ಕುಂದಾಪ್ರ ಡಾಟ್ ಕಾಂ ಸುದ್ದಿ.
ಮಂಗಳೂರು: ಮೂಡಬಿದಿರೆ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ವತಿಯಿಂದ ನಡೆಯುವ ಕನ್ನಡ ನಾಡು-ನುಡಿ-ಸಂಸ್ಕೃತಿಯ ಸಮ್ಮೇಳನ ಆಳ್ವಾಸ್ ನುಡಿಸಿರಿ-2016 ಈ ಬಾರಿ ನ. 18ರಿಂದ 20ರ ವರೆಗೆ ಮೂಡಬಿದಿರೆ ವಿದ್ಯಾಗಿರಿಯ ಸುಂದರಿ ಆನಂದ ಆಳ್ವ ಆವರಣದಲ್ಲಿರುವ ರತ್ನಾಕರವರ್ಣಿ ವೇದಿಕೆಯಲ್ಲಿ ವಿಜೃಂಭಣೆಯಿಂದ ಜರಗಲಿದೆ ಎಂದು ಪ್ರತಿಷ್ಠಾನದ ಅಧ್ಯಕ್ಷ ಡಾ| ಎಂ. ಮೋಹನ ಆಳ್ವ ತಿಳಿಸಿದರು.
ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಕನ್ನಡ ಬಾಂಧವರ ಸಹಕಾರದೊಂದಿಗೆ ಕಳೆದ 12 ವರ್ಷ ಗಳಿಂದ ಯಶಸ್ವಿಯಾಗಿ ನಡೆದ ನುಡಿಸಿರಿ ಈ ಬಾರಿ 13ನೇ ವರ್ಷಕ್ಕೆ ಕಾಲಿಟ್ಟಿದೆ. ಈ ಬಾರಿ ಕರ್ನಾಟಕ-ನಾಳೆಗಳ ನಿರ್ಮಾಣ ಎಂಬ ಪರಿಕಲ್ಪನೆಯೊಂದಿಗೆ ಸಮ್ಮೇಳನ ಆಯೋಜಿಸಲ್ಪಟ್ಟಿದೆ. ಹಿರಿಯ ವಿಮರ್ಶಕಿ ಡಾ| ಬಿ.ಎನ್. ಸುಮಿತ್ರಾ ಬಾಯಿ ಸಮ್ಮೇಳನದ ಸರ್ವಾಧ್ಯಕ್ಷೆಯಾಗಿದ್ದು, ಕವಿ, ಕತೆಗಾರ ಡಾ| ಜಯಂತ ಗೌರೀಶ ಕಾಯ್ಕಿಣಿ ಉದ್ಘಾಟಿಸಲಿದ್ದಾರೆ ಎಂದರು.
ನ. 18ರಂದು ಬೆಳಗ್ಗೆ 8.30ಕ್ಕೆ ಸಾಂಸ್ಕೃತಿಕ ಮೆರವಣಿಗೆ ನಡೆಯಲಿದ್ದು, 9.30ಕ್ಕೆ ಉದ್ಘಾಟನೆ ಜರಗಲಿದೆ. ಉದ್ಘಾಟನ ಸಮಾರಂಭದಲ್ಲಿ ಅತಿಥಿಗಳಾಗಿ ಡಾ| ಮನು ಬಳಿಗಾರ್, ಡಾ| ಕೆ. ಚಿನ್ನಪ್ಪ ಗೌಡ, ಶಾಸಕ ಕೆ. ಅಭಯಚಂದ್ರ ಜೈನ್, ಮಾಜಿ ಸಚಿವ ಕೆ. ಅಮರನಾಥ ಶೆಟ್ಟಿ, ವಿಧಾನ ಪರಿಷತ್ ಸದಸ್ಯ ಕ್ಯಾ| ಗಣೇಶ್ ಕಾರ್ಣಿಕ್ ಪಾಲ್ಗೊಳ್ಳಲಿದ್ದಾರೆ.
ಗೋಷ್ಠಿಗಳು, ಸಾಹಿತ್ಯ ಕಾರ್ಯಕ್ರಮ ಕರ್ನಾಟಕ: ನಾಳೆಗಳ ನಿರ್ಮಾಣ ಎನ್ನುವ ಮುಖ್ಯ ಪರಿಕಲ್ಪನೆಗೆ ಪೂರಕವಾಗಿ ಸೋದರ ಭಾಷೆಗಳು: ನಾಳೆಗಳ ನಿರ್ಮಾಣ, ಧರ್ಮ ಮತ್ತು ರಾಜಕಾರಣ: ನಾಳೆಗಳ ನಿರ್ಮಾಣ, ಕಲೆ ಮತ್ತು ಮಾಧ್ಯಮ: ನಾಳೆಗಳ ನಿರ್ಮಾಣ ಹಾಗೂ ಕೃಷಿ ಮತ್ತು ಪರಿಸರ: ನಾಳೆಗಳ ನಿರ್ಮಾಣವೆಂಬ 4 ಪ್ರಧಾನಗೋಷ್ಠಿಗಳು ನಡೆಯಲಿವೆ. ಇದೇ ಮುಖ್ಯ ಪರಿಕಲ್ಪನೆ ಆಧಾರವಾಗಿ 6 ವಿಶೇಷೋಪನ್ಯಾಸಗಳು, 9 ಕವಿಸಮಯ-ಕವಿನಮನಗಳು ನಡೆಯಲಿವೆ.
ನಮ್ಮನ್ನಗಲಿದ ಹಿರಿಯ ಸಾಹಿತಿ ಡಾ| ಸಾ.ಶಿ. ಮರುಳಯ್ಯ ಅವರನ್ನು ಸ್ಮರಿಸುವ ಸಂಸ್ಮರಣೆ, ಕನ್ನಡದ ಆಸ್ತಿ ಮಾಸ್ತಿಯವರ ನೆನಪು, ಹಿರಿಯರ ನೆನಪು ಹಾಗೂ 100 ವರ್ಷಗಳ ನೆನಪಿನಲ್ಲಿ ಡಾ| ದೇ. ಜವರೇಗೌಡ ಹಾಗೂ ಡಿ. ದೇವರಾಜ ಅರಸು ಅವರನ್ನು ಶತಮಾನದ ನೆನಪುನಲ್ಲಿ ಸ್ಮರಿಸಲಾಗುತ್ತದೆ.
ಹಿರಿಯ ಕಲಾವಿದರಾದ ರಂಗಭೂಮಿಯ ಡಾ| ಬಿ. ಜಯಶ್ರೀ ಹಾಗೂ ಯಕ್ಷಗಾನದ ಜಬ್ಟಾರ್ ಸಮೊ ಅವರು ನಮ್ಮ ಕತೆ ನಿಮ್ಮ ಜತೆ ಎನ್ನುವ ಪರಿಕಲ್ಪನೆಯಲ್ಲಿ ತಮ್ಮ ಬದುಕಿನ ಸುಖ-ಕಷ್ಟ, ನೋವು-ನಲಿವು ಹಾಗೂ ರಸ ನಿಮಿಷಗಳನ್ನು ತಮ್ಮದೇ ಮಾತಿನಲ್ಲಿ ಕಟ್ಟಿಕೊಡಲಿದ್ದಾರೆ. ಕವಿನಮನದ ಕವನಗಳಿಗೆ ಎಂ.ಎಸ್. ಗಿರಿಧರ್ ಅವರ ಸಂಗೀತ ನಿರ್ದೇಶನದಲ್ಲಿ ಕನ್ನಡದ ಖ್ಯಾತ ಗಾಯಕರು ಧ್ವನಿಯಾಗಲಿದ್ದಾರೆ. ಈ ಕವನಗಳಿಗೆ ಬಾಗೂರು ಮಾರ್ಕಾಂಡೇಯ ಕುಂಚದ ಮೂಲಕ ಕಲ್ಪನೆಯ ಚಿತ್ರ ರೂಪಿಸಲಿದ್ದಾರೆ.
13 ಸಾಧಕರಿಗೆ ನುಡಿಸಿರಿ ಪ್ರಶಸ್ತಿ
ನ. 20ರ ಸಂಜೆ 4ಕ್ಕೆ ಆಳ್ವಾಸ್ ನುಡಿಸಿರಿ ಸಮ್ಮೇಳನದ ಸಮಾರೋಪ ಸಮಾರಂಭದಲ್ಲಿ ಕನ್ನಡ ನಾಡು-ನುಡಿ-ಸಂಸ್ಕೃತಿಗಾಗಿ ಶ್ರಮಿಸಿದ 13 ಮಂದಿ ಸಾಧಕರನ್ನು ಆಳ್ವಾಸ್ ನುಡಿಸಿರಿ ಪ್ರಶಸ್ತಿ ನೀಡಿ ಗೌರವಿಸಲಾಗುವುದು. ಪ್ರಶಸ್ತಿಯು 25,000 ರೂ. ನಗದು, ಪ್ರಶಸ್ತಿ ಪತ್ರ ಹಾಗೂ ಸ್ಮರಣಿಕೆಗಳನ್ನು ಒಳಗೊಂಡಿರುತ್ತದೆ.
ಪ್ರೊ| ಗಿರಡ್ಡಿ ಗೋವಿಂದರಾಜ (ಸಾಹಿತ್ಯ), ಸುಬ್ರಾಯ ಚೊಕ್ಕಾಡಿ (ಸಾಹಿತ್ಯ), ಡಾ| ಚೆನ್ನಣ್ಣ ವಾಲೀಕಾರ (ಸಾಹಿತ್ಯ), ಡಾ| ಕೆ.ಆರ್. ಸಂಧ್ಯಾ ರೆಡ್ಡಿ (ಸಂಶೋಧನೆ), ಜಿ.ಎನ್. ರಂಗನಾಥ ರಾವ್ (ಮಾಧ್ಯಮ), ಕೆ.ವಿ. ಅಕ್ಷರ (ರಂಗಭೂಮಿ), ಹರಿಣಿ (ಸಿನೆಮಾ), ಶ್ರೀನಿವಾಸ ಜಿ. ಕಪ್ಪಣ್ಣ (ಸಂಘಟನೆ), ಶೀನಪ್ಪ ರೈ ಸಂಪಾಜೆ (ಯಕ್ಷಗಾನ), ಜಬ್ಟಾರ್ ಸಮೊ (ಯಕ್ಷಗಾನ), ಎಚ್.ಆರ್. ಲೀಲಾವತಿ (ಸುಗಮ ಸಂಗೀತ), ಡಾ| ಚಂದ್ರಶೇಖರ ಚೌಟ (ಕೃಷಿ), ಡಾ| ಜಿ. ಜ್ಞಾನಾನಂದ (ಶಿಲ್ಪ) ಅವರಿಗೆ ನುಡಿಸಿರಿ ಪ್ರಶಸ್ತಿ ನೀಡಲಾಗುತ್ತದೆ ಎಂದರು.
ಸಾಂಸ್ಕೃತಿಕ ಮೆರವಣಿಗೆ
ನ. 18ರಂದು ಬೆಳಗ್ಗೆ 8.30ಕ್ಕೆ ಸಾಂಸ್ಕೃತಿಕ ಮೆರವಣಿಗೆ ನಡೆಯಲಿದ್ದು, ರಾಜ್ಯದ ವಿವಿಧ ಸಂಸ್ಕೃತಿಗಳನ್ನು ಬಿಂಬಿಸುವ 100ಕ್ಕಿಂತಲೂ ಹೆಚ್ಚಿನ ಸಾಂಸ್ಕೃತಿಕ ತಂಡಗಳ ಭವ್ಯ ಮೆರವಣಿಗೆ ನಡೆಯಲಿದೆ. ರಾಜ್ಯದ 30 ಜಿಲ್ಲೆಗಳಿಂದಲೂ ಪ್ರತಿನಿಧಿಗಳು ಈಗಾಗಲೇ ಹೆಸರು ನೋಂದಾಯಿಸಿದ್ದಾರೆ. 35,000 ಪ್ರತಿನಿಧಿಗಳಿಗೆ ವಸತಿ, ಊಟೋಪಚಾರದ ವ್ಯವಸ್ಥೆ ಮಾಡಲಾಗಿದೆ. ಪ್ರತಿದಿನ ಲಕ್ಷಕ್ಕಿಂತಲೂ ಅಧಿಕ ಮಂದಿ ಭಾಗವಹಿಸುವ ನಿರೀಕ್ಷೆ ಇದೆ. ವಿದ್ಯಾರ್ಥಿ ಪ್ರತಿನಿಧಿಗಳು ಉಚಿತವಾಗಿ ಭಾಗವಹಿಸಬಹುದಾಗಿದ್ದು, ಈಗಾಗಲೇ 5,000ಕ್ಕೂ ಅಧಿಕ ಮಂದಿ ಹೆಸರು ನೋಂದಾಯಿಸಿದ್ದಾರೆ ಎಂದು ಡಾ| ಎಂ. ಮೋಹನ ಆಳ್ವ ವಿವರಿಸಿದರು.
10 ವೇದಿಕೆಗಳಲ್ಲಿ…
ಸಮ್ಮೇಳನದ 3 ದಿನಗಳಲ್ಲೂ ಸಂಜೆ 10 ವೇದಿಕೆಗಳಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ. ನ. 17ರಂದು ವಿದ್ಯಾರ್ಥಿಗಳಿಗಾಗಿ ವಿದ್ಯಾರ್ಥಿ ಸಿರಿ, ನ. 10ರಿಂದ 13ರ ವರೆಗೆ ರಾಜ್ಯಮಟ್ಟದ ಚಿತ್ರಕಲಾ ಶಿಬಿರ ಆಳ್ವಾಸ್ ಚಿತ್ರಸಿರಿ, ರಾಷ್ಟ್ರಮಟ್ಟದ ಛಾಯಾಚಿತ್ರ ಸ್ಪರ್ಧೆ, ಪ್ರದರ್ಶನಕ್ಕಾಗಿ ಆಳ್ವಾಸ್ ಛಾಯಾಚಿತ್ರ ಸಿರಿ, ನರ್ಸರಿ ಮತ್ತು ಕೃಷಿ ಪರಿಕರ ಪ್ರದರ್ಶನ, ಮಾರಾಟದ ಆಳ್ವಾಸ್ ಕೃಷಿಸಿರಿ, ರಂಗಭೂಮಿಗೆ ಸಂಬಂಧಿಸಿದ ಆಳ್ವಾಸ್ ರಂಗಸಿರಿ, ಯಕ್ಷಗಾನಕ್ಕೆ ಸಂಬಂಧಿಸಿದ ಆಳ್ವಾಸ್ ಯಕ್ಷಸಿರಿ, ಕರ್ನಾಟಕದ ದೇಹದಾಡ್ಯì ಪಟುಗಳ ಆಳ್ವಾಸ್ ದೇಹದಾಡ್ಯìಸಿರಿ, ಸದಭಿರುಚಿಯ ಕನ್ನಡ ಸಿನೆಮಾಗಳ ಪ್ರದರ್ಶನಕ್ಕಾಗಿ ಆಳ್ವಾಸ್ ಸಿನಿಸಿರಿ, ಕಿಶೋರ-ಕಿಶೋರಿಯರ ಕುಸ್ತಿ ಪ್ರದರ್ಶನಕ್ಕಾಗಿ ಆಳ್ವಾಸ್ ಕುಸ್ತಿಸಿರಿಗಳನ್ನು ಏರ್ಪಾಟು ಮಾಡಲಾಗಿದೆ.
ವಿಶೇಷ ಆಕರ್ಷಣೆ:
ವಿವಿಧ ಜಾತಿಯ ಫಲ ಹಾಗೂ ಪುಷ್ಪಗಳ ಪ್ರದರ್ಶನ, ವಿಧ ವಿಧದ ಆಹಾರ ಮಳಿಗೆ ಮತ್ತು ಮಾರಾಟ, 60ಕ್ಕೂ ಮಿಕ್ಕಿ ಬೃಹತ್ ಗಾತ್ರದ ಮತ್ಸಾಲಯ (ಅಕ್ವೇರಿಯಂ) ಹಾಗೂ ಮತ್ಸ é ಕಾರಂಜಿಯ ವೈಭವ, ರಾಜ್ಯ ಮಟ್ಟದ ಸ್ಪರ್ಧೆಗಾಗಿ ರಾಜ್ಯದ ವಿವಿಧ ಭಾಗಗಳಿಂದ ಆಯ್ದ 20 ವಿವಿಧ ತಳಿಗಳ ಶ್ವಾನಗಳ ಪ್ರದರ್ಶನ, ವಿವಿಧ ಗಾಳಿಪಟ ಉತ್ಸವ, ಕೋತಿ ರಾಮನ ಸಾಹಸ ಪ್ರದರ್ಶನ, 300ಕ್ಕಿಂತಲೂ ಹೆಚ್ಚು ಪುಸ್ತಕ ಮಳಿಗೆಗಳು ನುಡಿಸಿರಿಯ ವಿಶೇಷ ಆಕರ್ಷಣೆಯಾಗಿರುತ್ತದೆ.
ಪತ್ರಿಕಾಗೋಷ್ಠಿಯಲ್ಲಿ ನುಡಿಸಿರಿಯ ಉಪಾಧ್ಯಕ್ಷರಾದ ಡಾ| ಸತ್ಯನಾರಾಯಣ ಮಲ್ಲಿಪಟ್ಣ, ಕೋಟಿಪ್ರಸಾದ್ ಆಳ್ವ, ಕಾರ್ಯದರ್ಶಿ ವೇಣುಗೋಪಾಲ ಶೆಟ್ಟಿ, ಪಿಆರ್‌ಒ ಡಾ| ಪದ್ಮನಾಭ ಶೆಣೈ ಉಪಸ್ಥಿತರಿದ್ದರು.