ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಹಿರಿಯ ನ್ಯಾಯವಾದಿ, ಕರ್ನಾಟಕ ಪ್ರದೇಶ ಕಾಂಗ್ರೇಸ್ ಸಮಿತಿ ಕಾರ್ಯದರ್ಶಿ ಶ್ಯಾಮಲ ಭಂಡಾರಿ ರಾಜ್ಯ ಮಹಿಳಾ ಆಯೋಗದ ತನ್ನ ಸದಸ್ಯೆ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.
ಮಹಿಳಾ ಆಯೋಗದ ಅಧ್ಯಕ್ಷೆ ಮಂಜುಳಾ ಮಾನಸರವರ ಅಧಿಕಾರಾವಧಿ ಇನ್ನೂ ೮ ತಿಂಗಳು ಬಾಕಿ ಇರುವ ಸಂದರ್ಭದಲ್ಲಿ ಸಕಾರಣವಿಲ್ಲದೆ ಏಕಾಏಕಿ ರಾಜೀನಾಮೆ ಪಡೆದಿರುವುದನ್ನು ಪ್ರತಿಭಟಿಸಿ ಈ ಘಟನೆಯಿಂದ ಮನನೊಂದು ತಾನು ತನ್ನ ಆಯೋಗದ ಸದಸ್ಯೆ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿರುವುದಾಗಿ ಭಂಡಾರಿ ಹೇಳಿಕೆಯಲ್ಲಿ ತಿಳಿಸಿದ್ದಾರೆ. ಮಹಿಳೆಯರ ಮೇಲಾಗುವ ದೌರ್ಜನ್ಯ ತಡೆಗಟ್ಟುವುದು, ಅವರಿಗೆ ರಕ್ಷಣೆ ಒದಗಿಸುವುದು, ಸಮಾನತೆ ಕಲ್ಪಿಸುವುದು ಮತ್ತು ಅವರು ಗೌರವಯುತವಾಗಿ ಬದುಕುವ ಸನ್ನಿವೇಶ ನಿರ್ಮಿಸುವುದು ಮಹಿಳಾ ಆಯೋಗದ ಕಾರ್ಯವಾಗಿರುತ್ತದೆ. ಆದರೆ ಮಹಿಳಾ ಆಯೋಗದೊಳಗಿನ ಪ್ರಸಕ್ತ ಸನ್ನಿವೇಶ ನೋವು ತಂದಿದೆ ಎಂದು ಅವರು ವಿವರಿಸಿದ್ದಾರೆ.
ಮಹಿಳಾ ಆಯೋಗದ ಸದಸ್ಯೆಯಾಗಿ ನೇಮಕಗೊಂಡ ನಂತರ ಅಂದರೆ ಕಳೆದ ೨ ವರ್ಷಗಳಿಂದ ಸಕ್ರೀಯವಾಗಿ ಆಯೋಗದ ಕೆಲಸಗಳಲ್ಲಿ ತೊಡಗಿಸಿಕೊಂಡಿರುವ ತಾನು ಅದೇ ಸಮಯದಲ್ಲಿ ಕಾಂಗ್ರೆಸ್ ಪಕ್ಷದ ರಾಜ್ಯ ಕಾರ್ಯದರ್ಶಿಯಾಗಿದ್ದರು ಕೂಡ ಆಯೋಗದ ಸದಸ್ಯರಾದವರು ರಾಜಕೀಯದಲ್ಲಿ ತೊಡಗಿಸಿಕೊಳ್ಳುವಂತಿಲ್ಲ ಎಂಬ ನಿಯಮಕ್ಕೆ ಅನುಗುಣವಾಗಿ ಸಕ್ರೀಯ ರಾಜಕಾರಣದಿಂದ ದೂರ ಉಳಿದಿರುವುದಾಗಿ ಹೇಳಿದ್ದಾರೆ.