ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಕರ್ನಾಟಕ ಪ್ರಾಂತ ಕೃಷಿ ಕೂಲಿಕಾರರ ಸಂಘ ಕುಂದಾಪುರ ತಾಲೂಕು ಸಮಿತಿ ನೇತೃತ್ವದಲ್ಲಿ ಮನೆ ನಿವೇಶನ ರಹಿತರಿಗೆ ಭೂಮಿ ಹಕ್ಕು ಪತ್ರ ಮಂಜೂರು ಮಾಡಲು ಆಗ್ರಹಿಸಿ ಹಾಗೂ ಸರಕಾರದಿಂದ ಗುರುತಿಸಿರುವ ಸರಕಾರಿ ಭೂಮಿಯನ್ನು ಕಾಲಮಿತಿಯೊಳಗೆ ವಿತರಣೆ ಮಾಡಬೇಕು ಎಂದು ಆಗ್ರಹಿಸಿ ಕುಂದಾಪುರ ಮಿನಿ ವಿಧಾನ ಸೌಧ ಎದುರು ನಿವೇಶನ ರಹಿತ ಅರ್ಜಿದಾರರು ಬೃಹತ್ ಪ್ರತಿಭಟನೆ ನಡೆಸಿದರು.
ಭೂಮಿ ಹಕ್ಕು ಪತ್ರ ಮಂಜೂರು ಮಾಡಲು ಆಗ್ರಹಿಸಿ ಸ್ವೀಕರಿಸಿದ ಅರ್ಜಿಗಳನ್ನು ಪರಿಶೀಲಿಸಿ ನಿವೇಶನ ರಹಿತರ – ಅಂತಿಮ ಪಟ್ಟಿ ಸಿದ್ಧಪಡಿಸಿ ವರ್ಷ ಕಳೆದರೂ ಈ ತನಕ ಭೂಮಿ ಹಕ್ಕು ಪತ್ರ ಮಂಜೂರು ಮಾಡುವುದಕ್ಕೆ ಸರಕಾರಿ ಜಾಗ ಗುರುತಿಸಲಾಗಿದ್ದರೂ ನಿವೇಶನ ರಹಿತರಿಗೆ ವಿತರಣೆ ಮಾಡದೇ ನಿಧಾನ ದ್ರೋಹ ಮಾಡಲಾಗಿದೆ. ಆದ್ದರಿಂದ ಕಂದಾಯ ಇಲಾಖೆ ಗುರುತಿಸಿರುವ ಸರಕಾರಿ ಭೂಮಿಯನ್ನು ಕಾಲ ಮಿತಿಯೊಳಗೆ ವಿತರಣೆ ಮಾಡಲು ಕ್ರಮ ವಹಿಸಬೇಕೆಂದು ಕರ್ನಾಟಕ ಪ್ರಾಂತ ಕೃಷಿ ಕೂಲಿಕಾರರ ಸಂಘದ ರಾಜ್ಯ ಉಪಾಧ್ಯಕ್ಷ ಹಾಗೂ ಮಂಡ್ಯ ಜಿಲ್ಲಾಧ್ಯಕ್ಷ ಪುಟ್ಟ ಮಾದು ಹೇಳಿದರು.
ಜಂಟಿ ಸಭೆ ಕರೆಯಲು ಆಗ್ರಹ : ಕರ್ನಾಟಕ ಪ್ರಾಂತ ಕೃಷಿ ಕೂಲಿಕಾರರ ಸಂಘದ ಉಡುಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಧರಣಿ ನಿರತ ಹೋರಾಟಗಾರರನ್ನುದ್ದೇಶಿಸಿ ಮಾತನಾಡುತ್ತಾ, ಕಂದಾಯ ಇಲಾಖಾಧಿಕಾರಿ, ಕಂದಾಯ ನಿರೀಕ್ಷಕರು, ಸರ್ವೆಯರ್, ಗ್ರಾಮ ಲೆಕ್ಕಾಧಿಕಾರಿ, ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ, ತಾಲೂಕು ಪಂಚಾಯತ್, ಕಾರ್ಯನಿರ್ವಹಣಾಧಿಕಾರಿ, ಪುರಸಭಾ ಮುಖ್ಯಾಧಿಕಾರಿ, ಇವರನ್ನೊಳಗೊಂಡಂತೆ ಕೃಷಿ ಕೂಲಿಕಾರರ ಸಂಘದ ಪದಾಧಿಕಾರಿಗಳ ಜತೆ ನಿವೇಶನ ಸ್ಥಳದ ಹಕ್ಕು ಪತ್ರ ವಿತರಣೆಯ ಪ್ರಗತಿ ಪರಿಶೀಲನೆಗಾಗಿ ಜಂಟಿ ಸಭೆಯನ್ನು ಕರೆಯಬೇಕು ಎಂದು ಸರಕಾರವನ್ನು ಆಗ್ರಹಿಸಿದರು.
ಈ ಸಂದರ್ಭದಲ್ಲಿ ಕರ್ನಾಟಕ ಪ್ರಾಂತ ಕೃಷಿ ಕೂಲಿಕಾರರ ಸಂಘದ ಮುಖಂಡರಾದ ರಾಜೀವ ಪಡುಕೋಣೆ, ನಾಗರತ್ನ ನಾಡ, ಕೆ. ಶಂಕರ, ಮಹಾಬಲ ವಡೇರ ಹೋಬಳಿ, ಸುಬ್ರಹ್ಮಣ್ಯ ಆಚಾರ್, ಶೀಲಾವತಿ, ರಮೇಶ ಪೂಜಾರಿ, ಬಾಲಕೃಷ್ಣ ಕೆ.ಎಂ., ಗೋಪಾಲ ಶೆಟ್ಟಿಗಾರ್, ಪದ್ಮಾವತಿ ಶೆಟ್ಟಿ, ಕುಶಲ ಕರಿಯ ದೇವಾಡಿಗ, ಶಂಕರ ಆನಗಳ್ಳಿ, ರಮಾನಾಥ ಭಂಡಾರಿ, ಮನ್ಸೂರ್ ಇಬ್ರಾಹಿಂ ಮರವಂತೆ, ಯಶೋಧ ಹೊಯ್ಯಾಣ, ಶ್ರೀನಿವಾಸ ಪೂಜಾರಿ ಗುಜ್ಜಾಡಿ, ಗಣಪತಿ ಶೇಟ್ ಕೋಣಿ, ಅಶೋಕ ಹಟ್ಟಿಯಂಗಡಿ, ಸತೀಶ ತೆಕ್ಕಟ್ಟೆ, ಜಿ.ಡಿ.ಪಂಜು ಮೊದಲಾದವರು ಉಪಸ್ಥಿತರಿದ್ದರು.
ಮನವಿ ಸ್ವೀಕರಿಸಿದ ಕುಂದಾಪುರ ತಹಶೀಲ್ದಾರ್ ಬೊರ್ಕರ್ ಅವರು ಮಾತನಾಡಿ, ಅಕ್ಟೋಬರ್ 2014ರಂದು ಜಂಟಿ ಸಭೆಯನ್ನು ನಡೆಸಲು ತೀರ್ಮಾನಿಸಲಾಗಿದೆ. ಹಾಗೂ ಮುಂದಿನ ೩ ತಿಂಗಳ ಒಳಗಾಗಿ ಪ್ರಥಮ ಹಂತ ಮನೆ ನಿವೇಶನ ಹಂಚಿಕೆಯ ಪ್ರಕ್ರಿಯೆಯನ್ನು ಆರಂಭಿಸಲಾಗುವುದಲ್ಲದೇ ಸಂಘ ನೀಡಿದ ಕಂದಾಯ ಇಲಾಖೆಯಿಂದ ಗುರುತಿಸಿರುವ ಸರಕಾರಿ ಜಾಗ ಅತಿಕ್ರಮಣ ಮಾಡಿರುವ ಸ್ಥಳವನ್ನು ತೆರವು ಗೊಳಿಸುವುದಕ್ಕಾಗಿ ಸಿದ್ಧಪಡಿಸಿದ ಕ್ರಿಯಾ ಯೋಜನಾ ಪಟ್ಟಿಯಂತೆ ಸ್ಥಳ ಸ್ವಾಧೀನಪಡಿಸಿ ನಿವೇಶನ ರಹಿತರಿಗೆ ನೀಡುವ ಬಗ್ಗೆ ಕ್ರಮ ಕೈಗೊಳ್ಳಲಾಗುವುದು ಎಂದರು. ಧರಣಿ ಮುಷ್ಕರದ ಹೋರಾಟ ಕಾರ್ಯಕ್ರಮವನ್ನು ವೆಂಕಟೇಶ ಕೋಣಿ ನಿರೂಪಿಸಿದರು.