ಕಾರ್ಕಳ: ಭಗವಂತನ ಸೇವೆಯೇ ಮುಕ್ತಿಯ ದಾರಿ. ದ್ವೇಷ ನಾಶ ಮಾಡುವುದೇ ನಿಜವಾದ ಭಕ್ತಿ. ಬದುಕು ಬಂಗಾರಗೊಳಿಸುವುದು ಸನಾತನ ಧರ್ಮ. ಎಲ್ಲಕ್ಕಿಂತ ಹೆಚ್ಚಾಗಿ ಮನುಷ್ಯ ಮನುಷ್ಯನಾಗಿ ಬದುಕುವುದೇ ದೊಡ್ಡ ಧರ್ಮ ಎಂದು ಉಡುಪಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್‌ನ ಮಾಜಿ ಅಧ್ಯಕ್ಷ ಅಂಬಾತನಯ ಮುದ್ರಾಡಿ ಅವರು ಹೇಳಿದರು.
ಪೆರ್ವಾಜೆ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಎ. 16ರ ವರೆಗೆ ನಡೆೆಯಲಿರುವ ಶಿಲಾಮಯ ಗರ್ಭಗೃಹ, ಸುತ್ತು ಪೌಳಿಯ ನೂತನ ದೇಗುಲ ಸಮರ್ಪಣೆ, ಪುನಃಪ್ರತಿಷ್ಠೆ, ಅಷ್ಟಬಂಧ, ಸಹಸ್ರಕಲಶಾಭಿಷೇಕ ಸಹಿತ ಬ್ರಹ್ಮಕಲಶ ಪುಣೊತ್ಸವ, ವಾರ್ಷಿಕ ಜಾತ್ರಾ ಮಹೋತ್ಸವದ ಅಂಗವಾಗಿ ಎ. 9 ರಂದು ನಡೆದ ಧಾರ್ಮಿಕ ಸಭೆಯಲ್ಲಿ ಅವರು ಧಾರ್ಮಿಕ ಉಪನ್ಯಾಸ ನೀಡಿದರು.
ಹೊಸ ದೇವಸ್ಥಾನ ನಿರ್ಮಾಣಕ್ಕಿಂತ ಹಳೆ ದೇವಸ್ಥಾನ ಜೀರ್ಣೋದ್ಧಾರ ಮಾಡುವುದು ಪುಣ್ಯದ ಕೆಲಸ. ಬ್ರಹ್ಮಕಲಶ ನೋಡುವುದು ಪುಣ್ಯ. ಮಾಡುವುದು ದೊಡ್ಡ ಪುಣ್ಯ ಎಂದರು.