ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು: ಕಾರ್ಮಿಕರ ಹದಿನೇಳು ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ದೇಶದ ಹನ್ನೊಂದು ಕಾರ್ಮಿಕ ಸಂಘಟನೆಗಳು ಸೆ.೦೨ರಂದು ಹಮ್ಮಿಕೊಂಡ ರಾಷ್ಟ್ರವ್ಯಾಪಿ ಸಾರ್ವತ್ರಿಕ ಮುಷ್ಕರ ಯಶಸ್ವಿಗೊಳಿಸುವ ಪ್ರಯುಕ್ತ ತಾಲೂಕಿನಾದ್ಯಂತ ಮೂರು ದಿನಗಳ ಕಾಲ ವಾಹನ ಪ್ರಚಾರ ಜಾಥಾಕ್ಕೆ ಬೈಂದೂರು ಬಸ್ ನಿಲ್ದಾಣದಲ್ಲಿ ಚಾಲನೆ ನೀಡಲಾಯಿತು.
ಸಿಐಟಿಯು ತಾಲೂಕು ಅಧ್ಯಕ್ಷ ಎಚ್. ನರಸಿಂಹ ಜಾಥಾ ಉದ್ಘಾಟಿಸಿ ಮಾತನಾಡಿ, ಅಂದು ಬ್ರಿಟಿಷರ ವಿರುದ್ದ ಹೋರಾಡಿ ಕಾರ್ಮಿಕ ಕಾನೂನನ್ನು ಪಡೆದಿದೆ. ಆದರೆ ಸ್ವತಂತ್ರ ಭಾರತದಲ್ಲಿ ಇಂದಿನ ಕೇಂದ್ರ ಸರಕಾರ ೪೪ ಕಾನೂನನ್ನು ತಿದ್ದುಪಡಿ ಮಾಡಲು ಹೊರಟಿರುವುದು ಖಂಡನೀಯ ಕ್ರಮವಾಗಿದೆ. ಬೆಲೆ ಏರಿಕೆ ನಿಯಂತ್ರಿಸಲು ಸರ್ಕಾರ ವಿಫಲವಾಗಿದ್ದು, ರಸ್ತೆ ಸಾರಿಗೆ ನೌಕರರನ್ನು ಜೈಲಿಗಟ್ಟುವ ಕಾನೂನಿಗೆ ಸಚಿವ ಸಂಪುಟ ಅನುಮೋದನೆ ನೀಡಿರುವುದು ದುರಾದೃಷ್ಟಕರ. ಸರ್ಕಾರದ ಇಂತಹ ನೀತಿಗಳ ವಿರುದ್ದ ತಾಲೂಕಿನಲ್ಲಿ ಮಷ್ಕರ ಯಶಸ್ವಿಗೊಳಿಸಬೇಕಾಗಿದೆ ಎಂದು ಕರೆ ನೀಡಿದರು.
ಈ ಸಂದರ್ಭ ಸಿಐಟಿಯು ಮುಖಂಡ ಸುರೇಶ ಕಲ್ಲಾಗರ್, ಇಂಡಕ್ ಅಧ್ಯಕ್ಷ ಲಕ್ಷ್ಮಣ ಶೆಟ್ಟಿ, ಕಾರ್ಯದರ್ಶಿ ಮಾಣಿ ಉದಯ ಪೂಜಾರಿ, ಆಟೋ ಚಾಲಕ ಸಂಘದ ರಾಜು ದೇವಾಡಿಗ, ಗಣೇಶ ತೊಂಡೆಮಕ್ಕಿ, ಅಕ್ಷರ ದಾಸೋಹ ಮುಖಂಡರಾದ ಜಯಶ್ರೀ, ಶ್ರೀಧರ ಉಪ್ಪುಂದ, ಚಂದ್ರ ಉಪ್ಪುಂದ, ರಮೇಶ ಪೂಜಾರಿ, ಮಹಾಬಲ ವಡೇರಹೋಬಳಿ ಉಪಸ್ಥಿತರಿದ್ದರು.