ಮೂಡುಬಿದಿರೆ: `ಮಾಧ್ಯಮಗಳು ನಾಳೆಗಳನ್ನು ನಿರ್ಮಾಣ ಮಾಡುತ್ತಿವೆಯಾ ಅಥವಾ ನಿರ್ನಾಮ ಮಾಡುತ್ತಿವೆಯಾ ಎಂಬ ಪ್ರಶ್ನೆ ಇಂದಿನ ಮಾಧ್ಯಮಗಳನ್ನು ನೋಡಿದಾಗ ಉದ್ಭವಿಸುವುದು ಖಂಡಿತ!’ ಹೀಗೆಂದು ಅಭಿಪ್ರಾಯ ವ್ಯಕ್ತಪಡಿಸಿದ್ದು ಉದಯವಾಣಿ ಮಾಧ್ಯಮ ಸಮೂಹದ ಮುಖ್ಯಸ್ಥ ರವಿ ಹೆಗಡೆ. ಆಳ್ವಾಸ್ ನುಡಿಸಿರಿಯಲ್ಲಿ ನಡೆದ `ಮಾಧ್ಯಮ-ನಾಳೆಗಳ ನಿರ್ಮಾಣ’ ವಿಚಾರಗೋಷ್ಠಿಯಲ್ಲಿ ಭಾಗವಹಿಸಿ ಅವರು ಮಾತನಾಡಿದರು. `ಸ್ಪರ್ಧೆ ಇದ್ದಾಗ ಅದರಿಂದ ಹೊರಬರುವ ಫಲಿತಾಂಶ ಯಾವಾಗಲೂ ಗುಣಮಟ್ಟದ್ದಾಗಿರುತ್ತದೆ ಎಂಬುದು ಎಲ್ಲರ ನಂಬಿಕೆ. ದುರದೃಷ್ಟವಶಾತ್ ಮಾಧ್ಯಮಗಳಲ್ಲಿ ಇದಕ್ಕೆ ವ್ಯತಿರಿಕ್ತ ಬದಲಾವಣೆ ಕಂಡು ಬರುತ್ತಿದೆ. ಮಾಧ್ಯಮಗಳಲ್ಲಿ ಪ್ರಬುದ್ಧತೆಯ ಕೊರತೆ ಉಂಟಾಗಿರುವುದರಿಂದ ಈ ನಕಾರಾತ್ಮಕ ಬೆಳವಣಿಗೆ ಉಂಟಾಗುತ್ತಿದೆ’ ಎಂದರು.
`ಮಾಧ್ಯಮಗಳು ಯಾವಾಗಲೂ ನಕಾರಾತ್ಮಕ ಸುದ್ದಿಗಳನ್ನು ಕೊಡುತ್ತವೆ ಎಂಬ ಆರೋಪ ಮಾಧ್ಯಮಗಳ ಮೇಲಿದೆ. ಆದರೆ ಇತ್ತೀಚೆಗೆ ನಡೆಸಿದ ಒಂದು ಟಿ.ಆರ್.ಪಿ. ಸಮೀಕ್ಷೆಯ ಪ್ರಕಾರ ಹೀಗೆ ಮಾಧ್ಯಮಗಳ ಮೇಲೆ ಆರೋಪ ಮಾಡಿದ ಜನರೇ ನಕಾರಾತ್ಮಕ ಸುದ್ದಿಗಳನ್ನು ನೋಡುತ್ತಿದ್ದರು ಎಂಬ ಅಂಶ ಗಮನಕ್ಕೆ ಬಂದಿದೆ. ಆದರೆ ಮಾಧ್ಯಮಗಳು ಈ ಬಗೆಯ ಸುದ್ದಿಯನ್ನು ಕೊಡುವುದರಿಂದ ಸಮಾಜದಲ್ಲಿ ಸಕಾರಾತ್ಮಕ ಬದಲಾವಣೆಗಳಾಗಿದ್ದು ಖಂಡಿತ. ಖಾಸಗಿ ವಾಹಿನಿಯೊಂದು ಸತತವಾಗಿ ಒಂದು ಅಪಘಾತದ ಸುದ್ದಿಯನ್ನು ತೋರಿಸಿದ ಪರಿಣಾಮ ಇಂದು `ಹರೀಶ್ ಸಾಂತ್ವನ’ದಂತಹ ಯೋಜನೆ ರಾಜ್ಯಮಟ್ಟದಲ್ಲಿ ಮಾತ್ರವಲ್ಲದೇ ರಾಷ್ಟ್ರಮಟ್ಟದಲ್ಲೂ ಅನುಷ್ಠಾನಗೊಂಡಿದೆ’ ಎಂದು ಹಲವು ಉದಾಹರಣೆಗಳ ಸಮೇತ ವಿವರಿಸಿದರು.
ಮನರಂಜನಾ ಮಾಧ್ಯಮಗಳು ಕೆಲವು ಮಿತಿಗಳನ್ನು ದಾಟುತ್ತಿರುವುದು ಸತ್ಯ. ಆರ್ಥಿಕ ಯಶಸ್ಸೇ ಒಬ್ಬ ಸಂಪಾದಕನ ಯಶಸ್ಸಿನ ಮಾನದಂಡವಾಗಿರುವುದು ತುಂಬಾ ಅಪಾಯಕಾರಿ ಬೆಳವಣಿಗೆ. ಇದರಿಂದ ಅನೇಕ ಅನರ್ಥಗಳು ಸೃಷ್ಟಿಯಾಗುತ್ತಿರುವುದು ಸುಳ್ಳಲ್ಲ. ಇನ್ನು ದೃಶ್ಯ ಮಾಧ್ಯಮಗಳಿಗಿಂತ ಹೆಚ್ಚಿನ ಅಪಾಯವನ್ನು ತಂದೊಡ್ಡುತ್ತಿರುವುದು ಸಾಮಾಜಿಕ ಜಾಲತಾಣಗಳು. ಸುಳ್ಳನ್ನೇ ಸತ್ಯವನ್ನಾಗಿಸಿ ಜನರನ್ನು ಪ್ರಚೋದಿಸುತ್ತಿರುವ ಕಾರ್ಯ ಈ ಸಾಮಾಜಿಕ ಜಾಲತಾಣಗಳಿಂದಾಗುತ್ತಿದೆ. ಇದನ್ನು ತಡೆಯಲು ಪ್ರಬಲ ಕಾನೂನುಗಳು ಬೇಕೆಂದು ವಿಶ್ಲೇಷಿಸಿದರು.
ಮಾಧ್ಯಮಗಳಲ್ಲಿ ಒಳ್ಳೆಯ ನಾಳೆಗಳು ಸೃಷ್ಟಿಯಾಗಬೇಕೆಂದರೆ ಮಾಧ್ಯಮದವರೇ ಸ್ವಯಂ ಪ್ರೇರಣೆಯಿಂದ ಕೆಲವು ಚೌಕಟ್ಟುಗಳನ್ನು ನಿರ್ಮಿಸಿಕೊಳ್ಳಬೇಕಿದೆ. ಅಲ್ಲದೇ ಓದುಗರೂ ಕೂಡ ಋಣಾತ್ಮಕತೆಯನ್ನು ಬಿಂಬಿಸುವ ಸುದ್ದಿಗಳನ್ನು ನಿರ್ಲಕ್ಷಿಸಿದಾಗ ಒಳ್ಳೆಯ ಬದಲಾವಣೆಗಳನ್ನು ಕಾಣಬಹುದು ಎಂಬ ಅಭಿಪ್ರಾಯವನ್ನು ವ್ಯಕ್ತಪಡಿಸಿದರು.