ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಇತಿಹಾಸ ಪ್ರಸಿದ್ಧ ಹಟ್ಟಿಯಂಗಡಿ ಶ್ರೀ ಸಿದ್ಧಿವಿನಾಯಕ ದೇವಸ್ಥಾನದಲ್ಲಿ ಶ್ರೀ ಗಣೇಶ ಚತುರ್ಥಿ ಮಹೋತ್ಸವದ ಅಂಗವಾಗಿ ನಡೆದ ಧಾರ್ಮಿಕ ಸಭೆಯಲ್ಲಿ ರಂಜಿತ್‌ಕುಮಾರ್ ಶೆಟ್ಟಿ ವಕ್ವಾಡಿ ನೇತೃತ್ವದಲ್ಲಿ ಶ್ರೀ ಕೃಪಾಪೋಷಿತ ಯಕ್ಷಗಾನ ಮಂಡಳಿ ಹಟ್ಟಿಯಂಗಡಿ ಮೇಳಕ್ಕೆ ಚಾಲನೆ ನೀಡಲಾಯಿತು. ಸಾಗರದ ಮಾಜಿ ಶಾಸಕ ಎಲ್.ಟಿ. ತಿಮ್ಮಪ್ಪ ಹೆಗ್ಡೆ ಅವರು ಯಕ್ಷಗಾನ ಮೇಳಕ್ಕೆ ಚಾಲನೆ ನೀಡಿ ಶುಭ ಹಾರೈಸಿದರು.
ಯಕ್ಷಗಾನ ಸಂಶೋಧಕ ಪಾದೇಕಲ್ಲು ವಿಷ್ಣು ಭಟ್ ಮಾತನಾಡಿ ಯಕ್ಷಗಾನಕ್ಕೆ ಸಾಹಿತ್ಯ ಮಾನ್ಯತೆ ದೊರೆಯ ಬೇಕಿದೆ. ಯಕ್ಷಗಾನದ ಭಾಷಾ ಜ್ಞಾನ, ವೈಖರಿ ಅಗಾಧವಾಗಿದ್ದು ಕನ್ನಡದ ಸಾಹಿತ್ಯ ಜಗತ್ತನ್ನು ಶ್ರೀಮಂತಗೊಳಿಸೆದೆ ಆದುದರಿಂದ ಯಕ್ಷಗಾನ ಸಾಹಿತ್ಯವೆಂಬುದನ್ನು ಪರಿಗಣಿಸಬೇಕಾದ ಅಗತ್ಯವಿದೆ ಎಂದರು.
ಶುಭಾಶಂಸನೆ ಮಾಡಿದ ಮಣಿಪಾಲ ಎಂ ಐ ಟಿಯ ಉಪನ್ಯಾಸಕ ಉದಯಕುಮಾರ ಶೆಟ್ಟಿ ಮಾತನಾಡಿ ಸಾಹಿತ್ಯಿಕ ಸಾಂಸ್ಕೃತಿಕ ನೆಲಗಟ್ಟಿನ ಹಟ್ಟಿಯಂಗಡಿಯಲ್ಲಿ ಉದಯವಾದ ಯಕ್ಷಗಾನ ಮೇಳ ಪೌರಾಣಿಕ ಪ್ರಸಂಗಗಳ ಮೂಲಕ ಜನಮಾನಸದಲ್ಲಿ ಅಚ್ಚಳಿಯದೇ ಉಳಿಯುವಂತಾಗಲಿ. ಯಕ್ಷಗಾನ ಕ್ಷೇತ್ರಕ್ಕೆ ಅನನ್ಯ ಸೇವೆ ಸಲ್ಲಿಸುವಂತಾಗಲಿ ಎಂದರು.
ಈ ಸಂದರ್ಭದಲ್ಲಿ ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಸ್ಥಾನದ ಮಾಜಿ ಧರ್ಮದರ್ಶಿ ಬಿ. ಎಂ. ಸುಕುಮಾರ ಶೆಟ್ಟಿ, ಬೆಂಗಳೂರಿನ ಉದ್ಯಮಿ ಆರ್. ಅರುಣಕುಮಾರ, ಕೋಟೇಶ್ವರದ ಶ್ರೀ ಕೋಟಿಲಿಂಗೇಶ್ವರ ದೇವಸ್ಥಾನದ ಮಾಜಿ ಧರ್ಮದರ್ಶಿ ಕೆ. ಗೋಪಾಲಕೃಷ್ಣ ಶೆಟ್ಟಿ ಉಪಸ್ಥಿತರಿದ್ದರು. ದೇವಳದ ಧರ್ಮದರ್ಶಿ ಹೆಚ್. ರಾಮಚಂದ್ರ ಭಟ್ ಪ್ರಾಸ್ತಾವಿಕ ಮಾತುಗಳನ್ನಾಡಿ ದೇವಳ ಬೆಳವಣಿಗೆಯ ಹಾದಿಯನ್ನು ಸ್ಮರಿಸಿಕೊಂಡರು. ಹಟ್ಟಿಯಂಗಡಿ ಶ್ರೀ ಸಿದ್ದಿವಿನಾಯಕ ವಸತಿ ಶಾಲೆ ಪ್ರಾಂಶುಪಾಲರಾದ ಶರಣ್‌ಕುಮಾರ್ ಫಲಾನುಭವಿಗಳ ಪಟ್ಟಿ ವಾಚಿಸಿದರು. ಉಪ ಪ್ರಾಂಶುಪಾಲರಾದ ರಾಮ ದೇವಾಡಿಗ ಕಾರ್ಯಕ್ರಮ ನಿರ್ವಹಿಸಿದರು. ದೇವಳದ ಅರ್ಚಕ ಬಾಲಚಂದ್ರ ಭಟ್ ವಂದಿಸಿದರು. ಈ ಸಂದರ್ಭದಲ್ಲಿ ಗಣೇಶೋತ್ಸವದ ಅಂಗವಾಗಿ ಏರ್ಪಡಿಸಿದ ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದ ಕುಂದಾಪುರ ತಾಲೂಕಿನ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು. ಅರ್ಹ ಫಲಾನುಭವಿಗಳಿಗೆ ಸಹಾಯಧನ ವಿತರಿಸಲಾಯಿತು.