ಕುಂದಾಪ್ರ ಡಾಟ್ ಕಾಂ ಸುದ್ದಿ.
ಕೋಟ: ನಾಲ್ಕು ಗೋಡೆಗಳ ಮಧ್ಯ ಕುಳಿತು ಓದುವ ವಿಶ್ವವಿದ್ಯಾಲಯವನ್ನು ಬಿಟ್ಟು ಇಡೀ ವಿಶ್ವವನ್ನೆ ವಿಶ್ವವಿದ್ಯಾಲಯವನ್ನಾಗಿಕೊಂಡು ನೋಡಿ, ಕೇಳಿ, ಅನುಭವಿಸಿ ಕಲಿತವರು ಕಾರಂತರು. ಅವರ ಪ್ರತಿಯೊಂದು ಕೃತಿಯಲ್ಲೂ ಕೂಡ ಸೃಜನ ಶೀಲತೆಯನ್ನು ನಾವು ಕಾಣಬಹುದು, ಆದರೆ ಇಂದು ಮಕ್ಕಳಲ್ಲಿ ಸೃಜನೆ ಶೀಲತೆಗೆ ಪ್ರೋತ್ಸಾಹಿಸುವ ಕೆಲಸಗಳು ಆಗುತ್ತಿಲ್ಲ. ಬರೀ ಕಟ್, ಕಾಪಿ, ಪೇಸ್ಟ್ ಸಂಸ್ಕೃತಿಯಿಂದಾಗಿ ಸೃಜನಶೀಲತೆ ಮರೆಯಾಗುತ್ತಿದೆ ಎಂದು ವಿಧಾನಪರಿಷತ್ ವಿರೋಧ ಪಕ್ಷದ ಮುಖ್ಯ ಸಚೇತಕ ಕ್ಯಾಪ್ಟನ್ ಗಣೇಶ್ ಕಾರ್ಣಿಕ್ ಹೇಳಿದರು.
ಅವರು ಕೋಟ ಶಿವರಾಮ ಕಾರಂತ ಥೀಂ ಪಾರ್ಕ್‌ನಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಬೆಂಗಳೂರು, ಕರ್ನಾಟಕ ಶಿಲ್ಪಕಲಾ ಅಕಾಡೆಮಿ ಬೆಂಗಳೂರು, ಕೋಟತಟ್ಟು ಗ್ರಾಮ ಪಂಚಾಯಿತಿ ಕೋಟ, ಡಾ.ಶಿವರಾಮ ಕಾರಂತ ಪ್ರತಿಷ್ಠಾನ (ರಿ.) ಕೋಟ ಇವರ ಸಹಭಾಗಿತ್ವದಲ್ಲಿ ಆಯೋಜಿಸಲಾದ ಡಾ.ಶಿವರಾಮ ಕಾರಂತರ ವಿಷಯಾಧಾರಿತ ರಾಜ್ಯಮಟ್ಟದ ಸಿಮೆಂಟ್ ಶಿಲ್ಪಕಲಾ ಶಿಬಿರದ ಸಮಾರೋಪ ಸಮಾರಂಭದಲ್ಲಿ ಡಾ.ಶಿವರಾಮ ಕಾರಂತರ ಫೈಬರ್ ಪ್ರತಿಕೃತಿಯನ್ನು ಲೋಕಾರ್ಪಣೆಗೊಳಿಸಿ ಮಾತನಾಡಿದರು. ನಮ್ಮ ರಾಜ್ಯದಲ್ಲಿ ಜ್ಞಾನ ಪೀಠ ಪ್ರಶಸ್ತಿ ಪುರಸ್ಕೃತ ಸಾಹಿತಿಗಳಲ್ಲಿ, ಯಾರೋಬ್ಬರಿಗೂ ಸಿಗದ ಗೌರವಾಧರಗಳನ್ನು ಕಾರಂತರಿಗೆ ತಮ್ಮ ಹುಟ್ಟೂರಿನಲ್ಲಿ ನೀಡಲಾಗಿದೆ. ಕೋಟ ಶ್ರೀನಿವಾಸ ಪೂಜಾರಿಯವರ ನೇತೃತ್ವದಲ್ಲಿ ಕೋಟತಟ್ಟು ಪಂಚಾಯಿತಿ ಕಾರಂತರ ಹೆಸರಿನಲ್ಲಿ ಥೀಂ ಪಾರ್ಕ್ ನಿರ್ಮಿಸುವ ಮೂಲಕ ಕಾರಂತರ ಪರಿಕಲ್ಪನೆಯ ಕಾರ್ಯಕ್ರಮಗಳನ್ನು ರೂಪಿಸಿ ಸಮಾಜಕ್ಕೆ ತಿಳಿಯ ಪಡಿಸುವ ಕಾರ್ಯ ನಡೆಸುತ್ತಿರುವುದು ಶ್ಲಾಘನೀಯ ಎಂದರು.
ಕರ್ನಾಟಕ ಶಿಲ್ಪಕಲಾ ಅಕಾಡೆಮಿ ಅಧ್ಯಕ್ಷ ಮಹಾದೇವಪ್ಪ ಶಂಭುಲಿಂಗಪ್ಪ ಶಿಲ್ಪಿ ಕಾರ್ಯಕ್ರಮದ ಅಧ್ಯಕ್ಷತೆವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಜಿಲ್ಲಾ ಪಂಚಾಯಿತಿ ಸದಸ್ಯ ರಾಘವೇಂದ್ರ ಕಾಂಚನ್, ಆನೆಗುಡ್ಡೆ ಶ್ರೀಸಿದ್ಧಿವಿನಾಯಕ ದೇವಸ್ಥಾನದ ಆಡಳಿತ ಮೊಕ್ತೇಸರ ಸೂರ್ಯನಾರಾಯಣ ಉಪಾಧ್ಯ, ಸಾಲಿಗ್ರಾಮ ಶ್ರೀಗುರು ನರಸಿಂಹ ದೇವಸ್ಥಾನದ ಆಡಳಿತ ಮೊಕ್ತೇಸರ ಅನಂತ ಪದ್ಮನಾಭ ಐತಾಳ್, ಕೋಟತಟ್ಟು ಪಂಚಾಯಿತಿ ಅಧ್ಯಕ್ಷ ಎಚ್.ಪ್ರಮೋದ್ ಹಂದೆ, ಕೋಟ ರಾಜಶೇಖರ ದೇವಸ್ಥಾನದ ಆಡಳಿತ ಮೊಕ್ತೇಸರ ಪ್ರಭಾಕರ ಅಡಿಗ, ಕಿದಿಯೂರು ಉದಯ್‌ಕುಮಾರ್ ಫ್ಯಾಮಿಲಿ ಟ್ರಸ್ಟ್ ಪ್ರವರ್ತಕ ಉದಯಕುಮಾರ್ ಶೆಟ್ಟಿ, ಉದ್ಯಮಿ ವಿಲಾಸ್ ನಾಯಕ್, ಕೋಟ ಸಿಎ ಬ್ಯಾಂಕ್ ಅಧ್ಯಕ್ಷ ಜಿ.ತಿಮ್ಮ ಪೂಜಾರಿ, ಉದ್ಯಮಿ ಕೆ.ರಾಧಾಕೃಷ್ಣ ನಾಯಕ್, ಮುಂಬಯಿ ಉದ್ಯಮಿ ರತ್ನಾಕರ್ ಶೆಟ್ಟಿ, ಉದ್ಯಮಿ ಸುರೇಶ್ ಪಡುಕೋಣೆ ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ಕೋಟತಟ್ಟು ಪಂಚಾಯಿತಿ ಉಪಾಧ್ಯಕ್ಷ ಲೋಕೆಶ್ ಶೆಟ್ಟಿ, ಅಭಿವೃದ್ಧಿ ಅಧಿಕಾರಿ ಪಾರ್ವತಿ, ಕಾರ್ಯದರ್ಶಿ ಮೀರಾ ಮತ್ತು ಸರ್ವ ಸದಸ್ಯರು ಉಪಸ್ಥಿತರಿದ್ದರು.
ಈ ಸಂದರ್ಭ ಕರ್ನಾಟಕ ಶಿಲ್ಪಕಲಾ ಅಕಾಡೆಮಿ ಅಧ್ಯಕ್ಷ ಮಹಾದೇವಪ್ಪ ಶಂಭುಲಿಂಗಪ್ಪ ಶಿಲ್ಪಿ, ಪ್ರತಿಷ್ಠಾನ ಸದಸ್ಯ ಸುಬ್ರಾಯ ಆಚಾರ್ಯ, ಕರ್ನಾಟಕ ಶಿಲ್ಪಕಲಾ ಅಕಾಡೆಮಿ ಸದಸ್ಯ ಸಂಚಾಲಕ ಡಾ.ವಿರೂಪಾಕ್ಷ ಬಿ.ಬಡಿಗೇರ, ಶಿಬಿರ ನಿರ್ದೇಶಕ ವೆಂಕಟೇಶ್ ಎಂ. ಮತ್ತು ಶಿಲ್ಪಕಲಾ ಶಿಬಿರದಲ್ಲಿ ಭಾಗವಹಿಸಿದ ೧೦ ಜನ ಹಿರಿಯ ಶಿಲ್ಪಿಗಳನ್ನು, ೧೦ ಜನ ಕಿರಿಯ ಸಹಾಯಕ ಶಿಲ್ಪಿಗಳನ್ನು ಸನ್ಮಾನಿಸಿ ಗೌರವಿಸಲಾಯಿತು.
ಮಾಜಿ ಸಚಿವ ವಿಧಾನ ಪರಿಷತ್ ಸದಸ್ಯ ಕೋಟ ಶ್ರೀನಿವಾಸ ಪೂಜಾರಿ ಪ್ರಸ್ತಾವಿಸಿದರು. ಪ್ರತಿಷ್ಠಾನದ ಕಾರ್ಯಾಧ್ಯಕ್ಷ ಆನಂದ ಸಿ.ಕುಂದರ್ ಸ್ವಾಗತಿಸಿದರು. ಪ್ರಸಾದ್ ಕಾರ್ಯಕ್ರಮ ನಿರೂಪಿಸಿದರು. ಕಾರ್ಯಕ್ರಮದಲ್ಲಿ ಜ್ಞಾನಪೀಠ ಪುರಸ್ಕೃತದ ಫೈಬರ್ ಕಲಾಕೃತಿ, ಕಾರಂತರ ಮೂರು ಫೈಬರ್ ಕಲಾಕೃತಿ, ಮೂಕಜ್ಜಿಯ ಕನಸು, ಚೋಮನ ದುಡಿ, ಬಡುಗು ಮತ್ತು ತೆಂಕು ತಿಟ್ಟಿನ ಪುಂಡು ವೇಷದ ಸಿಮೆಂಟ್ ಕಲಾಕೃತಿ, ಯಕ್ಷಗಾನದ ಬ್ಯಾಲೆಯ ಜಟಾಯು ಕಲ್ಪನೆಯ ಸಿಮೆಂಟ್ ಕಲಾಕೃತಿಗಳನ್ನು ಲೋಕಾರ್ಪಣೆ ಮಾಡಲಾಯಿತು.