ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಕುಂದಾಪುರದಲ್ಲಿನ ಬಿಜೆಪಿ ಸದಸ್ಯರ ನಡುವೆ ಯಾವುದೆ ಭಿನ್ನಮತ ಇಲ್ಲ, ನಾವೆಲ್ಲ ಒಟ್ಟಿಗೆ ಇದ್ದೇವೆ. ಕುಂದಾಪುರದ ಪಕ್ಷೇತರ ಶಾಸಕರು ಈಚೆಗೆ ಬೆಂಗಳೂರಿನಲ್ಲಿ ನಡೆದ ಹಿಂದುಳಿದ ವರ್ಗದ ಸಮಾವೇಶಕ್ಕೆ ಪ್ರೇಕ್ಷಕರಾಗಿ ಬಂದಿದ್ದರು. ಬಿಜೆಪಿ ಪಕ್ಷದ ಕಾರ್ಯಕ್ರಮವನ್ನು ಮೆಚ್ಚಿ ಯಾರೇ ಬಂದರೂ ಅವರನ್ನು ಸ್ವಾಗತಿಸುತ್ತೇವೆ ಎಂದು ಸಂಸದೆ ಶೋಭಾ ಕರಂದ್ಲಾಜೆ ಹೇಳಿದರು.
ಕೋಟೇಶ್ವರದ ಕಾರ್ಯಕ್ರಮ ಒಂದರಲ್ಲಿ ಪಾಲ್ಗೊಳ್ಳಲು ಆಗಮಿಸಿದ ವೇಳೆ ಅವರು ಕುಂದಾಪುರ ಬಿಜೆಪಿಗೆ ಪಕ್ಷೇತರ ಶಾಸಕ ಹಾಲಾಡಿ ಶ್ರೀನಿವಾಸ್ ಶೆಟ್ಟಿ ಸೇರ್ಪಡೆಗೊಳ್ಳುತ್ತಿರುವ ಬಗ್ಗೆ ಮಾಧ್ಯಮ ಪ್ರತಿನಿಧಿಗಳ ಪ್ರಶ್ನೆಗೆ ಉತ್ತರಿಸಿದ ಅವರು ರಾಷ್ಟ್ರೀಯ ಪಕ್ಷವಾದ ಬಿಜೆಪಿಗೆ ಇಂತಹವರು ಬರಬಾರದು ಎಂದು ಆಕ್ಷೇಪ ಮಾಡಲು ಯಾರಿಗೂ ಅಧಿಕಾರ ಇಲ್ಲ. ಮಂದಿನ ದಿನದಲ್ಲಿ ಜಯಪ್ರಕಾಶ ಹೆಗ್ಡೆ ಬಿಜೆಪಿಗೆ ಬರುತ್ತೇನೆ ಎಂದರೂ, ಅವರನ್ನು ಸೇರಿಸಿಕೊಳ್ಳಬಹುದಾ ಎನ್ನುವ ಯೋಚನೆಯಲ್ಲಿ ನಾವಿದ್ದೇವೆ. ಯಾರೋ ಒಬ್ಬರೋ, ಇಬ್ಬರೋ, ಆಕ್ಷೇಪ ಮಾಡಿದ್ದರೆ ಅವರನ್ನು ಸಮಾಧಾನ ಪಡಿಸುವ ಪ್ರಯತ್ನ ಮಾಡುತ್ತೇವೆ ಎಂದವರು ಸ್ವಷ್ಟಪಡಿಸಿದರು.
ತನ್ನನ್ನು ಸೇರಿ ಮುಂಬರುವ ಚುನಾವಣೆಗೆ ಗೆಲ್ಲುವ ಅಭ್ಯರ್ಥಿಗಳನ್ನು ಸರ್ವೇ ಮಾಡುವ ಮೂಲಕ ಆಯ್ಕೆ ಮಾಡಲಾಗುತ್ತದೆ. ಜಯಪ್ರಕಾಶ ಹೆಗ್ಡೆ ಇನ್ನೂ ಪಾರ್ಟಿಗೆ ಬಾರದೆ ಇರುವುದರಿಂದಾಗಿ ಅವರು ಯಾವ ಕ್ಷೇತ್ರದ ಅಭ್ಯರ್ಥಿ ಎನ್ನುವುದು ಅಪ್ರಸ್ತುತ ಎಂದು ತಿಳಿಸಿದ ಅವರು ಕೇಂದ್ರ ಸರ್ಕಾರದ ಸಿಆರ್‌ಎಫ್ ಯೋಜನೆಯಡಿಯಲ್ಲಿ ಉಡುಪಿ ಜಿಲ್ಲೆಗೆ ೨೦೦ ಕೋಟಿ ರೂಪಾಯಿಯ ಯೋಜನೆ ಮಂಜೂರಾಗಿದೆ ಎಂದರು.
ರಾಜ್ಯ ಸರಕಾರದ ವಿರುದ್ಧ ಕಿಡಿ:
ಕಳೆದ ಮೂರುವರೆ ವರ್ಷದಿಂದ ರಾಜ್ಯದಲ್ಲಿರುವ ಕಾಂಗ್ರೆಸ್ ಸರ್ಕಾರ ಅಭಿವೃದ್ಧಿ ಕೆಲಸಗಳನ್ನು ಸಂಪೂರ್ಣವಾಗಿ ನಿರ್ಲಕ್ಷ್ಯ ಮಾಡಿದೆ. ರಾಜ್ಯದಲ್ಲಿ ಭೀಕರ ಬರಗಾಲವಿದ್ದರೂ, ಯಾವುದೆ ಇಲಾಖೆಗೂ ಅಭಿವೃದ್ಧಿ ಯೋಜನೆಗಾಗಿ ಹಣವನ್ನು ಬಿಡುಗಡೆ ಮಾಡ್ತಾ ಇಲ್ಲ. ಕಳೆದ ಬಾರಿಗಿಂತ ಸರಾಸರಿ ಶೇ.೨೫ ರಷ್ಟು ಮಳೆ ಕಡಿಮೆ ಬಿದ್ದಿರುವುದರಿಂದಾಗಿ ಕರಾವಳಿಯ ಇಲ್ಲಿನ ಬಹುತೇಕ ಗ್ರಾಮಗಳಲ್ಲಿ ಕುಡಿಯುವ ನೀರಿಗೆ ತೊಂದರೆ ಇದೆ ಎಂದು ರಾಜ್ಯ ಸರ್ಕಾರದ ಕಾರ‍್ಯ ವೈಖರಿಯ ಕುರಿತು ಸಂಸದೆ ಶೋಭಾ ಕರಂದ್ಲಾಜೆ ಆಕ್ಷೇಪ ವ್ಯಕ್ತಪಡಿಸಿದರು.
ಜಿಲ್ಲಾ ಪಂಚಾಯಿತಿಗಳಿಗೆ ಸಮರ್ಪಕವಾಗಿ ಅನುದಾನ ಬಿಡುಗಡೆಯಾಗ್ತಾ ಇಲ್ಲ. ಈ ಬಾರಿ ಬಿಡುಗಡೆಯಾದ ಹಣವೆಲ್ಲ, ಕಳೆದ ಬಾರಿ ಬಾಕಿ ಪಾವತಿಗೆ ಹೋಗ್ತಾ ಇದೆ. ಹೊಸ ಕೊಳವೆ ಬಾವಿ ತೆಗೆಯಲು, ಪೈಪ್ ಲೈನ್ ತೆಗೆಯಲು ಅನುದಾನ ನೀಡ್ತಾ ಇಲ್ಲ. ಕುಡಿಯುವ ನೀರಿಗೆ ಸಂಬಂಧಿಸಿದಂತೆ ಕಳೆದ ವರ್ಷದ ೩೪ ಕೋಟಿ ರೂಪಾಯಿ ಪಾವತಿ ಮಾಡಲು ಬಾಕಿ ಇದೆ. ಉಡುಪಿ ಜಿಲ್ಲೆಯ ಪರಿಸ್ಥಿತಿ ಈ ರೀತಿ ಆದರೆ ಉಳಿದ ಜಿಲ್ಲೆಗಳ ಪರಿಸ್ಥಿತಿ ಏನು ಎಂದು ಕಳವಳ ವ್ಯಕ್ತಪಡಿಸಿದ ಅವರು ರಾಜ್ಯ ಸರ್ಕಾರದ ಗ್ರಾಮೀಣಾಭಿವೃದ್ದಿ ಇಲಾಖೆಯಡಿಯಲ್ಲಿ ೨೨೦೦೦ ಸಾವಿರ ಕೋಟಿ ರೂಪಾಯಿ ದುರುಪಯೋಗ ಆಗಿದೆ ಎನ್ನುವುದನ್ನ ಅಧಿವೇಶನದಲ್ಲಿ ಸಂಬಂಧಿಸಿದ ಸಚಿವರೆ ಒಪ್ಪಿಕೊಂಡಿದ್ದಾರೆ ಎಂದಾದರೆ ಅಲ್ಲಿವರೆಗೆ ಸರ್ಕಾರ ಎಲ್ಲಿಗೆ ಹೋಗಿತ್ತು ಎಂದು ಖಾರವಾಗಿ ಪ್ರಶ್ನಿಸಿದರು.
ಸರ್ಕಾರದ ಮೂಗಿನ ನೇರಕ್ಕೆ ಭೃಷ್ಟಾಚಾರ ನಡೆಯುತ್ತಿರುವುದರಿಂದಾಗಿ ಹಲವು ಅಧಿಕಾರಿಗಳು ಭೃಷ್ಟಾಚಾರ ಪ್ರಕರಣಗಳಲ್ಲಿ ಸಿಲುಕಿಕೊಂಡಿದ್ದಾರೆ. ಸಿಬಿಐ ಅಧಿಕಾರಿಗಳು ಬಂಧಿಸಿರುವ ಚಿಕ್ಕರಾಯಪ್ಪ ಹಾಗೂ ಜಯಚಂದ್ರ ಅವರು ಮಂತ್ರಿಗಳ ಹೆಸರು ಹೇಳ್ತಾ ಇದ್ದಾರೆ. ಮಂತ್ರಿಗಳಿಗೆ ದುಡ್ಡು ಕೊಡೋದಕ್ಕಾಗಿ ಭೃಷ್ಟಾಚಾರ ಮಾಡಿದ್ದೇವೆ ಎಂದು ಸಿಬಿಐ ಮುಂದೆ ಜಯಚಂದ್ರ ಬಾಯ್ಬಿಟ್ಟಿದ್ದಾರೆ. ಸಂಪುಟ ಸಚಿವರು ಆಶ್ಲೀಲವಾಗಿ ನಡೆದುಕೊಳ್ತಾ ಇದ್ದಾರೆ. ಮೇಟಿ ಪ್ರಕರಣದ ಬಗ್ಗೆ ಮುಖ್ಯಮಂತ್ರಿಗಳಿಗೆ ೨ ತಿಂಗಳ ಮೊದಲೆ ಮಾಹಿತಿ ಇದ್ದರೂ, ಅವರಿಂದ ರಾಜಿನಾಮೆ ಪಡೆದುಕೊಂಡಿಲ್ಲ. ಕಾಂಗ್ರೆಸ್ ಪಕ್ಷ ಆಡಳಿತವಿರುವ ರಾಜ್ಯಗಳ ಪೈಕಿ ಕರ್ನಾಟಕವೇ ದೊಡ್ಡ ರಾಜ್ಯವಾಗಿರುವುದರಿಂದ, ಇಲ್ಲಿನ ಸರ್ಕಾರದ ಕೃಪಾ ಕಟಾಕ್ಷದಿಂದ ಪಕ್ಷ ನಡೆಯುತ್ತಿದೆ. ಹಾಗಾಗಿ ಇಲ್ಲಿ ನಡೆಯುತ್ತಿರುವ ಭೃಷ್ಟಾಚಾರಗಳ ಕುರಿತು ಸೋನಿಯಾ ಗಾಂಧಿ ಹಾಗೂ ರಾಹುಲ್ ಗಾಂಧಿ ಏನು ಮಾತನಾಡ್ತಾ ಇಲ್ಲ ಎಂದು ದೂರಿದ ಅವರು ಪಾಪದ ಕೊಡ ತುಂಬಿರುವ ಹಾಗೂ ನೈತಿಕತೆ ಇಲ್ಲದ ಅದಕ್ಷ ಸರ್ಕಾರವನ್ನು ಕೂಡಲೇ ಕಿತ್ತು ಹಾಕುವ ತೀರ್ಮಾನಕ್ಕೆ ರಾಜ್ಯದ ಜನ ಬಂದಿದ್ದಾರೆ ಎಂದರು. ಬಿಜೆಪಿ ಜಿಲ್ಲಾಧ್ಯಕ್ಷ ಮಟ್ಟಾರು ರತ್ನಾಕರ ಹೆಗ್ಡೆ, ರಾಜ್ಯ ಬಿಜೆಪಿ ಕಾರ್ಯದರ್ಶಿ ತಿಂಗಳೆ ವಿಕ್ರಮಾರ್ಜುನ್ ಹೆಗ್ಡೆ ಇದ್ದರು.