ಕುಂದಾಪುರದಲ್ಲಿ ಕನ್ನಡ ರಾಜ್ಯೋತ್ಸವ ದಿನಾಚರಣೆ
ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಕನ್ನಡಿಗರು ತಂಬಾ ಭಾವೈಖ್ಯತೆ ಉಳ್ಳವರಾಗಿದ್ದು, ದೇಶದಲ್ಲಷ್ಟೇ ಅಲ್ಲದೆ ವಿದೇಶದಲ್ಲಿ ಕನ್ನಡಿಗರು ಭಾವನಾತ್ಮಕ ಬೆಸುಗೆ ಮೂಲಕ ಕನ್ನಡದ ಕಂಪು ವಿಸ್ತರಿಸಿದ್ದು, ಪ್ರತಿಭಾವಂತರು ಎನ್ನುವ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಹಲವಾರು ಮಹನೀಯರ ಹೋರಾಟ ಫಲ ಮೈಸೂರು, ಕರ್ನಾಟಕ ರಾಜ್ಯವಾಗಿ ಮರು ನಾಮಕರಣ ಗೊಂಡಿತು. ಹಲವಾರು ಕ್ಷೇತ್ರದಲ್ಲಿ ರಾಜ್ಯ ಪ್ರಗತಿ ಕಂಡಿದ್ದರೂ, ಇನ್ನಷ್ಟು ಪ್ರಗತಿ ಸಾಧಿಸಲು ಕನ್ನಡಿಗರು ಕೈಜೋಡಿಸಬೇಕಿದೆ ಎಂದು ಕುಂದಾಪುರ ಉಪವಿಭಾಗಾಧಿಕಾರಿ ಅಶ್ವಥಿ ಎಸ್ ಹೇಳಿದರು.
ಕುಂದಾಪುರ ತಾಲೂಕು ಪಂಚಾಯತ್, ತಾಲೂಕು ಆಡಳಿತ ಹಾಗೂ ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ಆಶ್ರಯದಲ್ಲಿ ಕುಂದಾಪುರ ಗಾಂಧಿ ಮೈದಾನದಲ್ಲಿ ಮಂಗಳವಾರ ನಡೆದ ಕನ್ನಡ ರಾಜ್ಯೋತ್ಸವ ದಿನಾಚರಣೆಯಲ್ಲಿ ದ್ವಜಾರೋಹಣ ಮತ್ತು ಗೌರವ ವಂದನೆ ಸ್ವೀಕರಿಸಿ ಮಾತನಾಡುತ್ತಿದ್ದರು.
ಎಂಟು ಜನ ಕನ್ನಡ ಸಾಹಿತಿಗಳು ಜ್ಞಾನ ಪೀಠ ಪ್ರಶಸ್ತಿ ಪಡೆಯುವ ಮೂಲಕ ಭಾಷೆ ಹಾಗೂ ಸಾಹಿತ್ಯ ಹಿರಿಮೆ ಎತ್ತಿ ಹಿಡಿದು ಭಾಷೆ ಶ್ರೀಮಂತ ಗೊಳಿಸಿದ್ದು, ರಾಜ್ಯ ಸರಕಾರ ಕೂಡಾ ಭಾಷಾ ಅಭಿವೃದ್ಧಿಯ ದೃಷ್ಟಿಯಲ್ಲಿ ಕನ್ನಡ ಭಾಷೆಯ ಆಡಳಿತ ಭಾಷೆಯನ್ನಾಗಿ ತರುವಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡಲಾಗುತ್ತಿದೆ. ಪ್ರತಿಯೊಬ್ಬ ಕನ್ನಡಿಗರು ನಾಡು ಹಾಗೂ ದೇಶ ಪ್ರೇಮದ ಮೂಲಕ ಈ ನಾಡಿನ ಅಭಿವೃದ್ಧಿಗೆ ಸಮಯ ಮೀಸಲಿಟ್ಟು ಹೆಚ್ಚಿನ ಅಭಿವೃದ್ಧಿಗೆ ಶ್ರಮಿಸೋಣ ಎಂದರು. ಕರ್ನಾಟಕ ಸಾಂಸ್ಕೃತಿವಾಗಿ ಇನ್ನೂ ಶ್ರೀಮಂತವಾಗಿಲಿ ಎಂದು ಆಶಿಸಿದ ಅವರು, ಕರ್ನಾಕಟ ಉದ್ಯಮ, ಶೈಕ್ಷಣಿಕ, ಆರೋಗ್ಯ,ಕೈಗಾರಿಕಾ ಕ್ಷೇತ್ರದಲ್ಲಿ ಬಹಳಷ್ಟು ಪ್ರಗತಿ ಸಾಧಿಸಿದೆ. ಎಲ್ಲಾ ಕ್ಷೇತ್ರದಲ್ಲೂ ಇನ್ನಷ್ಟು ಸಾಧನೆ ಮಾಡುವ ಜವಾಬ್ದಾರಿ ಎಲ್ಲಾ ಕನ್ನಡಿಗರ ಮೇಲಿದೆ ಎಂದು ತಿಳಿಸಿದರು.
ಕುಂದಾಪುರ ತಾಲೂಕು ಪಂಚಾಯತ್ ಅಧ್ಯಕ್ಷೆ ಜಯಶ್ರೀ ಸುಧಾಕರ ಮೊಗವೀರ ಅಧ್ಯಕ್ಷತೆ ವಹಿಸಿದ್ದರು. ಕುಂದಾಪುರ ಪುರಸಭೆ ಅಧ್ಯಕ್ಷೆ ವಸಂತ ಮೋಹನ್ ಸಾರಂಗ, ಉಪಾಧ್ಯಕ್ಷ ರಾಜೇಶ್ ಕಾವೇರಿ, ರಾಷ್ಟ್ರೀಯ ಹಬ್ಬಗಳ ದಿನಾಚರಣೆ ಸಮಿತಿ ಅಧ್ಯಕ್ಷ ಜಿ.ಎಂ.ಬೋರ್ಕರ್, ಡಿಎಸ್ಪಿ ಪ್ರವೀಣ್ ಎಚ್.ನಾಯ್ಕ್, ಕುಂದಾಪುರ ವೃತ್ತ ನಿರೀಕ್ಷಕ ಮಂಜಪ್ಪ ಡಿ.ಎಸ್. ಕುಂದಾಪುರ ತಾಪಂ ಸದಸ್ಯೆ ರೂಪಾ ಪೈ, ಪುರಸಭೆ ಸದಸ್ಯರಾದ ಪುಷ್ಪಾ ಶೇಟ್, ಶಕುಂತಲಾ ಗುಲ್ವಾಡಿ, ನಾಮ ನಿರ್ದೇಶಕ ಸದಸ್ಯರಾದ ಶ್ರೀರಾಮ ಪುತ್ರನ್, ದೇವಕಿ ಸಣ್ಣಯ್ಯ, ತಾಪಂ ಇಒ ಚೆನ್ನಪ್ಪ ಮೋಯ್ಲಿ ಇದ್ದರು. ಕುಂದಾಪುರ ಅಕ್ಷರ ದಾಸೋಹ ಅಧಿಕಾರಿ ಸೀತಾರಾಮ ಶೆಟ್ಟಿ ಸ್ವಾಗತಿಸಿದರು. ಶಿಕ್ಷಕ ಚಂದ್ರಶೇಖರ ಬೀಜಾಡಿ ನಿರೂಪಿಸಿದರು. ಕುಂದಾಪುರ ಕ್ಷೇತ್ರ ಶಿಕ್ಷಣಾಧಿಕಾರಿ ಶೋಭಾ ಎಸ್.ಶೆಟ್ಟಿ ವಂದಿಸಿದರು. ಕುಂದಾಪುರ ಪಿಎಸ್ಸೈ ನಾಸೀರ್ ಹುಸೇನ್ ನೇತೃತ್ವದಲ್ಲಿ ಪೊಲೀಸ್, ಗೃಹ ರಕ್ಷಕ ದಳ, ಸ್ಕೌಟ್ ಗೈಡ್ಸ್, ಸೇವಾದಳ ತಂಡಗಳ ಆಕರ್ಷಕ ಪಥ ಸಂಚಲನ ನಡೆಯಿತು. ವಿವಿಧ ಶಾಲಾ ಮಕ್ಕಳಿಂದ ಸಾಂಸ್ಕೃತಿಕ ಕಾರ‍್ಯಕ್ರಮ ಜರುಗಿತು.