ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಇತರೆ ವಿಷಯಗಳಿಗೆ ನೀಡುವ ಪ್ರೋತ್ಸಾಹ ಕ್ರೀಡೆಗೆ ದೊರೆಯುತ್ತಿಲ್ಲ. ಕ್ರೀಡೆಗೆ ಹೆಚ್ಚಿನ ಪ್ರೋತ್ಸಾಹ ನೀಡುವ ಉದ್ದೇಶದಿಂದ ಹೊಸ ಕ್ರೀಡಾ ನೀತಿ ಜಾರಿಗೆ ತರುವ ಚಿಂತನೆಯಿದ್ದು, ಮುಂದಿನ ವಿಧಾನ ಸಭಾ ಅಧಿವೇಶನದಲ್ಲಿ ಹೊಸ ಕ್ರೀಡೆ ನೀತಿ ರೂಪಿಸುವ ಬಗ್ಗೆ ಗಮನ ಸೆಳೆಯಲಾಗುತ್ತದೆ ಎಂದು ವಿಧಾನ ಪರಿಷತ್ ಸದಸ್ಯ ಐವನ್ ಡಿಸೋಜಾ ಹೇಳಿದರು.
ಉಡುಪಿ ಜಿಲ್ಲಾ ಪದವಿಪೂರ್ವ ಶಿಕ್ಷಣ ಇಲಾಖೆ ಹಾಗೂ ಕುಂದಾಪುರ ಸೈಂಟ್ ಮೇರಿಸ್ ಸಂಯುಕ್ತ ಪದವಿಪೂರ್ವ ಕಾಲೇಜ್ ಆಶ್ರಯದಲ್ಲಿ ಕುಂದಾಪುರ ಗಾಂಧಿ ಮೈದಾನದಲ್ಲಿ ನಡೆದ ಪದವಿಪೂರ್ವ ಕಾಲೇಜು ವಿದ್ಯಾರ್ಥಿಗಳ ಜಿಲ್ಲಾ ಮಟ್ಟದ ’ಶೈನ್-೨೦೧೬’ ಕ್ರೀಡಾಕೂಟ ದ್ವಜಾರೋಹಣ ನೆರವೇರಿಸಿ, ಗೌರವ ವಂದನೆ ಸ್ವೀಕರಿಸಿ ಮಾತನಾಡುತ್ತಿದ್ದರು.
ಜಿಲ್ಲೆ, ರಾಜ್ಯ ಹಾಗೂ ರಾಷ್ಟ್ರಮಟ್ಟದಲ್ಲಿ ಪಾಲ್ಗೊಳ್ಳುವ ಕ್ರೀಡಾ ಪಟುಗಳಿಗೆ ಅನುಕೂಲ ದೃಷ್ಟಿಯಲ್ಲಿ ಹೊಸ ಕ್ರೀಡಾ ನೀತಿ ರೂಪಿಸಿ ಪ್ರೋತ್ಸಾಹ ನೀಡುವ ಉದ್ದೇಶ ಸರಕಾರಕ್ಕಿದ್ದು, ಕ್ರೀಡಾ ಕೂಟದಲ್ಲಿ ಭಾಗವಹಿಸಿದ ಕ್ರೀಡಾಳುಗಳಿಗೆ ಪ್ರೋತ್ಸಾಹ ಧನ ನೀಡುವ ಪ್ರಯತ್ನ ಸಾಗಿದೆ. ಅನುದಾನ ಕೂಡಾ ಹೆಚ್ಚಿಸುವ ಪ್ರಯತ್ನ ಮಾಡಲಾಗುತ್ತದೆ ಎಂದು ಹೇಳಿದರು.
ಕುಂದಾಪುರ ಪುರಸಭೆ ಉಪಾಧ್ಯಕ್ಷ ರಾಜೇಶ್ ಕಾವೇರಿ ಕ್ರೀಡಾ ಜ್ಯೋತಿ ಬೆಳಗಿಸಿ, ಅಧ್ಯಕ್ಷತೆ ವಹಿಸಿದ್ದರು. ಕುಂದಾಪುರ ಸೈಂಟ್ ಮೇರಿಸ್ ಸಮೂಹ ವಿದ್ಯಾಸಂಸ್ಥೆ ಸಂಚಾಲಕ ವಂ.ಫಾ.ಅನಿಲ್ ಡಿಸೋಜಾ ಪುರಮೆರವಣಿಗೆ ಉದ್ಘಾಟಿಸಿದರು. ಕಥೋಲಿಕ್ ಶಿಕ್ಷಣ ಮಂಡಳಿ ಕಾರ‍್ಯದರ್ಶಿ ವಂ.ಫಾ.ಲೋರೆನ್ಸ್ ಡಿಸೋಜಾ ಕಾರ‍್ಯಕ್ರಮ ಉದ್ಘಾಟಿಸಿ, ಆಶೀರ್ವಚಿಸಿದರು.
ಸೈಂಟ್ ಮೇರಿಸ್ ಸಮೂಹ ವಿದ್ಯಾ ಸಂಸ್ಥೆ ಸಂಚಾಲಕ ವಂ.ಫಾ. ಅನಿಲ್ ಡಿಸೋಜಾ, ಕ್ಷೇತ್ರ ಶಿಕ್ಷಣಾಧಿಕಾರಿ ಶೋಭಾ ಎಸ್.ಶೆಟ್ಟಿ, ಕುಂದಾಪುರ ಹೋಲಿ ರೋಜರಿ ಚೆರ್ಚ್ ಉಪಾಧ್ಯಕ್ಷ ಜೋನ್ಸನ್ ಡಿಅಲ್ಮೇಡಾ, ಮುಂಬೈ ಉದ್ಯಮಿ ವಾಲ್ಟರ್ ಬುತ್ತೆಲ್ಲೊ, ಪ್ರಾಂಶುಪಾಲ ಪ್ರವೀಣ್ ಅಮೃತ್ ಮಾರ್ಟಿಸ್, ಉಪಪ್ರಾಂಶುಪಾಲೆ ಮಂಜುಳಾ ನಾಯರ್, ದೈಹಿಕ ಶಿಕ್ಷಣ ಶಿಕ್ಷಕರಾದ ಶಾಂತಿರಾಣಿ ಬರೆಟ್ಟೋ, ರತ್ಮಾಕರ ಶೆಟ್ಟಿ, ಮಮತಾ ಶೆಟ್ಟಿ, ಉಡುಪಿ ಪ್ರಾಂಶುಪಾಲ ಸಂಘ ಅಧ್ಯಕ್ಷ ರಮೇಶ್, ಜಿಲ್ಲಾ ಕ್ರೀಡಾ ಸಂಯೋಜಕ ಎಸ್.ಶ್ರೀಧರ ಶೆಟ್ಟಿ, ಜಿಲ್ಲಾ ದೈಹಿಕ ಶಿಕ್ಷಣ ಉಪನ್ಯಾಸಕರ ಸಂಘ ಗೌರವಾಧ್ಯಕ್ಷ ವಸಂತ್ ಶೆಟ್ಟಿ, ದಾನಿ ಮಾಂತೋ ಫೆರ್ನಾಂಡಿಸ್ ಇದ್ದರು.
ಜಿಲ್ಲಾ ಉದವಿಪೂರ್ವ ಶಿಕ್ಷಣ ಇಲಾಖೆ ಉಪನಿರ್ದೇಶಕ ಆರ್.ಬಿ.ನಾಯ್ಕ್ ಸ್ವಾಗತಿಸಿದರು. ದೈಹಿಕ ಶಿಕ್ಷಣ ಶಿಕ್ಷಕರಾದ ಸತೀಶ್ ಶೆಟ್ಟಿ, ಪ್ರಕಾಶ್ ಶೆಟ್ಟಿ, ಗೋಪಾಲ ಶೆಟ್ಟಿ ನಿರೂಪಿಸಿದರು. ನಿತಿನ್ ಚಾಕೋ, ಶಿವರಾಜ್, ಸುಷ್ಮಾ ಬೆರೆಟ್ಟೋ, ಅಕ್ಷತಾ ಹಾಗೂ ಅಭಿಲಾಷಾ ಕ್ರೀಡಾ ಜ್ಯೋತಿ ತಂದರು. ಸುಷ್ಮಾ ಬೆರೆಟ್ಟೋ ಪ್ರತಿಜ್ಞಾ ವಿಧಿ ಬೋಧಿಸಿದರು. ಸೈಂಟ್ ಮೇರಿಸ್ ಶಾಲೆ ದೈಹಿಕ ಶಿಕ್ಷಕ ಚಂದ್ರಶೇಖರ ಬೀಜಾಡಿ ವಂದಿಸಿದರು.