡ ಧರಿಸಿ ಕೊಲೆ, ಸುಲಿಗೆ ಹಾಗೂ ನೈತಿಕ ಪೋಲಿಸ್‌ಗಿರಿ ಮೂಲಕ ಮತೀಯ ಭಾನೆಗಳನ್ನು ಕೆರಳಿಸಿ ಸಮಾಜದ ಸ್ವಾಸ್ಥ್ಯ ಹಾಗೂ ಸಾಮರಸ್ಯ ಹಾಳುಮಾಡುವ ಸಂಘಟನೆಗಳನ್ನು ಮಟ್ಟಹಾಕಬೇಕು ಎಂದು ಶಾಸಕ. ಕೆ. ಗೋಪಾಲ ಪೂಜಾರಿ ಸರಕಾರವನ್ನು ಆಗ್ರಹಿಸಿದರು.
ಕೆಂಜೂರು ಪ್ರವೀಣ್ ಪೂಜಾರಿ ಹತ್ಯೆ ಖಂಡಿಸಿ ಬೈಂದೂರು ಮತ್ತು ವಂಡ್ಸೆ ಬ್ಲಾಕ್ ಕಾಂಗ್ರೆಸ್ ಜಂಟಿಯಾಗಿ ಶುಕ್ರವಾರ ಹಮ್ಮಿಕೊಂಡ ಪ್ರತಿಭಟನೆಯನ್ನುದ್ದೇಶಿಸಿ ಮಾತನಾಡಿದರು. ವಿದ್ಯಾರ್ಥಿ ಸಂಘಟನೆ ಹೆಸರಿನಲ್ಲಿ ಕಾಲೇಜಿನ ಯುವಕರನ್ನು ಪ್ರಚೋದಿಸಿ ದಾರಿತಪ್ಪಿಸುತ್ತಿದ್ದಾರೆ. ಈ ದಿಸೆಯಲ್ಲಿ ವಿದ್ಯಾರ್ಥಿಗಳು ಎಚ್ಚರವಹಿಸಬೇಕು. ಕೇಸರಿಶಾಲು ಮತ್ತು ಕೆಂಪುನಾಮ ಹಾಕಿಕೊಂಡು ಕೊಲೆ, ಸುಲಿಗೆ, ಗೂಂಡಾಗಿರಿ ಮುಂತಾದ ಹೀನಾಯ ಕೃತ್ಯ ಎಸಗುವವರ ವಿರುದ್ದ ಕಾನೂನಿನಡಿಯಲ್ಲಿ ಕಠಿಣ ಶಿಕ್ಷೆಯಾಗಬೇಕು ಎಂದರು.
ದೇಶದ ಸ್ವಾತಂತ್ರ್ಯ ತಂದುಕೊಟ್ಟ ಹಾಗೂ ಇತಿಹಾಸ ಹೊಂದಿರುವ ಪಕ್ಷದ ಬಗ್ಗೆ ಬಿಜೆಪಿ ಹಾಗೂ ಸಂಘಪರಿವಾರದವರಿಗೆ ಮಾತನಾಡುವ ನೈತಿಕತೆಯಿಲ್ಲ. ದೇಶಕ್ಕಾಗಿ ಯಾವುದೇ ಬಲಿದಾನ ನೀಡದ ಬಿಜೆಪಿಯವರು ಪ್ರವೀಣ್ ಪೂಜಾರಿಯಂತಹ ಅಮಾಯಕರನ್ನು ಬಲಿಪಶುಗಳನ್ನಾಗಿಸಿ ಹಾಗೂ ದೇಶದ ಜನರ ಮುಂದೆ ಸುಳ್ಳು-ಪೊಳ್ಳು ಹೇಳಿ ಮೂರ್ಖರನ್ನಾಗಿಸುವ ರಾಜಕೀಯ ಮಾಡುತ್ತಿರುವುದು ನಾಚಿಕೆಗೇಡಿನ ಸಂಗತಿ. ದಷ್ಕರ್ಮಿಗಳಿಂದ ಅಮಾನುಷವಾಗಿ ಹತ್ಯೆಗೀಡಾದ ಪ್ರವೀಣ್ ಪೂಜಾರಿ ಹಂತಕರಿಗೆ ಕಠಿಣ ಶಿಕ್ಷೆಯಾಗಬೇಕು ಎಂದ ಅವರು ನಕಲಿ ಗೋರಕ್ಷಕರಿಂದ ಸಮಾಜದಲ್ಲಿ ಅಶಾಂತಿ ಹೆಚ್ಚುತ್ತಿದ್ದು, ಇದಕ್ಕೆ ಸರಕಾರ ಕಡಿವಾಣ ಹಾಕಬೇಕು ಎಂದು ಒತ್ತಾಯಿಸಿದರು.
ಬೈಂದೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಸ್. ಮದನ್‌ಕುಮಾರ್ ಮೃತ ಪ್ರವೀಣ್ ಪೂಜಾರಿ ಕುಟುಂಬಕ್ಕೆ ಎರಡೂ ಬ್ಲಾಕ್ ವತಿಯಿಂದ ರೂ.೫೦ ಸಾವಿರ ಪರಿಹಾರ ನೀಡುವುದಾಗಿ ಘೋಷಿಸಿದರು. ಜಿಪಂ ಸದಸ್ಯೆ ಗೌರಿ ದೇವಾಡಿಗ, ತಾಪಂ ಸದಸ್ಯರಾದ ಎಚ್. ವಿಜಯ್ ಶೆಟ್ಟಿ, ಪ್ರಮೀಳಾ ದೇವಾಡಿಗ, ಜಗದೀಶ ದೇವಾಡಿಗ, ಕೆಡಿಪಿ ಸದಸ್ಯ ಎಸ್. ರಾಜು ಪೂಜಾರಿ, ಗ್ರಾಪಂ ಅಧ್ಯಕ್ಷ ಎನ್. ನಾಗರಾಜ ಶೆಟ್ಟಿ, ಉಪಾಧ್ಯಕ್ಷೆ ಕಲಾವತಿ ನಾಗರಾಜ ಗಾಣಿಗ, ಕೆಪಿಸಿಸಿ ಸದಸ್ಯ ಬಿ. ರಘುರಾಮ ಶೆಟ್ಟಿ, ಜಿಲ್ಲಾ ಘಟಕದ ಎಸ್. ಪ್ರಕಾಶ್ಚಂದ್ರ ಶೆಟ್ಟಿ, ಪಕ್ಷದ ಮುಖಂಡರು ಹಾಗೂ ಪಕ್ಷದ ವಿವಿಧ ಘಟಕದ ಪದಾಧಿಕಾರಿಗಳು ಉಪಸ್ಥಿತರಿದ್ದರು.
ವಂಡ್ಸೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸಂಪಿಗೇಡಿ ಸಂಜೀವ ಶೆಟ್ಟಿ ಸ್ವಾಗತಿಸಿ, ಬೈಂದೂರು ಬ್ಲಾಕ್ ಕಾರ್ಯದರ್ಶಿ ಬಿ. ಎಂ. ನಾಗರಾಜ ಗಾಣಿಗ ವಂದಿಸಿದರು. ಪ್ರಸನ್ನಕುಮಾರ್ ಶೆಟ್ಟಿ ನಿರೂಪಿಸಿದರು. ನಂತರ ಠಾಣಾಧಿಕಾರಿ ಸಂತೋಷ್ ಆನಂದ್ ಕಾಯ್ಕಿಣಿಯವರಿಗೆ ಮನವಿ ನೀಡಲಾಯಿತು.