ಕುಂದಾಪ್ರ ಡಾಟ್ ಕಾಂ ಸುದ್ದಿ
ಕುಂದಾಪುರ: ಬದುಕಿನಲ್ಲಿ ನಿರ್ದಿಷ್ಟವಾಗಿ ಗುರಿ ಹಾಗೂ ಅದನ್ನು ಸಾಧಿಸಲು ಸತತವಾದ ಪರಿಶ್ರಮವಿದ್ದರೆ ಯಶಸ್ಸು ನಿಮ್ಮನ್ನು ಹಿಂಬಾಲಿಸಲಿದೆ. ಕುಂದಾಪುರದವರಾದ ಅನೂಪ ರಾಷ್ಟ್ರ ಮಟ್ಟದಲ್ಲಿ ಗುರುತಿಸುವಂತಹ ಸಾಧನೆಗೈದಿರುವುದು ಹೆಮ್ಮೆಯ ಸಂಗತಿ ಎಂದು ಉಡುಪಿ ಧರ್ಮಪ್ರಾಂತ್ಯದ ಧರ್ಮಗುರು ವ. ಜರಾಲ್ಡ್ ಐಸಾಕ್ ಲೋಬೋ ಹೇಳಿದರು.
ಅವರು ಕುಂದಾಪುರ ಕ್ಯಾಥೋಲಿಕ್ ಸಭಾದ ವತಿಯಿಂದ ಕುಂದಾಪುರ ಸಂತ ಜೋಸೆಫರ ಪ್ರೌಢಶಾಲೆಯಲ್ಲಿ ಜರುಗಿದ ಕಾರ್ಯಕ್ರಮದಲ್ಲಿ ಏಕಲವ್ಯ ಪ್ರಶಸ್ತಿ ಪುರಸ್ಕೃತ ಅನೂಪ್ ಡಿಕೋಸ್ಟಾ ಅವರಿಗೆ ಕ್ಯಾಥೋಲಿಕ್ ಸಭಾ ಹಾಗೂ ಉಡುಪಿ ಧರ್ಮಪ್ರಾಂತ್ಯದ ಪರವಾಗಿ ಸನ್ಮಾನಿಸಿ ಮಾತನಾಡಿದರು.
ಸನ್ಮಾನ ಸ್ವೀಕರಿಸಿದ ಅನೂಪ್ ಡಿಕೋಸ್ಟಾ ಮಾತನಾಡಿ ನನ್ನ ಸಾಧನೆಯ ಹಿಂದೆ ತಂದೆ-ತಾಯಿಯ ಮಾರ್ಗದರ್ಶನ ಹಾಗೂ ಗುರುಗಳ ನಿರಂತರವಾದ ಪ್ರೋತ್ಸಾಹವಿದೆ. ಗುರಿ ತಲುಪುವ ಕನಸು ಕಾಣುವುದರೊಂದಿಗೆ ಅದಕ್ಕೆ ಪೂರಕ ತಯಾರಿಗಳನ್ನು ಮಾಡಿಕೊಂಡಲೇ ಯಶಸ್ಸನ್ನು ಸಾಧಿಸುವ ಸಾಧ್ಯವಿದೆ ಎಂದರು.
ಕುಂದಾಪುರದ ಹೋಲಿ ರೋಜರಿ ಚರ್ಚ್ ಧರ್ಮಗುರು ಅನಿಲ್ ಡಿಸೋಜಾ, ಎಐಸಿಯು ರಾಜ್ಯಾಧ್ಯಕ್ಷ ವಾಲ್ಟರ್ ಪಿಂಟೋ, ಕ್ಯಾಥೊಲಿಕ್ ಸಭಾ ವಲಯ ಸಮಿತಿ ಅಧ್ಯಕ್ಷ ಒಲಿವೆರಾ ಫೆರ್ನಾಂಡಿಸ್, ಕುಂದಾಪುರ ವಲಯ ಕಾರ್ಯದರ್ಶಿ ಶೈಲಾ ಅಲ್ಮೇಡಾ, ಮೊದಲಾದವರು ಉಪಸ್ಥಿತರಿದ್ದರು. ಕುಂದಾಪುರ ವಲಯ ಅಧ್ಯಕ್ಷ ಫ್ಲೇವಿನ್ ಡಿಸೋಜಾ ಸನ್ಮಾನಿತರ ಪರಿಚಯ ಪತ್ರ ವಾಚಿಸಿದರು. ಉಪಾಧ್ಯಕ್ಷೆ ಮೇಬಲ್ ನಿರೂಪಿಸಿದರು.


















