ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು: ಇಂದಿನ ವ್ಯಾವಹಾರಿಕಾ ಜಗತ್ತಿನಲ್ಲಿ ಸೇವಾ ಮನೋಭಾವ ಕ್ಷೀಣಿಸುತ್ತಿದೆ. ಸಮಾಜ ಸೇವೆ ಕುರಿತು ವಿಶಾಲ ಮನೋಭಾವನೆ ಇಟ್ಟುಕೊಂಡು ಸಾಮಾಜಿಕ, ಶೈಕ್ಷಣಿಕ ಅರಿವು ರೂಢಿಸಿಕೊಂಡು ಮುನ್ನಡೆದಾಗ ಅಂತಹ ಸೇವೆ ಸಾರ್ಥಕ ಎನ್ನಿಸಿಕೊಳ್ಳುತ್ತದೆ ಎಂದು ಜಿಪಂ ಮಾಜಿ ಅಧ್ಯಕ್ಷ ಎಸ್. ರಾಜು ಪೂಜಾರಿ ಹೇಳಿದರು.
ಬಿಜೂರು ವಜ್ರದುಂಬಿ ಗೆಳೆಯರ ಬಳಗ ಇವರ ಆಶ್ರಯದಲ್ಲಿ ಉಪ್ಪುಂದ ಶ್ರೀ ದುರ್ಗಾಪರಮೇಶ್ವರಿ ಸಭಾಭವನದಲ್ಲಿ ದ್ವೀತಿಯ ಬಾರಿಗೆ ಕೆ.ಎಂ.ಸಿ. ಮಣಿಪಾಲ ಚರ್ಮ ರೋಗ ತಜ್ಞರಿಂದ ನಡೆದ ಉಚಿತ ಚರ್ಮರೋಗ ಚಿಕಿತ್ಸಾ ಶಿಬಿರ ಹಾಗೂ ಹೆಗ್ಡೆ ಆಂಡ್ ಹೆಗ್ಡೆ ಕಂಪೆನಿಯವರು ಕೊಡಮಾಡಿದ ಉಚಿತ ಔಷಧ ವಿತರಣಾ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ವೈದ್ಯ ವೃತ್ತಿಯಲ್ಲಿ ಸಮಾಜ ಸೇವೆ ಕುರಿತು ಸೇವಾ ಮನೋಭಾವನೆ ಇಟ್ಟುಕೊಂಡು ಸೇವೆಗೈಯುವವರೇ ಯಶಸ್ವಿ ವೈದ್ಯರೇನಿಸಿಕೊಳ್ಳುತ್ತಾರೆ, ತಮ್ಮ ತಮ್ಮ ಬದುಕನ್ನು ರೂಪಿಕೊಳ್ಳಲು ಮಾತ್ರ ಹವಣಿಸುತ್ತಿರುವ ಈ ದಿನಗಳಲ್ಲಿ ಗ್ರಾಮೀಣ ಭಾಗದವರಿಗೆ ತಜ್ಞ ವೈದ್ಯರಿಂದ ಆರೋಗ್ಯ ಸೇವೆಯನ್ನು ಒದಗಿಸುವ ಮೂಲಕ ಬಡ ವರ್ಗದ ಜನ ಸಾಮಾನ್ಯರಿಗೆ ಆರೋಗ್ಯ ಸೇವೆ ಒದಗಿಸುತ್ತಿರುವ ವಜ್ರದುಂಬಿ ಗೆಳೆಯರ ಬಳಗದವರ ಸಮಾಜ ಸೇವೆಯೂ ಶ್ಲಾಘನೀಯ ಎಂದರು.
ಸಂಘದ ಅಧ್ಯಕ್ಷ ರಾಘವೇಂದ್ರ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಜಿಪಂ ಸದಸ್ಯೆ ಗೌರಿ ದೇವಾಡಿಗ, ತಾಪಂ ಸದಸ್ಯ ಜಗದೀಶ ದೇವಾಡಿಗ, ಕೆಎಂಸಿ. ವೈದ್ಯರಾದ ಡಾ. ಸುಧೀರ್ ನಾಯಕ್, ಡಾ. ಸತೀಶ್ ಪೈ, ಡಾ. ಭಾರತಿ ಸುಬ್ರಹ್ಮಣ್ಯ, ಡಾ. ರವೀಶ್, ಡಾ. ಕುಮುದಿನಿ, ಡಾ. ಅನುರಾಧ, ಹೆಗ್ಡೆ ಆಂಡ್ ಹೆಗ್ಡೆ ಸಂಸ್ಥೆಯ ಸುರೇಂದ್ರ ಖಾರ್ವಿ, ಸಂತೋಷ್ ಒಡೆಯರ್, ಕಾರ್ತಿಕ್ ಪಂಡಿತ್, ಪ್ರಮೋದ್ ಆಚಾರ್ಯ, ಯಕ್ಷಗಾನ ಕಲಾವಿದ ತೀರ್ಥಹಳ್ಳಿ ಗೋಪಾಲ ಆಚಾರ್ಯ ಉಪಸ್ಥಿತರಿದ್ದರು. ಸತೀಶ ದೇವಾಡಿಗ ಸ್ವಾಗತಿಸಿ, ಉಪ್ಪುಂದ ಸುಬ್ರಹ್ಮಣ್ಯ ಗಾಣಿಗ ನಿರೂಪಿಸಿದರು, ಸುಧಾಕರ ವಂದಿಸಿದರು.