ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಬೆರಳೆಣಿಕೆಯಷ್ಟು ಗ್ರಾಮಸ್ಥರಿಂದ ನಡೆಯುತ್ತಿದ್ದ ಮೊಳ್ಳಹಳ್ಳಿ ಗ್ರಾಮ ಪಂಚಾಯಿತಿ ಗ್ರಾಮಸಭೆಯಲ್ಲಿ ಈ ಬಾರಿ ಸಭಾಂಗಣ ತುಂಬಿ ಹೋಗಿದ್ದು ಮೊದಲ ಇತಿಹಾಸವಾದರೆ ಕೇವಲ ಮೂರು ಇಲಾಖೆಯ ಅಧಿಕಾರಿಗಳು ಮಾತ್ರ ಗ್ರಾಮಸಭೆಗೆ ಹಾಜರಾಗುವ ಮೂಲಕ ನಿಯಮ ಉಲ್ಲಂಘಿಸಿದ ಘಟನೆ ಮಂಗಳವಾರ ಮೊಳ್ಳಹಳ್ಳಿ ಗ್ರಾಮ ಪಂಚಾಯತಿ ಸಭಾಗಣದಲ್ಲಿ ಮಂಗಳವಾರ ನಡೆಯಿತು.
ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಅಧಿಕಾರಿ, ಪಶುಸಂಗೋಪನಾ ಇಲಾಖಾಧಿಕಾರಿ ಹಾಗೂ ಅರಣ್ಯ ಇಲಾಖೆ ಬಿಟ್ಟರೆ ಮತ್ಯಾವುದೇ ಅಧಿಕಾರಿಗಳು ಗ್ರಾಮಸಭೆಗೆ ಹಾಜರಾಗದೇ ಇರುವುದರ ಬಗ್ಗೆ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ ಘಟನೆಯೂ ನಡೆಯಿತು.
ಸಭೆಯಲ್ಲಿ ಅಧಿಕಾರಿಗಳ ಗೈರಾಗಿರುವುದರಿಂದ ಮೂವರು ಅಧಿಕಾರಿಗಳು ಮಾಹಿತಿ ನಿಡಿದ ತಕ್ಷಣ ಮೊಳಹಳ್ಳಿಯ ಸರ್ವೇ ನಂಬ್ರ ೨೫೨ರಲ್ಲಿ ಅಕ್ರಮ ಕ್ರಶರ್ ನಡೆಯುತ್ತಿದೆ. ಈ ಬಗ್ಗೆ ಗ್ರಾಮ ಪಂಚಾಯಿತಿ ನಿರ್ಲಕ್ಷ್ಯ ಧೋರಣೆ ಅನುಸರಿಸುತ್ತಿದೆ ಎಂದು ಪ್ರತಾಪ್ ಶೆಟ್ಟಿ ತಮ್ಮ ಆಕ್ರೋಶ ವ್ಯಕ್ತಪಡಿಸಿದರು. ಕಳೆದ ಒಂದೂವರೆ ವರ್ಷದಿಂದ ಪರವಾನಿಗೆ ನವೀಕರಣ ಆಗದೇ ಇದ್ದರೂ ಅಲ್ಲಿ ಕಲ್ಲು ಕೋರೆ ಕೆಲಸ ಮಾಡುತ್ತಿದೆ. ಈ ಬಗ್ಗೆ ಮಾಹಿತಿ ಹಕ್ಕಿನಡಿಯಲ್ಲಿ ಮಾಹಿತಿ ಪಡೆದಿದ್ದು, ಗ್ರಾಮ ಪಂಚಾಯಿತಿ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು. ಈ ಸಂದರ್ಭ ಪ್ರತಿಕ್ರಿಯಿಸಿದ ನೋಡಲ್ ಅಧಿಕಾರಿ ಶೋಭಾ ಶೆಟ್ಟಿ, ಇದು ಗಣಿಗಾರಿಕಾ ಇಲಾಖೆಗೆ ಸಂಬಂಧಿಸಿದ್ದಾಗಿದ್ದು ತಮ್ಮ ದೂರನ್ನು ಗ್ರಾಮ ಸಭೆಯಲ್ಲಿ ನಿರ್ಣಯ ಮಾಡಿ ಗಣಿ ಇಲಾಖೆಗೆ ಕಳುಹಿಸಿಕೊಡಲಾಗುತ್ತದೆ. ಮತ್ತು ಅದಕ್ಕೆ ಸ್ಪಷ್ಟೀಕರಣವನ್ನು ತಮಗೆ ನೀಡುವಂತೆ ಸೂಚಿಸಲಾಗುತ್ತದೆ ಎಂದರು. ಅಧಿಕಾರಿಗಳು ಈ ಬಗ್ಗೆ ಸ್ಪಷ್ಟೀಕರಣ ನೀಡದೇ ಇದ್ದರೆ ಉಚ್ಚ ನ್ಯಾಯಾಲಯದ ಮೆಟ್ಟಿಲೇರುವುದಾಗಿಯೂ ಇದೇ ಸಂದರ್ಭ ಎಚ್ಚರಿಸಿದರು.
ಹಿರಿಯ ಗ್ರಾಮಸ್ಥ, ನಿವೃತ್ತ ಬ್ಯಾಂಕ್ ಮೆನೇಜರ್ ವಿಶ್ವನಾಥ ಶೆಟ್ಟಿ ಮಾತನಾಡಿ, ಗ್ರಾಮ ಸಭೆಗೆ ಮುನ್ನ ನಡೆಯುವ ವಾರ್ಡ್ ಸಭೆಯ ಪೂರಕವಾಗಿ ನಡೆಯಬೇಕಿದ್ದ ಪ್ರಚಾರ ಸರಿಯಾಗಿ ನಡೆದಿಲ್ಲ. ಅಲ್ಲದೇ ವಾರ್ಡ್ ಸಭೆಯ ಸಂದರ್ಭ ಆಯಾ ವಾರ್ಡಿನ ಸದಸ್ಯರೂ ಗೈರಾಗಿದ್ದು, ವಾಡ್ ಸಭೆಯ ನಡೆಯಲಿಲ್ಲ. ಸ್ಥಲೀಯ ಸಂಸತ್ತಿನ ನಿಯಮಗಳನ್ನು ಗ್ರಾಮ ಪಂಚಾಯತಿ ಸದಸ್ಯರೇ ಗಾಳಿಗೆ ತೂರುತ್ತಿದ್ದಾರೆ ಎಂದು ಆಕ್ಷೇಪ ವ್ಯಕ್ತಪಡಿಸಿದರು. ಈ ಸಂದರ್ಭ ಗ್ರಾಮ ಪಂಚಾಯಿತಿ ಅಧ್ಯಕ್ಷ ಉದಯ ಕುಲಾಲ್ ಪ್ರತಿಕ್ರಿಯಿಭಿನ್ನು ಮುಂದೆ ಹಾಗಾಗದಂತೆ ನೋಡಿಕೊಳ್ಳುವುದಾಗಿ ಭರವಸೆ ನೀಡಿದರು.
ನಿಯಮದಂತೆ ಗ್ರಾಮಸಭೆಯ ಕಲಾಪಗಳು ನಡೆಯಿತಾದರೂ ಸಭೆಯ ಆರಂಭದಲ್ಲಿ ಈ ಹಿಂದಿನ ಗ್ರಾಮಸಭೆಯ ನಿರ್ಣಯ ಮತ್ತು ಪ್ರಗತಿ ಮಂಡನೆ ಮಾಡದೇ ಸಭೆ ಮುಂದುವರೆಸಲಾಯಿತು. ಇದೇ ಸಂದರ್ಭ ಗ್ರಾಮಸಭೆಯಲ್ಲಿ ಹಾಜರಿದ್ದ ಕೋಣಿ ಹರದ ಗ್ರಾಮಸ್ಥ ರಾಜ್‌ಕುಮಾರ್ ಅವರು, ಕೋಣಿ ಹರ ಪ್ರದೇಶ ಇತ್ತೀಚಿನ ದಿನಗಲ್ಲಿ ಮೂಲಭೂತ ಸೌಕರ್ಯ ವಂಚಿತವಾಗುತ್ತಿದೆ. ರಸ್ತೆ ಸಂಪೂರ್ಣ ಹದಗೆಟ್ಟಿದೆ. ದಾರಿ ದೀಪ ಕೆಟ್ಟು ಹೋಗಿದೆ. ಸರ್ಕಾರೀ ಬಸ್ ಸಂಪರ್ಕವೂ ನಿಯಮದಂತೆ ನಡೆಯುತ್ತಿಲ್ಲ ತಕ್ಷಣವೇ ಕ್ರಮಕೈಗೊಂಡು ಸಮಸ್ಯೆ ಪರಿಹಾರಕ್ಕೆ ಯತ್ನಿಸಬೇಕು ಎಂದು ಮನವಿ ಮಾಡಿದರು. ಗ್ರಾಮಸ್ಥ ಉದಯಕುಮಾರ್ ಶೆಟ್ಟಿ ಮಾತನಾಡಿ, ದಾರಿ ಬದಿಯಲ್ಲಿ ಕಾರ್ಖಾನೆಯ ಹೊಗೆ ವಿಪರೀತ ಹೋಗುತ್ತಿದ್ದು, ಅದನ್ನು ಆಕಾಶಕ್ಕೆ ಹೋಗುವಂತೆ ವ್ಯವಸ್ಥೆ ಮಾಡಲು ಕಾರ್ಖಾನೆ ಮಾಲೀಕರಿಗೆ ಸೂಚಿಸಬೇಕು ಎಂದು ಮನವಿ ಮಾಡಿದರು.
ಮತ್ತೋರ್ವ ಹಿರಿಯ ಗ್ರಾಮಸ್ಥ ಸೀತಾರಾಮ ಶೆಟ್ಟಿ ಮಾತನಾಡಿ, ಗ್ರಾಮ ಪಂಚಾಯಿತಿ ಸದಸ್ಯರು ಗ್ರಾಮಸ್ಥರೊಂದಿಗೆ ಸೌಹಾರ್ದಯುತವಾಗಿ ಮಾತನಾಡುವ ಸೌಜನ್ಯ ಬೆಳೆಸಿಕೊಳ್ಳಬೇಕು. ದರ್ಪ ದಬ್ಬಾಳಿಕೆಗಳನ್ನು ಬಿಟ್ಟು ಗ್ರಾಮದ ಅಭಿವೃದ್ಧಿಯ ಕಡೆಗೆ ಗಮನಕೊಡಿ ಎಂದು ಕಿವಿಮಾತು ಹೇಳಿದರು.
ಅಧಿಕಾರಿಗಳು ಗ್ರಾಮ ಸಭೆಗೆ ಗೈರಾಗುತ್ತಿದ್ದು ಇದು ಹಂದಿನಿಂದಲೂ ಮುಂದುವರೆದುಕೊಂಡು ಬಮದಿದೆ. ಇದು ಸರಿಯಲ್ಲಿ ಎನ್ನುವ ಗ್ರಾಮಸ್ಥರ ಆಕ್ರೋಶಕ್ಕೆ ಅಧಿಕಾರಿಗಳ ಪರವಹಿಸಿದ ನೋಡಲ್ ಆಫೀಸರ್, ಕೆಲವು ಅಧಿಕಾರಿಗಳು ಕೆಲಸ ಒತ್ತಡಲ್ಲಿದ್ದಾಗ ಬರುವುದು ಕಷ್ಟವಾಗುತ್ತದೆ. ಇನ್ನು ಕೆಲವು ಇಲಾಖೆಯಲ್ಲಿ ಸಿಬ್ಬಂದಿಯ ಕೊರತೆ ಇದ್ದು, ಅಂತಹಾ ಅಧಿಕಾರಿಗಳು ಗ್ರಾಮಸಭೆಗೆ ಬರಲಾಗುವುದಿಲ್ಲ ಎಂದಾಗ ಇಡೀ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿ ಮುಂದಿನ ಗ್ರಾಮಸಭೆಯಲ್ಲಿ ಅಧಿಕಾರಿಗಳು ಖಡ್ಡಾಯವಾಗಿ ಹಾಜರಾಗುವಂತೆ ನಿರ್ಣಯ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.
ಸದಸ್ಯ ಮರತ್ತೂರು ಚಂದ್ರಶೇಖರ ಶೆಟ್ಟಿ ಮಾತನಾಡಿ, ಗ್ರಾಮ ಸಭೆ ಪಂಚಾಯಿತಿ ವ್ಯಾಪ್ತಿಯ ಅಭಿವೃದ್ಧಿಯ ಬಗ್ಗೆ ಚರ್ಚೆಸುವುದಕ್ಕೆ ಮೀಸಲಾಗಬೇಕೇ ಹೊರತು ವೈಯುಕ್ತಿಕ ಪ್ರಶ್ನೆಗಳನ್ನು ಕೇಳುವುದಕ್ಕಾಗಬಾರದು. ಎಲ್ಲರೂ ಒಟ್ಟಾಗಿ ಚರ್ಚೆ ಮಾಡಿದಾಗ ಅಭಿವೃದ್ಧಿ ಸಾಧ್ಯ ಎಂದು ಹೇಳಿದರು.
ಸಭೆಯ ಅಧ್ಯಕ್ಷತೆಯನ್ನು ಗ್ರಾಮ ಪಂಚಾಯಿತಿ ಅಧ್ಯಕ್ಷ ಉದಯ ಕುಲಾಲ್ ವಹಿಸಿದ್ದರು. ಉಪಾಧ್ಯಕ್ಷೆ ವಾಣಿ ಆರ್ ಶೆಟ್ಟಿ, ಜಿಲ್ಲಾ ಪಂಚಾಯಿತಿ ಸದಸ್ಯೆ ಸುಪ್ರಿತಾ, ಗ್ರಾ.ಪಂ.ಸದಸ್ಯರಾದ ಚಂದ್ರಶೇಖರ ಶೆಟ್ಟಿ, ಉದಯಕುಮಾರ್ ಶೆಟ್ಟಿ, ಇಂದಿರಾ ಶೆಟ್ಟಿ, ಮನೋಜ್ ಕುಮಾರ್ ಶೆಟ್ಟಿ, ಸುಶೀಲಾ, ವನಜಾ, ಕನಕ ಹಾಗೂ ಲಕ್ಷ್ಮೀ ಉಪಸ್ಥಿತರಿದ್ದರು. ಗಲಾಟೆ ಗದ್ದಲದಲ್ಲಿ ಮುಗಿದ ಗ್ರಾಮಸಭೆಯಲ್ಲಿ ಫಲಾನುಭವಿಗಳ ಆಯ್ಕೆ ಅಸಾಧ್ಯವಾಗಿ ಹೋಯಿತು. ಗ್ರಾಮ ಪಂಚಾಯಿತಿ ಪಿಡಿಓ ಮಲ್ಲನ ಗೌಡ ಕಾರ್ಯಕ್ರಮ ನಿರ್ವಹಿಸಿದರು.