ಬೈಂದೂರು ಪ್ರಥಮ ದರ್ಜೆ ಕಾಲೇಜಿನಲ್ಲಿ ಕಾಮರ್ಸ್ ಲ್ಯಾಬ್ ಉದ್ಘಾಟನೆ
ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು: ಪಠ್ಯವಸ್ತುವಿನ ಹೊರತಾದ ಮಾಹಿತಿ ಸಂಗ್ರಹಿಸಿ ವಿದ್ಯಾರ್ಥಿಗಳ ಪ್ರಾಯೋಗಿಕ ಕಲಿಕೆಗೆ ಪೂರಕವಾಗುವ ಒಂದು ವಿನೂತನ ಪ್ರಯತ್ನ ಅವನ್ನು ಬೈಂದೂರು ಪದವಿ ಕಾಲೇಜಿನಲ್ಲಿ ಮಾಡಲಾಗಿದ್ದು ಅವು ವಿದ್ಯಾರ್ಥಿಗಳ ಜ್ಞಾನ ವಿಸ್ತಾರ ಮತ್ತು ಉದ್ಯೋಗ ಗಳಿಕೆಗೆ ಸಹಕಾರಿಯಾಗುತ್ತವೆ ಎಂದು ಕಾಲೇಜು ಅಭಿವೃದ್ಧಿ ಮಂಡಳಿಯ ಸದಸ್ಯ ಎಸ್. ರಾಜು ಪೂಜಾರಿ ಹೇಳಿದರು.
ಅವರು ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಆರಂಭವಾದ ಕಾಮರ್ಸ್ ಲ್ಯಾಬರೇಟರಿಯನ್ನು ಉದ್ಘಾಟಿಸಿ ಮಾತನಾಡಿದರು.
ಪ್ರಾಂಶುಪಾಲ ಬಿ. ಎ. ಮೇಳಿ ಅಧ್ಯಕ್ಷತೆ ವಹಿಸಿದ್ದರು. ಪ್ರಾಸ್ತಾವಿಕವಾಗಿ ಮಾತನಾಡಿದ ಕಾಮರ್ಸ್ ವಿಭಾಗ ಮುಖ್ಯಸ್ಥ ಡಾ. ಉಮೇಶ ಮಯ್ಯ ಕಾಮರ್ಸ್ ಲ್ಯಾಬ್ ವಿದ್ಯಾರ್ಥಿಗಳ ಪಠ್ಯವಸ್ತು ಕಲಿಕೆ ಮತ್ತು ಪ್ರಾಯೋಗಿಕ ಕಲಿಕೆಯ ನಡುವಿನ ಕೊಂಡಿಯಾಗಿರುತ್ತದೆ. ದೇಶದ ವಾಣಿಜ್ಯ ಕ್ಷೇತ್ರಕ್ಕೆ ಸಂಬಂಧಿಸಿದ ಹತ್ತಾರು ಮಹತ್ವದ ವಿಷಯಗಳನ್ನು ಇಲ್ಲಿ ಸಂಗ್ರಹಿಸಿ ಇಡಲಾಗಿದೆ. ಬ್ಯಾಂಕ್, ವಿಮೆ, ಶೇರು ಮಾರುಕಟ್ಟೆ, ಕಂಪನಿ ವ್ಯವಹಾರಗಳು, ನಿರ್ವಹಣಾ ವಿಜ್ಞಾನ ಇತ್ಯಾದಿ ವಿಚಾರಗಳನ್ನು ಇಲ್ಲಿ ಕಲಿಯಲು ಅವಕಾಶವಿದೆ ಎಂದರು.
ಅತಿಥಿಯಾಗಿದ್ದ ಕಾಲೇಜು ಅಭಿವೃದ್ಧಿ ಸಮಿತಿಯ ಇನ್ನೋರ್ವ ಸದಸ್ಯ ಎಸ್. ಜನಾರ್ದನ ಮರವಂತೆ ಶುಭ ಹಾರೈಸಿದರು. ವಿಭಾಗದ ಉಪನ್ಯಾಸಕ ಅಣ್ಣಪ್ಪ ಪೂಜಾರಿ ವಂದಿಸಿದರು. ಎಸ್. ಮಣಿಕಂಠ ನಿರೂಪಿಸಿದರು.