ತೀಕ್ಷ್ಣ ಗರೆಯ ಕಾರ್ಟೂನು ಪ್ರಬಲ ಅಭಿವ್ಯಕ್ತಿ ಮಾಧ್ಯಮ: ಎಸ್ಪಿ ಅಣ್ಣಾಮಲೈ
ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಯಾವುದೇ ವಿದ್ಯಮಾನವನ್ನೂ ಸೂಕ್ಷ್ಮವಾಗಿ ಅವಲೋಕಿಸಿ ತೀಕ್ಷ್ಣ ಗೆರೆಗಳ ಮೂಲಕ ಚಿತ್ರಿಸುವ ಬುದ್ಧಿಮತ್ತೆ, ಪ್ರತಿಭೆ ಹಾಗೂ ಸಾಮರ್ಥ್ಯ ವ್ಯಂಗ್ಯಚಿತ್ರಕಾರರಿಗಿದೆ. ಪುಟಗಳಲ್ಲಿ ಹೇಳಬೇಕಾದ್ದನ್ನು ಚಿಕ್ಕ ಕಾರ್ಟೂನು ತಿಳಿಸುತ್ತದೆ. ಹಾಗಾಗಿಯೇ ಇಂದಿಗೂ ಕಾರ್ಟೂನು ಅಭಿವ್ಯಕ್ತಿಯ ಪ್ರಬಲ ಮಾಧ್ಯಮವಾಗಿ ಉಳಿದುಕೊಂಡಿದೆ ಎಂದು ಚಿಕ್ಕಮಂಗಳೂರು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ. ಅಣ್ಣಾಮಲೈ ಹೇಳಿದರು
ಕುಂದಾಪುರ ಕಲಾಮಂದಿರದಲ್ಲಿ ಕಾರ್ಟೂನು ಕುಂದಾಪ್ರ ಸಾರಥ್ಯದಲ್ಲಿ ವಿಭಿನ್ನ ಐಡಿಯಾಸ್, ಟಿಎನ್‌ಎಸ್ ’ಕಾರ್ಟೂನು ಹಬ್ಬ’ ಕಾರ್ಯಕ್ರಮಕ್ಕೆ ’ಥಿಂಕ್, ಲಾಫ್ ಎಂಜಾಯ್’ ಎಂಬ ಪಾಸ್‌ವರ್ಡ್ ಬರೆಯುವ ಮೂಲಕ ಚಾಲನೆ ನೀಡಿ ಮಾತನಾಡಿದರು.
ನಮ್ಮ ಒಂದು ಕ್ಷಣದ ನಗುವಿನ ಹಿಂದೆ ವ್ಯಂಗ್ಯಚಿತ್ರಕಾರರ ಹಲವು ಗಂಟೆಗಳ ಆಲೋಚನೆ ಹಾಗೂ ಶ್ರಮವಿದೆ. ಎಲ್ಲವನ್ನೂ ಭಿನ್ನವಾಗಿ ನೋಡುವ ದೃಷ್ಟಿಕೋನವೇ ಅವರಲ್ಲಿನ ಭಿನ್ನ ಆಲೋಚನೆಗಳಿಗೆ ಕಾರಣವಾಗುತ್ತದೆ ಎಂದರು.
ಭಾರತರವು ಹಲವು ವೈರುಧ್ಯಗಳ ದೇಶ. ವ್ಯಂಗ್ಯಚಿತ್ರಕಾರ ಎಲ್ಲವನ್ನೂ ಮೀರಿ, ಹಲವು ಗಡಿಗಳನ್ನು ದಾಟಿ ಬರುತ್ತಾನೆ. ಇದು ಸಹಜವಾಗಿ ಪರ ಪ್ರತಿರೋಧಗಳಿಗೆ ಕಾರಣವಾಗುತ್ತದೆ. ಇಂತಹ ಸಂದರ್ಭದಲ್ಲಿ ನಾವು ವ್ಯಂಗ್ಯಚಿತ್ರಕಾರರ ಬೆಂಬಲಕ್ಕೆ ನಿಲ್ಲಬೇಕಿದೆ. ಅವರ ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಪ್ರೋತ್ಸಾಹಿಸಿ ಅವರಲ್ಲಿನ ಕಾರ್ಟೂನ್ ಹ್ಯೂಮರ್ ಸಾಯಲು ಬಿಡಬಾರದು ಎಂದರು.
ಉಡುಪಿ ಬಾಳಿಗಾ ಆಸ್ಪತ್ರೆಯ ಖ್ಯಾತ ಮನೋವೈದ್ಯ ಡಾ. ಪಿ.ವಿ ಭಂಡಾರಿ ಮಾತನಾಡಿ ಎಂಬಿಎ ಮುಗಿಸಿದ್ದರೂ ಬದುಕಿನ ಹಾದಿಯನ್ನು ಬದಲಿಸಿಕೊಂಡು ಕಾರ್ಟೂನು ಕಲೆಯನ್ನು ವೃತ್ತಿಯಾಗಿ ತೆಗೆದುಕೊಂಡ ಸತೀಶ್ ಆಚಾರ‍್ಯ ಅವರ ನಿರ್ಣಯವೇ ದೊಡ್ಡದು. ಇದರ ನಡುವೆಯೇ ಯಶಸ್ಸಿನ ಉತ್ತುಂಗದಲ್ಲಿದ್ದ ಸತೀಶ್ ಆಚಾರ‍್ಯ ಅವರು ಮುಂಬೈ ಮಹಾನಗರವನ್ನು ಬಿಟ್ಟು ಹುಟ್ಟೂರಿಗೆ ಬಂದು ತಾನೂ ಬೆಳೆಯುವುದಲ್ಲದೇ, ಹುಟ್ಟೂರಿನಲ್ಲಿಯೇ ಕಾರ್ಟೂನು ಪರವಾದ ವಾತಾವರಣ ನಿರ್ಮಿಸಿರುವುದು ವಿಶೇಷವೇ ಸರಿ ಎಂದರು.
ಹಿರಿಯ ಪತ್ರಕರ್ತ ಯು.ಎಸ್. ಶೆಣೈ, ರೋಟರಿ ಕುಂದಾಪುರದ ಅಧ್ಯಕ್ಷ ಉದಯಕುಮಾರ್ ಶೆಟ್ಟಿ, ಯುವ ಮೆರಿಡಿಯನ್‌ನ ಉದಯಕುಮಾರ್ ಶೆಟ್ಟಿ ಮೊದಲಾದವರು ಉಪಸ್ಥಿತರಿದ್ದರು. ಹಿರಿಯ ವ್ಯಂಗ್ಯಚಿತ್ರಕಾರ ರಾಮಕೃಷ್ಣ ಹೇರ್ಳೆ ಅವರನ್ನು ಇದೇ ಸಂದರ್ಭದಲ್ಲಿ ಅಭಿನಂದಿಸಲಾಯಿತು. ವ್ಯಂಗ್ಯಚಿತ್ರಕಾರ ರವಿಕುಮಾರ್ ಗಂಗೊಳ್ಳಿ ಸ್ವಾಗತಿಸಿದರು. ಉಪನ್ಯಾಸಕ ರಂಜಿತ್‌ಕುಮಾರ್ ಶೆಟ್ಟಿ ವಕ್ವಾಡಿ ನಿರೂಪಿಸಿದರು. ಕಾರ್ಟೂನು ಹಬ್ಬದ ಸಂಘಟಕ ಸತೀಶ್ ಆಚಾರ‍್ಯ ವಂದಿಸಿದರು.
ಪೋಟೋಗಳು: ವಿಶ್ವನಾಥ ಮುನ್ನ, ಛಾಯಾ ಸ್ವುಡಿಯೋ