ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಇಂಗ್ಲೆಂಡಿನ ಭಾರತೀಯ ದೂತಾವಾಸ ಆಗಸ್ಟ್‌ನಲ್ಲಿ ಲಂಡನಿನ ಜಿಮಖಾನಾ ಬಯಲಿನಲ್ಲಿ ಏರ್ಪಡಿಸಿದ್ದ ಭಾರತದ 70ನೆಯ ಸ್ವಾತಂತ್ರ್ಯೋತ್ಸವದಲ್ಲಿ ಬಡಗುತಿಟ್ಟಿನ ಯಕ್ಷಗಾನದ ತುಣುಕೊಂದನ್ನು ಪ್ರದರ್ಶಿಸಿ ಜಾಗತಿಕ ಮಾಧ್ಯಮಗಳೂ ಸೇರಿ ನೆರೆದವರ ಗಮನ ಸೆಳೆದಿದ್ದ ಕುಂದಾಪುರದ ತರುಣರಿಬ್ಬರು ನವೆಂಬರ್ ಮೊದಲ ವಾರದಲ್ಲಿ ಲಂಡನ್ ನಗರದ ಪ್ರಮುಖ ಪ್ರದರ್ಶನ ಕೇಂದ್ರಗಳಲ್ಲಿ ನಡೆಯುವ ’ಲಂಡನ್ ಇಂಟರ್‌ನ್ಯಾಶನಲ್ ಆರ್ಟ್ ಫೆಸ್ಟಿವಲ್’ನಲ್ಲಿ ಇನ್ನೊಮ್ಮೆ ಮಿಂಚುವ ಅವಕಾಶ ಗಿಟ್ಟಿಸಿಕೊಂಡಿದ್ದಾರೆ.
ಅಲ್ಲಿನ ಡಂಕ್ಯಾಸ್ಟರ್ ನಗರದಲ್ಲಿ ವೈದ್ಯರಾಗಿರುವ ಬೈಂದೂರು ಮೂಲದ ಗುರುಪ್ರಸಾದ ಪಟ್ವಾಲ್ ಮತ್ತು ಬ್ರಿಸ್ಟಲ್‌ನ ಏರ್‌ಬಸ್ ವಿಮಾನ ತಯಾರಿಕಾ ಕಂಪನಿಯಲ್ಲಿ ತಂತ್ರಜ್ಞರಾಗಿರುವ ಯೋಗೀಂದ್ರ ಮರವಂತೆ ನವಂಬರ್ 5ರಂದು ಇಲ್ಫೋರ್ಡ್‌ನ ರೆಡ್‌ಬ್ರಿಜ್ ಟೌನ್‌ಹಾಲ್‌ನಲ್ಲಿ ’ಕಂಸವಧೆ’ಯ ದೃಶ್ಯವೊಂದನ್ನು ಪ್ರಸ್ತುತಪಡಿಸಲು ಆಮಂತ್ರಿತರಾಗಿದ್ದಾರೆ. ಲಂಡನ್ ಕೇಂದ್ರವಾಗಿಸಿಕೊಂಡು 2012ರಿಂದ ಭಾರತೀಯ ಕಲೆಯನ್ನು ಪ್ರಚುರಪಡಿಸುತ್ತಿರುವ ವಯಲಿನ್ ವಿದುಷಿ ಜ್ಯೋತ್ಸ್ನಾ ಶ್ರೀಕಾಂತ್ ಅವರ ಕಲಾಸಂಸ್ಥೆ ’ಧ್ರುವ್ ಆರ್ಟ್ಸ್’ ಈ ಐದು ದಿನಗಳ ಫೆಸ್ಟಿವಲ್‌ನ ಆಯೋಜಕ. ಭಾರತವೂ ಸೇರಿದಂತೆ ವಿವಿಧ ದೇಶಗಳ ಖ್ಯಾತನಾಮ ಸಂಗೀತ, ನೃತ್ಯ ಕಲಾವಿದರು ಇದರಲ್ಲಿ ಪ್ರದರ್ಶನ ನೀಡುತ್ತಾರೆ. ಇದೇ ಮೊದಲ ಬಾರಿಗೆ ಇದರಲ್ಲಿ ಯಕ್ಷಗಾನ ಸೇರ್ಪಡೆಯಾಗಿದೆ.
ಬೈಂದೂರಿನ ದಿ. ಗೋವಿಂದ ಪಟ್ವಾಲ್-ಸರೋಜಿನಿ ಅವರ ಪುತ್ರರಾಗಿರುವ ಗುರುಪ್ರಸಾದ್ ಕುಂದಾಪುರ, ಉಡುಪಿಗಳಲ್ಲಿ ಆರಂಭಿಕ ಶಿಕ್ಷಣ, ಮೈಸೂರು ಮತ್ತು ಇಂಗ್ಲೆಂಡಿನಲ್ಲಿ ವೈದ್ಯಕೀಯ ಶಿಕ್ಷಣ ಪಡೆದಿದ್ದರೆ ಮರವಂತೆಯ ಎಸ್. ಜನಾರ್ದನ ಯು. ವಸಂತಕುಮಾರಿ ದಂಪತಿಯ ಪುತ್ರ ಯೋಗೀಂದ್ರ, ಮರವಂತೆ ಮತ್ತು ನಾವುಂದದಲ್ಲಿ ಆರಂಭಿಕ ಶಿಕ್ಷಣ, ಬೆಂಗಳೂರಿನಲ್ಲಿ ಇಂಜಿನಿಯರಿಂಗ್ ಪದವಿ ಪಡೆದರು. ಬಾಲ್ಯದಿಂದಲೇ ಯಕ್ಷಗಾನದ ಆಸಕ್ತಿ ಬೆಳೆಸಿಕೊಂಡಿದ್ದ ಉಭಯರು ಆ ಕಲೆಯಲ್ಲಿ ಪರಿಣತರಿಂದ ತರಬೇತಿ ಪಡೆದು ಅದನ್ನು ತಮ್ಮೊಂದಿಗೆ ವಿದೇಶಕ್ಕೆ ಒಯ್ದರು. ಅಲ್ಲಿ ತಮ್ಮ ಬಿಡುವಿನಲ್ಲಿ ಭಾರತೀಯರು ಹಾಗೂ ಅಲ್ಲಿನವರು ನಡೆಸುವ ಕಾರ್ಯಕ್ರಮಗಳಲ್ಲಿ ಯಕ್ಷರಂಜನೆ ನೀಡುತ್ತಿದ್ದಾರೆ. ಶಿಕ್ಷಣ ಸಂಸ್ಥೆಗಳಲ್ಲೂ ಪ್ರಾತ್ಯಕ್ಷಿಕೆ ನೀಡುತ್ತಿದ್ದಾರೆ. ಸ್ವಾತಂತ್ರ್ಯೋತ್ಸವದ ಅವರ ಪ್ರದರ್ಶನದಿಂದ ಪ್ರಭಾವಿತವಾದ ಎನ್‌ಡಿಟಿವಿ ಅಂದು ನಡೆಸಿದ್ದ ಅವರಿಬ್ಬರ ಸಂದರ್ಶನವನ್ನು ಇದೇ ಅಕ್ಟೋಬರ್ 23ರಂದು ಪ್ರಸಾರ ಮಾಡಿದೆ.
Read this
► ಲಂಡನ್’ನಲ್ಲಿ ನಡೆದ ಸ್ವಾತಂತ್ರ್ಯೋತ್ಸವ ಕಾರ್ಯಕ್ರಮದಲ್ಲಿ ಯಕ್ಷಗಾನದ ರಂಗು – http://kundapraa.com/?p=16953