ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಹಳೆಯ 500, 1000 ನೋಟುಗಳ ರದ್ಧತಿಯ ಬಳಿಕ ಹೊಸ ನೋಟುಗಳು ಸಮರ್ಪಕವಾಗಿ ಜನರ ಕೈಸೇರುವಲ್ಲಿ ವಿಳಂಬವಾಗುತ್ತಿರುವುದಿಂದ ಗ್ರಾಮೀಣ ಭಾಗದ ಜನಸಾಮಾನ್ಯರು ತೀರಾ ತೊಂದರೆ ಅನುಭವಿಸುವಂತಾಗಿದೆ. ರೈತರು, ಮೀನುಗಾರರು, ಕೂಲಿ ಕಾರ್ಮಿಕರು, ಚಿಲ್ಲರೆ ವ್ಯಾಪಾರಿಗಳು ಹಾಗೂ ಮಹಿಳೆಯರ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತಿದ್ದು ಕೈಯಲ್ಲಿ ಹಣವಿಲ್ಲದೇ, ವ್ಯವಹಾರ ವಹಿವಾಟು ನಡೆಸದ ಪರಿಸ್ಥಿತಿ ಬಂದೊದಗಿದೆ. ಹಳೆಯ ನೋಟು ನಿಷೇಧಿಸಿ 22 ದಿನಗಳೇ ಕಳೆದರೂ ಹೊಸ ನೋಟುಗಳು ಗ್ರಾಮೀಣ ಭಾಗವನ್ನು ತಲುಪುತ್ತಿಲ್ಲ. ಎರಡು ಸಾವಿರದ ನೋಟುಗಳಗೆ ಚಿಲ್ಲರೆ ದೊರೆಯದ ಸ್ಥಿತಿ ನಿರ್ಮಾಣವಾಗಿದೆ ಎಂದು ಉಡುಪಿ ಜಿಲ್ಲಾ ಪಂಚಾಯತ್ ಮಾಜಿ ಅಧ್ಯಕ್ಷ ಎಸ್. ರಾಜು ಪೂಜಾರಿ ವಿಷಾದ ವ್ಯಕ್ತಪಡಿಸಿದ್ದಾರೆ.
ಗ್ರಾಮೀಣ ಭಾಗದ ಜನರ ಬಹುಪಾಲು ವ್ಯವಹಾರ ನಡೆಯುವುದೇ ಸಹಕಾರಿ ಸಂಘಗಳು ಹಾಗೂ ಸಹಕಾರಿ ಬ್ಯಾಂಕುಗಳ ಮುಖಾಂತರ. ಲಕ್ಷಾಂತರ ರೈತರು, ಕೂಲಿ ಕಾರ್ಮಿಕರ ಉಳಿತಾಯ ಖಾತೆಗಳ ಸಹಕಾರಿ ಸಂಘಗಳಲ್ಲಿವೆ. ಬ್ಯಾಂಕುಗಳಲ್ಲಿ ನೋಟು ವಿನಮಯ, ಠೇವಣಿಗೆ ಅವಕಾಶ ಮಾಡಿಕೊಟ್ಟು ಸಹಕಾರಿ ಸಂಘಗಳಲ್ಲಿ ಈ ಅಧಿಕಾರ ಮೊಟಕುಗೊಳಿಸಿರುವ ಕ್ರಮವೇ ಖಂಡನಾರ್ಹವಾಗಿದೆ. ಬ್ಯಾಂಕುಗಳಿಗೆ ಹೊಸ ನೋಟುಗಳನ್ನು ನೀಡುತ್ತಿರುವ ಆರ್.ಬಿ.ಐ ಸಹಕಾರಿ ಸಂಘಗಳಿಗೆ ಹೊಸ ನೋಟುಗಳು ದೊರೆಯುವಂತೆ ಮಾಡದೇ ಸಂಘವನ್ನು ಅವಲಂಬಿಸಿಕೊಂಡಿದ್ದ ಜನಸಾಮಾನ್ಯರಿಗೆ ತೊಂದರೆಯಾಗುತ್ತಿದೆ.
ಕರಾವಳಿ, ಮಲೆನಾಡು ಭಾಗಗಳಲ್ಲಿ ರೈತರು, ಮೀನುಗಾರರ ಉತ್ಪನ್ನಗಳನ್ನು ಮಾರುಕಟ್ಟೆಯಲ್ಲಿ ಕೊಳ್ಳುವವರಿಲ್ಲ. ರೈತನಿಗೆ ಹಣ ನೀಡಲು ಮಧ್ಯವರ್ತಿಗಳ ಬಳಿ ಹಣವೇ ಇಲ್ಲ. ಕೂಲಿ ಕಾರ್ಮಿಕನಿಗೆ ಸರಿಯಾದ ಕೂಲಿಯೂ ದೊರೆಯುತ್ತಿಲ್ಲ. ಬ್ಯಾಂಕುಗಳಲ್ಲಿ ಹಣ ಪಡೆಯುವ ಗರಿಷ್ಠ ಮಿತಿಯನ್ನು 24,000ರೂ.ಗೆ ಸೀಮಿತಗೊಳಿಸಿರುವುದು ವ್ಯವಹಾರ ನಡೆಸುವವರಿಗೆ ತೊಂದರೆಯಾಗುತ್ತಿರುವುದಲ್ಲದೇ, ಆದಾಯವನ್ನು ನಂಬಿ ಬದುಕು ಸಾಗಿಸುವ ಬಡ ಮಧ್ಯಮ ವರ್ಗದವರ ಬಳಿ ಹಣವೇ ಇಲ್ಲದ ಸ್ಥಿತಿ ಎದುರಾಗಿದೆ.
ಕಾಳಧನವನ್ನು ನಿಯಂತ್ರಿಸುವ ಸಲುವಾಗಿ ಕೇಂದ್ರ ಸರಕಾರ ಕೈಗೊಂಡ ಕ್ರಮವನ್ನು ಸ್ವಾಗತಿಸಬಹುದಾದರೂ ಅದರ ಅನುಷ್ಠಾನದಲ್ಲಿ ಎಡವಿರುವುದು ಸ್ಪಷ್ಟವಾಗಿ ಗೋಚರಿಸುತ್ತಿದೆ. ಇಡೀ ಯೋಜನೆಯಲ್ಲಿ ಗೊಂದಲದ ಸ್ಥಿತಿ ನಿರ್ಮಾಣವಾಗಿದೆ.
ಮಹಿಳೆಯರು ಮನೆಯಲ್ಲಿ ಇಟ್ಟುಕೊಂಡಿರುವ ಹಣ, ಬಡವರು ತಮ್ಮ ತುರ್ತು ಕಾರ್ಯಗಳಿಗಾಗಿ ಪಡೆದಿಟ್ಟುಕೊಂಡ ಹಣ ಎಲ್ಲವನ್ನು ಕಪ್ಪುಹಣವೆಂಬಂತೆ ಪರಿಗಣಿಸುವ ಸ್ಥಿತಿಯುನ್ನು ಕೇಂದ್ರ ಸರಕಾರ ನಿರ್ಮಾಣ ಮಾಡಿದೆ. ಆದಾಯ ತೆರಿಗೆ ವಿನಾಯಿತಿಯ ಪ್ರಮಾಣದಲ್ಲಿಯೂ ಗೊಂದಲ ಇರುವುದರಿಂದ ತಮ್ಮ ಕೈಯಲ್ಲಿರುವ ಹಣವನ್ನು ಹೇಗೆ ಬ್ಯಾಂಕಿಗೆ ಕಟ್ಟುವುದು ಹಾಗೂ ಸಹಕಾರಿ ಸಂಘಗಳಲ್ಲಿ ಮಾತ್ರ ಖಾತೆ ಹೊಂದದ್ದವರು ಹಣ ಠೇವಣಿ ಮಾಡುವ ಕಾರಣಕ್ಕೆ ದೂರ ದೂರದ ಬ್ಯಾಂಕುಗಳಲ್ಲಿ ತೆರಳಿ ಸಾಲಿನಲ್ಲಿ ನಿಲ್ಲಬೇಕಾದ ಸ್ಥಿತಿ ಎದುರಾದದ್ದು ಮಾತ್ರ ಖೇದಕರ.
ಒಟ್ಟನಲ್ಲಿ ಕೇಂದ್ರ ಸರಕಾರದ ಅವ್ಯವಸ್ಥಿತ, ಅಸ್ಪಷ್ಟ ನಿಲುವಿನಿಂದಾಗಿ ರೈತರ ಉತ್ಪನ್ನಗಳಿಗೆ ಬೆಲೆಯಿಲ್ಲ ಕೊಳ್ಳುವವರೂ ಇಲ್ಲ, ಜನಸಾಮಾನ್ಯರ ಬಳಿ ಹಣವಿಲ್ಲ. ಸಹಕಾರಿ ಸಂಘಗಳಿಗೆ ಹೊಸ ನೋಟುಗಳನ್ನು ಬಿಡುಗಡೆ ಮಾಡದೇ ಇರುವುದರಿಂದ ಇಲ್ಲಿ ಉಳಿತಾಯ ಖಾತೆ ಹೊಂದಿದವರಿಗೆ ಈ ಬೇರೆ ಮಾರ್ಗವೂ ಕಾಣುತ್ತಿಲ್ಲ.
ಹಳೆಯ ನೋಟುಗಳ ನಿಷೇಧದ ಬಗೆಗೆ ಸ್ಪಷ್ಟವಾದ ಗುರಿ ಇಲ್ಲದೇ ಏಕಾಏಕಿ ಕೈಗೊಂಡಿರುವ ನಿರ್ಣಯದಿಂದಾಗಿ ಕರಾವಳಿ ಹಾಗೂ ಮಲೆನಾಡು ಭಾಗಗಳ ಜನಸಾಮಾನ್ಯರು, ರೈತರು, ಮಧ್ಯವರ್ತಿಗಳು, ಮೀನುಗಾರರು, ಚಿಲ್ಲರೆ ವ್ಯಾಪಾರಿಗಳು, ಕೂಲಿ ಕಾರ್ಮಿಕರು ತೀವ್ರ ತರನಾದ ತೊಂದರೆ ಅನುಭವಿಸುವಂತೆ ಮಾಡಲಾಗಿದೆ. ಬ್ಯಾಂಕುಗಳನ್ನು ಸರಾಗವಾಗಿ ಹಣಕಾಸಿನ ವಹಿವಾಟು ನಡೆಸಲು ಅವಕಾಶ ನೀಡಿ ಶ್ರೀಮಂತರಿಗೆ ಅವಕಾಶ ಮಾಡಿಕೊಟ್ಟ ಕೇಂದ್ರ ಸರಕಾರ, ಗ್ರಾಮೀಣ ಭಾಗದ ವ್ಯವಹಾರ ನಡೆಯುವ ಸಹಕಾರಿ ಸಂಘಗಳ ವಹಿವಾಟಿಗೆ ಮೇಲೆ ನಿಯಂತ್ರಣ ಹೇರಿ ಸಹಕಾರಿ ಬ್ಯಾಂಕು ಸಂಘಗಳ ಅಧಿಕಾರವನ್ನು ಮೊಟಕುಗೊಳಿಸಿ ಗ್ರಾಮೀಣ ಭಾಗದ ಜನ ತೊಂದರೆ ಅನುಭವಿಸುವಂತೆ ಮಾಡಿರುವ ಕ್ರಮ ಖಂಡನಾರ್ಹ ಎಂದು ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.