ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು: ಸ್ವಂತಕ್ಕೆ ಸ್ವಲ್ಪ – ಸಮಾಜಕ್ಕೆ ಸರ್ವಸ್ವವೆಂಬ ಧ್ಯೇಯವನ್ನಿಟ್ಟುಕೊಂಡ ವ್ಯಕ್ತಿಗಳೂ ಆರಂಭಿಸುವ ಉದ್ಯಮ ಯಾವಾಗಲೂ ಯಶಸ್ಸನ್ನು ಕಾಣುತ್ತದೆ. ಸಮಾಜಕ್ಕೇನಾದರೂ ಮಾಡಬೇಕೆಂಬ ತುಡಿತದ ಹಿಂದೆ ಜನರ ಹಿತಕಾಯುವ ಉತ್ತಮ ಚಿಂತನೆ ಅಡಗಿರುತ್ತದೆ ಎಂದು ಪುತ್ತೂರು ಶ್ರೀ ವಿವೇಕಾನಂದ ವಿದ್ಯಾವರ್ದಕ ಸಂಘದ ಅಧ್ಯಕ್ಷ ಡಾ. ಕಲ್ಲಡ್ಕ ಪ್ರಭಾಕರ ಭಟ್ ಹೇಳಿದರು.
ಬೈಂದೂರು ಶ್ರೀ ಮೂಕಾಂಬಿಕಾ ಡೆವೆಲಪರ್ಸ್ ಹಾಗೂ ಮೆ. ವೃಂದಾ ಮಾರ್ಕೆಟಿಂಗ್ ಎಂಟರ್‌ಪ್ರೈಸಸ್ ಅವರ ನೂತನ ಕಟ್ಟಡ ‘ಸಿಟಿ ಪಾಯಿಂಟ್’ ಹಾಗೂ ಅತ್ಯಾಧುನಿಕ ಹವಾನಿಯಂತ್ರಿತ ಹೈಪರ್ ಮಾರ್ಕೆಟ್ ‘ನಮ್ಮ ಬಜಾರ್’ ಲೋಕಾರ್ಪಣೆಗೊಳಿಸಿ ಮಾತನಾಡಿದರು.
ಭಾರತ ಬದಲಾವಣೆಯ ಕಾಲಘಟ್ಟದಲ್ಲಿದೆ. ಮೂಲಭೂತ ಸೌಕರ್ಯ, ಶಿಕ್ಷಣ, ಉದ್ಯೋಗದಿಂದ ಸಮಾಜದ ಕಟ್ಟಕಡೆಯ ವ್ಯಕಿಯ ಜೀವನ ಮಟ್ಟವೂ ಸುಧಾರಿಸುತ್ತಿದೆ. ಹೆಚ್ಚುತ್ತಿರುವ ವ್ಯಕ್ತಿಯ ಅಗತ್ಯತೆಗಳಿಗೆ ತಕ್ಕಂತೆ ಬೈಂದೂರು ನಗರಕ್ಕೊಂದು ದೃಷ್ಠಿ ಎಂಬಂತೆ ಆರಂಭಗೊಂಡಿರುವ ನಮ್ಮ ಬಜಾರ್ ಜನರಿಗೆ ಹತ್ತಿರವಾಗಲಿದೆ ಎಂದ ಅವರು ಭಾರತೀಯರ ಜನಜೀವನ ಭಿನ್ನವಾದದ್ದು. ನಮ್ಮ ಆರ್ಥಿಕ ವ್ಯವಸ್ಥೆಯ ಕೇಂದ್ರಬಿಂದು ತಾಯಿ. ನಮ್ಮದು ಉಳಿಸುವ ಸಂಸ್ಕೃತಿ. ಹಾಗಾಗಿ ಕೆಲವು ವರ್ಷಗಳ ಹಿಂದೆ ವಿಶ್ವದ ಆರ್ಥಿಕತೆಯೇ ಕುಸಿದಾಗಲೂ ದೇಶದ ಮೇಲೆ ಅಂತಹ ಪರಿಣಾಮ ಬೀರಿರಲಿಲ್ಲ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಬೈಂದೂರು ಶಾಸಕ ಕೆ. ಗೋಪಾಲ ಪೂಜಾರಿ ಮಾತನಾಡಿ ಅಭಿವೃದ್ಧಿಯ ಪಥದಲ್ಲಿ ಸಾಗುತ್ತಿರುವ ಬೈಂದೂರು ತಾಲೂಕಾಗಬೇಕೆಂಬ ಕನಸು ನಮ್ಮೆಲ್ಲರದ್ದು. ಈ ಭಾರಿ ಮಾರ್ಚ್ ಬಜೆಟ್‌ನಲ್ಲಿ ತಾಲೂಕು ಘೋಷಣೆಯಾಗುವುದು ಖಚಿತ. ಬಹುಕಾಲದ ಬೇಡಿಕೆಯಾಗಿದ್ದ ಕುಡಿಯುವ ನೀರಿನ ಯೋಜನೆಯೂ ಪ್ರಗತಿಯಲ್ಲಿದ್ದು ಯಡ್ತರೆ ಬೈಂದೂರು, ಶಿರೂರು ಗ್ರಾಮಗಳಿಗೆ ಉಪಯೋಗವಾಗಲಿದೆ ಎಂದರು.
ರಾಯಚೂರಿನ ಸಿ.ಎ ಹಾಗೂ ಉದ್ಯಮಿ ಯು ರಾಮಚಂದ್ರ ಪ್ರಭು ಶುಭಶಂಸನೆಗೈದರು. ನಮ್ಮ ಬಜಾರ್ – ಸಿಟಿ ಪಾಯಿಂಟ್ ಪ್ರವರ್ತಕ, ಶ್ರೀ ಮೂಕಾಂಬಿಕಾ ಡೆವೆಲಪರ‍್ಸ್‌ನ ಕೆ. ವೆಂಕಟೇಶ ಕಿಣಿ ಸ್ವಾಗತಿಸಿ, ಪ್ರಾಸ್ತಾವಿಕ ಮಾತುಗಳನ್ನಾಡಿದರು. ಜಾದೂಗಾರ ಓಂಗಣೇಶ್ ಉಪ್ಪುಂದ ನಿರೂಪಿಸಿದರು.